ಬೆಂಗಳೂರು-ಮಂಗಳೂರು ರೈಲು ಸಂಚಾರ ಇಂದು ಆರಂಭ
Recommended Video

ಬೆಂಗಳೂರು, ಅಕ್ಟೋಬರ್ 10 : ಬೆಂಗಳೂರು-ಮಂಗಳೂರು ನಡುವೆ ಬುಧವಾರ ಸಂಜೆಯಿಂದ ರೈಲು ಸೇವೆ ಆರಂಭವಾಗಲಿದೆ. ಮಳೆ, ಗುಡ್ಡ ಕುಸಿತದಿಂದಾಗಿ ಕಳೆದ 2 ತಿಂಗಳಿನಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು (16511/16513) ಶ್ರವಣಬೆಳಗೊಳದ ಮೂಲಕ ಮಂಗಳೂರಿಗೆ ಸಂಚಾರ ನಡೆಸಲಿದೆ. ಇಂದು ಸಂಜೆ 7.15ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದೆ.

ಹಗಲು ವೇಳೆ ಸಂಚಾರ ನಡೆಸುವ ರೈಲು ಅಕ್ಟೋಬರ್ 11ರಿಂದ ಸಂಚಾರವನ್ನು ಆರಂಭಿಸಲಿದೆ. ಆಗಸ್ಟ್ 14ರ ಬಳಿಕ ಸ್ಥಗಿತಗೊಂಡಿದ್ದ ಬೆಂಗಳೂರು-ಮಂಗಳೂರು ರೈಲು ಸಂಚಾರ ಇಂದು ಸಂಜೆಯಿಂದ ಪುನಃ ಆರಂಭವಾಗುತ್ತಿದೆ.
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516) ರೈಲನ್ನು ಅಕ್ಟೋಬರ್ 11ರಂದು ರದ್ದುಗೊಳಿಸಲಾಗಿದೆ. ಅಕ್ಟೋಬರ್ 12ರಿಂದ ಈ ರೈಲು ಸಂಚಾರ ನಡೆಸಲಿದೆ.
ಹಬೀಬ್‌ಗಂಜ್-ಧಾರವಾಡ ಮಧ್ಯೆ ವಾರಕ್ಕೊಮ್ಮೆ ಸಂಚರಿಸುವ ವಿಶೇಷ ರೈಲು (01664/01663) ಸಂಚಾರ ಅಕ್ಟೋಬರ್ 12ರಿಂದ ಮುಂದುವರೆಯಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ ತಿಂಗಳಿನಲ್ಲಿ ಹಾಸನ, ದಕ್ಷಿಣ ಕನ್ನಡ ಭಾಗದಲ್ಲಿ ಭಾರಿ ಮಳೆಯಾಗಿತ್ತು. ಸಕಲೇಶಪುರ-ಸುಬ್ರಮಣ್ಯ ನಡುವಿನ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿತ್ತು. ಸುಮಾರು 65 ಕಡೆ ಭೂ ಕುಸಿತ ಉಂಟಾಗಿ ರೈಲ್ವೆ ಹಳಿಗಳಿಗೆ ಹಾನಿಯಾಗಿತ್ತು.
ಹಳಿಗಳ ಮೇಲೆ ಬಿದ್ದಿದ್ದ ಮಣ್ಣನ್ನು ತೆರುವುಗೊಳಿಸಿ, ಹಳಿಗಳನ್ನು ದುರಸ್ಥಿ ಮಾಡಲಾಗಿದೆ. ಅಕ್ಟೋಬರ್ 1ರಂದು ರೈಲು ಸಂಚಾರ ಆರಂಭಿಸಬಹುದೇ ಎಂದು ಪರಿಶೀಲನೆ ನಡೆಸಲಾಗಿತ್ತು. ಈಗ ರೈಲು ಸಂಚಾರಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದೆ.












Click it and Unblock the Notifications