Bengaluru rain: ಜುಲೈ 30ರವರೆಗೆ ಮಳೆ, ಹವಾಮಾನ ವರದಿ
ಬೆಂಗಳೂರು, ಜುಲೈ 27: ಮುಂಗಾರು ಮಳೆಯು ಕರಾವಳಿ ಮತ್ತು ಉತ್ತರ ಒಳನಾಡಿನ ಜೊತೆಗೆ ದಕ್ಷಿಣ ಒಳನಾಡಿಗೂ ಮಳೆ ವಿಸ್ತರಿಸಿದೆ. ಪರಿಣಾಮ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಮತ್ತೆ ಮಳೆ ಅಬ್ಬರ ಶುರುವಾಗಿದೆ. ಗುರುವಾರ ಬೆಳಗ್ಗೆವರೆಗೆ ಯಲಹಂಕ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.
ಕಣ್ಮರೆಯಾಗಿದ್ದ ಮಳೆ ಮೂರು ನಾಲ್ಕು ದಿನಗಳಿಂದ ಮತ್ತೆ ಆರಂಭವಾಗಿದ್ದು, ಇದು ಮುಂದಿನ ಮೂರು ದಿನ ಅಂದರೆ ಜುಲೈ 30ರವರೆಗೂ ಮುಂದುವರಿಯಲಿದೆ. ನೆನ್ನೆ ಬುಧವಾರ ನಗರದ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಸುರಿದಿದೆ. ಕೆಲವೆಡೆ ತಡರಾತ್ರಿವರೆಗೂ ಸುರಿದಿದೆ. ಯಲಹಂಕ ವ್ಯಾಪ್ತಿಯಲ್ಲಿ ಅಧಿಕ 17 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಮುಂದಿನ ಮೂರು ದಿನ ಬಹುತೇಕ ಬೆಂಗಳೂರಿನ ತುಂಬೆಲ್ಲ ತುಂತುರು, ಹಗುರ ಕೆಲವೆಡೆ ಜಿಟಿ ಜಿಟಿ ಮಳೆ ಆಗಲಿದೆ. ಇದರಿಂದಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಚಳಿ ಹೆಚ್ಚಾಗಲಿದೆ. ನಗರಕ್ಕೆ ಭಾರೀ ಮಳೆ ಮುನ್ಸೂಚನೆ ಇಲ್ಲ. ಆದರೆ ನಿರಂತರವಾಗಿ ಹಗುರ-ಸಾಧಾರಣ ಮಳೆ ಮುನ್ಸೂಚನೆ ಇದೆ. ಇದರ ಹೊರತು ಯಾವುದೇ ಗಂಭೀರ ಬದಲಾವಣೆಗಳು ಇಲ್ಲ.
ನಗರದಲ್ಲಿ ಜುಲೈ 30ರ ತನಕ ಗರಿಷ್ಠ ತಾಪಮಾನ 27ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಯಲಹಂಕ ವ್ಯಾಪ್ತಿಯಲ್ಲಿ ಅಧಿಕ ಮಳೆ
ಬುಧವಾರ ತಡರಾತ್ರಿವರೆಗೆ ಯಲಹಂಕದ ಚೌಡೇಶ್ವರಿ, ಅಟ್ಟೂರು, ಯಲಹಂಕ ಕೆಎಸ್‌ಎನ್‌ಎಂಸಿ ಕ್ಯಾಂಪಸ್, ಹೊರಮಾವು, ಯಶವಂತಪುರ, ಕೊಡಿಗೇಹಳ್ಳಿ, ಬಸವನಗುಡಿ, ಜಕ್ಕೂರು, ವಿದ್ಯಾರಣ್ಯಪುರ, ಹಂಪಿನಗರ, ವಿಜಯನಗರ, ನಾಯಂಡಹಳ್ಳಿ, ಕೆಂಗೇರಿ, ಬನಶಂಕರಿ, ಮೆಜೆಸ್ಟಿಕ್ ಸುತ್ತಮುತ್ತ, ಕೋರಮಂಗಲ, ಮಡಿವಾಳ, ಮಲ್ಲೇಶ್ವರಂ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳೆ ಬಿದ್ದಿದೆ.

ಈ ಜಿಟಿ ಜಿಟಿ ಮಳೆಯಿಂದಾಗಿ ನಗರದ ಬೆಂಗಳೂರಿನ ಅನೇಕ ಕಡೆಗಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಬೆಳ್ಳಂದೂರು ಡೌನ್ ರಾಂಪ್ ಬಳಿ, ಇಕೋಸ್ಪೇಸ್ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡವು. ಹೀಗಾಗಿ ಸಂಜೆ ಹೆಚ್ಚು ಜನರು ಓಡಾವು ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇಬ್ಬಲೂರು ಕಡೆ ತೆರಳಬೇಕಿದ್ದ ವಾಹನಗಳು ಮಳೆಗೆ ಮುಂದೆ ಚಲಿಸಲಾಗದೇ ಜಲಾವೃತ ರಸ್ತೆಗಲ್ಲಿ ನಿಂತವು, ವಾಹನ ಸವಾರರು, ಪ್ರಮಾಣಿಕರು ಪರದಾಡಿದ ಘಟನೆ ನಡೆಯಿತು.
ಇದಲ್ಲದೇ ರಾಜಾಜಿನಗರ, ಉಳ್ಳಾಲ ಉಪನಗರ,ಟೌನ್ ಹಾಲ್, ಕೆ.ಆರ್.ವೃತ್ತ, ಕೆ.ಆರ್ ಮಾರುಕಟ್ಟೆ ಮತ್ತು ಕೆಆರ್ ಮಾರುಕಟ್ಟೆ ಮೇಲ್ಸೇತುವೆಯಲ್ಲಿ ಮಳೆ ನೀರು ತುಂಬಿ ಹರಿಯಿತು. ಇದರಿಂದ ವ್ಯಾಪಾರಸ್ಥರಿಗು ತೊಂದರೆ ಉಂಟಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಕೊಡೆ, ರೇನ್ ಕೋರ್ಟ್ ಧರಿಸಿದರು.












Click it and Unblock the Notifications