ಇಂದು ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಟ್ರಯಲ್ ರನ್
ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಓಡಾಟಕ್ಕೆ ಇದೀಗ ವೇದಿಕೆ ಸಜ್ಜಾಗಿದೆ. ಕರಾವಳಿ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಈ ಹೈಸ್ಪೀಡ್ ರೈಲಿನ ಟೈಮಿಂಗ್ ಟ್ರಯಲ್ ಇಂದು (ಸೆಪ್ಟೆಂಬರ್ 5) ನಡೆಯಲಿದೆ.
ಭಾರತೀಯ ರೈಲ್ವೆ ಮಂಡಳಿಯ ಸೂಚನೆಯ ಮೇರೆಗೆ ಈ ಟ್ರಯಲ್ ರನ್ ಆಯೋಜಿಸಲಾಗಿದ್ದು, ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ವರೆಗೆ 16 ಬೋಗಿಗಳ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ.

ಆಗಸ್ಟ್ ತಿಂಗಳಿನಲ್ಲಿ ಯಶವಂತಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವೆ 20 ಬೋಗಿಗಳ ಎಸಿ ರೇಕ್ ಬಳಸಿ ನಡೆಸಲಾದ ತಾಂತ್ರಿಕ ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿತ್ತು. ಇದರ ಮುಂದುವರಿದ ಭಾಗವಾಗಿ ಇಂದು 16 ಬೋಗಿಗಳ ಎಸಿ ರೇಕ್ ಅಳವಡಿಕೆಯೊಂದಿಗೆ ಸಂಪೂರ್ಣ ಮಾರ್ಗದ ಟೈಮಿಂಗ್ ಟ್ರಯಲ್ ನಡೆಯುತ್ತಿದೆ.
ಯಶವಂತಪುರದಿಂದ ಹಾಸನವರೆಗಿನ ಪರೀಕ್ಷೆಯನ್ನ ಬೆಂಗಳೂರು ರೈಲ್ವೆ ವಿಭಾಗ ನಿರ್ವಹಿಸಿದರೆ, ಹಾಸನದಿಂದ ಮಂಗಳೂರುವರೆಗಿನ ಜವಾಬ್ದಾರಿಯನ್ನು ಮೈಸೂರು ವಿಭಾಗ ಹೊತ್ತುಕೊಂಡಿದೆ. ಉನ್ನತ ಮಟ್ಟದ ಅಧಿಕಾರಿಗಳು ಈ ರೈಲಿನ ವೇಗ ಮತ್ತು ಸಮಯ ಪಾಲನೆಯ ಬಗ್ಗೆ ಜಂಟಿ ತಪಾಸಣೆ ನಡೆಸಲಿದ್ದಾರೆ.
ಶಿರಾಡಿ ಘಾಟ್ ರೈಲು ಮಾರ್ಗದ ಸವಾಲುಗಳು
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಲೋಮೀಟರ್ ಉದ್ದದ ಘಾಟ್ ವಿಭಾಗ ರೈಲ್ವೆ ಇಲಾಖೆಗೆ ಅತಿ ದೊಡ್ಡ ಸವಾಲಾಗಿತ್ತು. ಈ ಮಾರ್ಗದಲ್ಲಿ ಒಟ್ಟು 57 ಸುರಂಗಗಳು, 258 ಸೇತುವೆಗಳು ಮತ್ತು 108 ತೀಕ್ಷ್ಣ ತಿರುವುಗಳಿವೆ.
ಅಲ್ಲದೆ, 1:50 ಅನುಪಾತದ ಕಡಿದಾದ ಇಳಿಜಾರು ಹಾಗೂ ಮಾನ್ಸೂನ್ ಸಮಯದಲ್ಲಿ ಎದುರಾಗುವ ಭೂಕುಸಿತದ ಭೀತಿ ಇರುವುದರಿಂದ ಗಂಟೆಗೆ ಕೇವಲ 30 ಕಿ.ಮೀ ವೇಗಮಿತಿಯನ್ನ ವಿಧಿಸಲಾಗಿದೆ. ಈ ಮೊದಲು ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ಹಿಂದೇಟು ಹಾಕಿತ್ತು. ಆದರೆ, ವಂದೇ ಭಾರತ್ ರೈಲಿನಲ್ಲಿರುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕ್ ತಂತ್ರಜ್ಞಾನ ಈ ಸವಾಲನ್ನ ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ಒಂದು ವೇಳೆ ರೈಲಿನ ವೇಗ ಮಿತಿಗಿಂತ ಹೆಚ್ಚಾದರೆ, ಈ ಅತ್ಯಾಧುನಿಕ ವ್ಯವಸ್ಥೆಯು ರೈಲನ್ನು ತಾನಾಗಿಯೇ ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.
ಪ್ರಯಾಣಿಕರಿಗೆ ಉಳಿತಾಯವಾಗಲಿದೆ 3 ರಿಂದ 4 ಗಂಟೆ
ಪ್ರಸ್ತುತ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ ಸುಮಾರು 11 ರಿಂದ 12 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ವಂದೇ ಭಾರತ್ ರೈಲು ಈ ಅಂತರವನ್ನು ಕೇವಲ 8 ಗಂಟೆಗಳಲ್ಲಿ ಕ್ರಮಿಸಲಿದೆ. ಇದರಿಂದ ಪ್ರಯಾಣಿಕರ 3 ರಿಂದ 4 ಗಂಟೆಗಳ ಅಮೂಲ್ಯ ಸಮಯ ಉಳಿತಾಯವಾಗಲಿದೆ.
ಪ್ರಸ್ತುತ ಶೇಕಡಾ 75ರಷ್ಟು ಕರಾವಳಿ ಪ್ರಯಾಣಿಕರು ದುಬಾರಿ ಖಾಸಗಿ ಬಸ್‌ಗಳನ್ನ ಅವಲಂಬಿಸಿದ್ದಾರೆ. ಐಟಿ-ಬಿಟಿ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಈ ರೈಲು ಸಂಚಾರ ಆರಂಭವಾದರೆ ಅತ್ಯಂತ ಅನುಕೂಲವಾಗಲಿದ್ದು, ಉಭಯ ನಗರಗಳ ನಡುವಿನ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.
A trial run of the 16-car Vande Bharat Express from Yesvantpur to Mangaluru Central commenced from Yesvantpur today to assess the timings of the run. pic.twitter.com/sgqm0EGHlB
— DRM Bengaluru (@drmsbc) September 5, 2026
ವಂದೇ ಭಾರತ್ ಮಂಗಳೂರು ರೈಲು ವೇಳಾಪಟ್ಟಿ
ಗುರುವಾರ (ಇಂದು) ನಡೆಯುತ್ತಿರುವ ಪರೀಕ್ಷಾರ್ಥ ಸಂಚಾರದ ವೇಳಾಪಟ್ಟಿ ಈ ಕೆಳಗಿನಂತಿದೆ:
* ಬೆಳಿಗ್ಗೆ 6.15: ಯಶವಂತಪುರ ರೈಲ್ವೆ ನಿಲ್ದಾಣದಿಂದ ನಿರ್ಗಮನ.
* ಬೆಳಿಗ್ಗೆ 8.05: ಹಾಸನ ನಿಲ್ದಾಣಕ್ಕೆ ಆಗಮನ.
* ಬೆಳಿಗ್ಗೆ 10.00: ಸಕಲೇಶಪುರ ನಿಲ್ದಾಣಕ್ಕೆ ಆಗಮನ.
* ಮಧ್ಯಾಹ್ನ 12.35: ಸುಬ್ರಹ್ಮಣ್ಯ ರಸ್ತೆ ತಲುಪಲಿದೆ.
* ಮಧ್ಯಾಹ್ನ 2.25: ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪಲಿದೆ (ಒಟ್ಟು ಪ್ರಯಾಣದ ಅವಧಿ 8 ಗಂಟೆ 10 ನಿಮಿಷ).
ಹಿಂದಿರುಗುವ ಮಾರ್ಗ:
* ಮಧ್ಯಾಹ್ನ 3.00: ಮಂಗಳೂರು ಸೆಂಟ್ರಲ್‌ನಿಂದ ನಿರ್ಗಮನ.
* ಸಂಜೆ 4.35: ಸುಬ್ರಹ್ಮಣ್ಯ ರಸ್ತೆ.
* ಸಂಜೆ 6.15: ಸಕಲೇಶಪುರ ನಿಲ್ದಾಣ.
* ರಾತ್ರಿ 7.30: ಹಾಸನ ನಿಲ್ದಾಣ.
* ರಾತ್ರಿ 11.00: ಯಶವಂತಪುರ ತಲುಪಲಿದೆ (ಒಟ್ಟು ಪ್ರಯಾಣದ ಅವಧಿ 8 ಗಂಟೆ).


Click it and Unblock the Notifications
