Namma Metro: ಬೆಂಗಳೂರು ಮೆಟ್ರೋ ಜಾಲದಲ್ಲಿ ಈ ನಿಲ್ದಾಣದಲ್ಲಿ ಮೊದಲ PSD ವ್ಯವಸ್ಥೆ...Metro Pink Line
ಬೆಂಗಳೂರು, ನವೆಂಬರ್ 30: ಬೆಂಗಳೂರು ಮೆಟ್ರೋ ತನ್ನ ಸಾರಿಗೆ ಸೇವೆ, ದಕ್ಷತೆ, ಹೊಸ ಹೊಸ ಉಪಕ್ರಮಗಳಿಂದ ಸುದ್ದಿಯಾಗುವುದರ ಮಧ್ಯೆ, ಪ್ರಯಾಣಿಕರು ಹಳಿಗೆ ಜಿಗಿದು ಆತ್ಮಹತ್ಯೆ, ಹಳಿಗೆ ಜಿಗಿಯುವ ಯತ್ನ ಸೇರಿ ಹಲವು ವಿಚಾರಗಳಿಂದಲೂ ಸುದ್ದಿಯಲ್ಲಿತ್ತು. ಇಂತಹ ಅವಘಡ ತಪ್ಪಿಸಲು, ಪ್ರಯಾಣಿಕರು ಹಳಿಗಳತ್ತ ಹೋಗುವುದು ತಡೆಯಲು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ವ್ಯವಸ್ಥೆ ಅಳವಡಿಸಲು BMRCL ಮುಂದಾಗಿತ್ತು. ಇದೀಗ ನಗರದ ಮೊದಲ ಪಿಎಸ್‌ಡಿ ವ್ಯವಸ್ಥೆ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ.
ಹೌದು.. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಮ್ಮ ಮೆಟ್ರೋ ಯೆಲ್ಲೋ ಮಾರ್ಗದಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಸುವುದಾಗಿ ತಿಳಿಸಿ ಎರಡು ವರ್ಷಗಳು ಕಳೆದವು. ಆರ್.ವಿ.ರಸ್ತೆ ಬೊಮ್ಮಸಂದ್ರ ಮಾರ್ಗದ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಗುಲಾಬಿ ಮಾರ್ಗದಲ್ಲಿ ಮೊದಲ ಪಿಎಸ್‌ಡಿ ವ್ಯವಸ್ಥೆಗೆ ಪ್ಲಾನ್ ಮಾಡಲಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣಕ್ಕೆ ಬ್ಯಾರಿಕೇಡ್ ರೀತಿಯಲ್ಲಿ ಸ್ಟೀಲ್ ಗೇಟ್ ರೀತಿಯಲ್ಲಿ ಪ್ಲಾಟ್‌ಫಾರ್ಮ್ ಮೇಲೆ ಅಳವಡಿಸಲಾಗಿದ್ದನ್ನು ಗಮನಿಸಬೇಕು.

ಇನ್ನೂ ನೇರಳೆ ಮಾರ್ಗದಲ್ಲಿನ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಭೂಗತದಲ್ಲಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 21 ಕಿಲೋ ಮೀಟರ್‌ವರೆಗೆ ಗುಲಾಬಿ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗವು ನೇರಳೆ ಮಾರ್ಗವನ್ನು ಸಂಧಿಸಲಿದ್ದು, ಎಂಜಿ ರಸ್ತೆ ನಿಲ್ದಾಣ ಇಂಟರ್‌ಚೇಂಜ್ ನಿಲ್ದಾಣವಾಗಲಿದೆ.
ದೆಹಲಿ, ಮುಂಬೈ ಮಾದರಿಯಲ್ಲಿ ಪಿಎಸ್‌ಡಿ ವ್ಯವಸ್ಥೆ
ಈ ನಿಲ್ದಾಣದಲ್ಲಿ ಪ್ರಯಾಣಿಕರು ಹಳಿಯತ್ತ ನುಗ್ಗುವುದನ್ನು ತಡೆಯಲು ಮೊದಲ ಪಿಎಸ್‌ಡಿ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ದೆಹಲಿಯಿ, ಮುಂಬೈ, ಚನ್ನೈನಲ್ಲಿ ಇಂತಹ ವ್ಯವಸ್ಥೆ ಇದೆ. ಅದರಂತೆ ಬೆಂಗಳೂರಿನಲ್ಲಿ ಆದರೆ ಹಳಿಗೆ ಜಿಗಿಯುವುದು, ಆತ್ಮಹತ್ಯೆ ಯತ್ನ ತಡೆಯುವುದರ ಜೊತೆಗೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಿದಂತಾಗುತ್ತದೆ. ಈಗಾಗಲೇ ಇರುವ ಹಾಲಿ ನಿಲ್ದಾಣಗಳಲ್ಲಿ ಈ ಪಿಎಸ್‌ಡಿ ನಿರ್ಮಾಣ ಕಷ್ಟಸಾಧ್ಯ ಎನ್ನಲಾಗಿದೆ. ಹೀಗಾಗಿ ಹೊಸ ನಿಲ್ದಾಣಗಳನ್ನು BMRCL ಆಯ್ಕೆ ಮಾಡಿಕೊಂಡಿದೆ.
ಚೀನಾ ಮೂಲದ ಸಂಸ್ಥೆಯು ಎಂಜಿ ರಸ್ತೆ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆಗೆ ಗುತ್ತಿಗೆ ಪಡೆದುಕೊಂಡಿದೆ. ಸದ್ಯ ಪ್ರಾಯೋಗಿಕವಾಗಿ ಸ್ಥಾಪಿಸಿ ನಂತರದ ದಿನಗಳಲ್ಲಿ ಅದರ ಕಾರ್ಯದಕ್ಷತೆ, ತಾಂತ್ರಿಕ ತೊಂದರೆ ನೋಡಿಕೊಂಡು ಇದೇ ಗುಲಾಬಿ ಮಾರ್ಗದ ಇತರ 12 ನಿಲ್ದಾಣಗಳಲ್ಲಿ ಪಿಎಸ್‌ಡಿ ಸ್ಥಾಪಿಸಲು BMRCL ಪ್ಲಾನ್ ಮಾಡಿಕೊಂಡಿದೆ.
2026ಕ್ಕೆ ಪಿಂಕ್ ಲೈನ್ ಓಪನ್
ನಾಗವಾರ-ಕಾಳೇನ ಅಗ್ರಹಾರವರೆಗಿನ ಗುಲಾಬಿ ಮಾರ್ಗದ 21ಕಿ.ಮೀ.ಯಲ್ಲಿ ಮುಂದಿನ ವರ್ಷ 2026ರ ಮೇ ತಿಂಗಳ ಹೊತ್ತಿಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಎತ್ತರಿಸಿದ ಮಾರ್ಗ ತೆರೆಯುವ ನಿರೀಕ್ಷೆ ಇದೆ. ಡೈರಿ ವೃತ್ತದಿಂದ ಎಂಜಿ ರಸ್ತೆ ಮಾರ್ಗವಾಗಿ ನಾಗವಾರವರೆಗಿನ ಭೂಗತ ಮಾರ್ಗವು ಅದೇ ವರ್ಷ ಡಿಸೆಂಬರ್‌ಗೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications