Bengaluru traffic: ವಾರಾಂತ್ಯದಲ್ಲೂ ಕಂಡುಬಂದ ಭಾರೀ ಸಂಚಾರ ದಟ್ಟಣೆ- ಹೈರಾಣವಾದ ಬೆಂಗಳೂರು ಜನ, ಏನು ಕಾರಣ?
ಬೆಂಗಳೂರು, ಅಕ್ಟೋಬರ್ 02: ಸತತ ಐದು ದಿನಗಳ ರಜೆ ಇದ್ದರೂ, ಬೆಂಗಳೂರಿನಲ್ಲಿ ಶನಿವಾರ ಹಾಗೂ ಭಾನುವಾರವೂ ಟ್ರಾಫಿಕ್ ಸಮಸ್ಯೆಗಳು ಕಾಣಿಸಿಕೊಂಡಿವೆ. ಜೆಸಿ ರಸ್ತೆ, ಬಳ್ಳಾರಿ ರಸ್ತೆ, ಅರಮನೆ ರಸ್ತೆ, ಹಳೆ ಮದ್ರಾಸ್ ರಸ್ತೆ ಸೇರಿದಂತೆ ನಗರ ಪ್ರಮುಖ ರಸ್ತೆಗಳಲ್ಲಿ ವಾರಾಂತ್ಯವೂ ಭಾರೀ ವಾಹನ ದಟ್ಟಣೆ ಮುಂದುವರೆದಿದೆ.
ವಾರಾಂತ್ಯದಲ್ಲಿ ಬೆಳಿಗ್ಗೆ ಬಹುತೇಕ ರಸ್ತೆಗಳು ಖಾಲಿಯಾಗಿದ್ದರೂ, ಮಧ್ಯಾಹ್ನದ ವೇಳೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಾಹನಗಳ ದಟ್ಟಣೆಯು ರಾತ್ರಿವರೆಗೂ ಮುಂದುವರೆದಿರುವುದು ಕಂಡುಬಂದಿದೆ.

ಏರ್‌ಪೋರ್ಟ್ ರಸ್ತೆಯಲ್ಲಿ ಭಾರೀ ದಟ್ಟಣೆ: ನಂದಿ ಹಿಲ್ಸ್ ಎಫೆಕ್ಟ್
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎಸ್ಟೀಮ್ ಮಾಲ್ ಹಾಗೂ ಹೆಬ್ಬಾಳ ಮೇಲ್ಸೇತುವೆ ಬಳಿ ಮಧ್ಯಾಹ್ನ ವಿಪರೀತ ಟ್ರಾಫಿಕ್ ಜಾಮ್ ಇತ್ತು ಎಂದು ವರದಿಯಾಗಿದೆ. ಪ್ರಯಾಣಿಕರು ಸುಮಾರು 30 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸಿದ್ದಾರೆ.
ವಾರಾಂತ್ಯದಲ್ಲಿ ಸಾವಿರಾರು ಬೆಂಗಳೂರಿಗರು ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ. ಇದು ಎಸ್ಟಿಮ್ ಮಾಲ್ ಹಾಗೂ ಹೆಬ್ಬಾಲ ಫೈ ಓವರ್ ಬಳಿ ವಾಹನ ದಟ್ಟಣೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕುಮಾರ ಕೃಪಾ ರಸ್ತೆ ಬಳಿ ಸಂಚಾರ ದಟ್ಟಣೆ: ಸಂಚಾರ ಪೊಲೀಸರ ತಡೆ ಕಾರಣ
ಬಳ್ಳಾರಿ ರಸ್ತೆಯಿಂದ ಕುಮಾರ ಕೃಪಾ ರಸ್ತೆಗೆ ತೆರಳಲು ಸಂಚಾರ ಪೊಲೀಸರು ತಡೆಯೊಡ್ಡಿದ್ದರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿವಾನಂದ ವೃತ್ತದ ಕಡೆಗೆ ತೆರಳುತ್ತಿಬೇಕಿದ್ದ ಬಸ್‌ಗಳು ಮಾರ್ಗ ಬದಲಿಸಿ ವಿಧಾನಸೌಧದ ಮೂಲಕ ಮೆಜೆಸ್ಟಿಕ್‌ಗೆ ತೆರಳಿವೆ. ವಾರಾಂತ್ಯದಲ್ಲಿ ಕುಮಾರ ಕೃಪಾ ರಸ್ತೆ ಬಳಿ ಸಂಚಾರ ದಟ್ಟಣೆ ಎಂದಿಗಿಂತಲೂ ಹೆಚ್ಚಿತ್ತು ಎಂದು ವರದಿಯಾಗಿದೆ.

ದಕ್ಷಿಣ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ: ಗಣೇಶ ವಿಸರ್ಜನೆ ಕಾರಣ
ದಕ್ಷಿಣ ಬೆಂಗಳೂರಿನಲ್ಲಿಯೂ ಟ್ರಾಫಿಕ್ ಸಮಸ್ಯೆ ವ್ಯಾಪಕವಾಗಿತ್ತು ಎಂದು ತಿಳಿದಬಂದಿದೆ. ಬಸವನಗುಡಿ ಮತ್ತು ಕೆಆರ್ ಮಾರುಕಟ್ಟೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕುರಿತು ವರದಿಯಾಗಿದೆ. ಬಸವನಗುಡಿಯಿಂದ ಕೆಆರ್ ಮಾರುಕಟ್ಟೆಗೆ ಪೀಕ್ ಅವರ್‌ಗಳಲ್ಲಿ ಪ್ರಯಾಣಿಸಲು 15 ರಿಂದ 20 ನಿಮಿಷಗಳು ಬೇಕಾಗುತ್ತದೆ. ಆದರೆ, ಭಾನುವಾರ ಸಂಜೆ ಕನಿಷ್ಟ ಒಂದು ಗಂಟೆ ತೆಗೆದುಕೊಂಡಿದೆ ಎಂದು ವಾಹನ ಸವಾರರು ಹೇಳಿದ್ದಾರೆ.
ದಕ್ಷಿಣ ಬೆಂಗಳೂರಿನಲ್ಲಿ ಬಹುತೇಕ ಸಾರ್ವಜನಿಕ ಗಣಪತಿಗಳನ್ನು ನಿನ್ನೆ ವಿಸರ್ಜನೆ ಮಾಡಲಾಗಿದೆ. ಈ ವಿಸರ್ಜನೆ ಮೆರವಣಿಗಗಳಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಮೆರವಣಿಗಗಳು ನಿಧಾನವಾಗಿ ಸಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.
ಗಣಪತಿ ವಿಸರ್ಜನೆ ಸ್ಥಳಗಳ ಸುತ್ತಮುತ್ತ ಪೊಲೀಸರು ಬ್ಯಾರಿಕೇಟ್ ಹಾಕಿದ್ದರಿಂದ ಸವಾರರು ಮಾರ್ಗಗಳನ್ನು ಬದಲಿಸಬೇಕಾಗಿದೆ. ಇದು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಔಟರ್ ರಿಂಗ್ ರಸ್ತೆಯಲ್ಲಿ ದಟ್ಟಣೆ: ಮೆಟ್ರೊ ಕಾಮಗಾರಿ ಕಾರಣ
ಇದೇ ರೀತಿ ಔಟರ್ ರಿಂಗ್ ರಸ್ತೆಯಲ್ಲಿ ವಾರಾಂತ್ಯದಲ್ಲಿಯೂ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿದೆ. ಈ ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದರಲ್ಲೂ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಕಾರಣ, ಪ್ರಮುಖ ಮೆಟ್ರೋ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications