ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸ್ಥಗಿತ: ಮೆಜೆಸ್ಟಿಕ್‌ಗೆ ಹರಿದು ಬಂತು ಪ್ರಯಾಣಿಕರ ದಂಡು...
ಬೆಂಗಳೂರು ಡಿಸೆಂಬರ್ 16: ಡಿಸೆಂಬರ್ 14 ರಿಂದ 22 ರವರೆಗೆ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್ ಹೆಚ್ಚಾಗಿದೆ.
ನೈಋತ್ಯ ರೈಲ್ವೆಯು ಹಾಸನದ ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಯಾರ್ಡ್ ಪುನರ್ನಿರ್ಮಾಣವನ್ನು ಕೈಗೊಳ್ಳಲು ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ವಿವಿಧ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವಿನ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಿದೆ.

ಇದರಿಂದಾಗಿ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಂದು ಪ್ರಯಾಣಿಕರ ಸಂಖ್ಯೆ ದಿಢೀರನೆ ಹೆಚ್ಚಾಗಿರುವುದು ಕಂಡು ಬಂದಿದೆ. ಇಂದು ಶನಿವಾರವಾದ್ದರಿಂದ ಸಹಸವಾಗಿಯೇ ಪ್ರಯಾಣಿಕರ ಸಂಖ್ಯೆ ಎಂದಿಗಿಂತ ಕೊಂಚ ಹೆಚ್ಚಾಗಿರುತ್ತದೆ. ಆದರೆ ಇಂದು ಪ್ರತೀ ವಾರಾಂತ್ಯಕ್ಕಿಂತಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ವಿಶೇಷವಾಗಿ ಮಂಗಳೂರು ಕಡೆಗೆ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಜೊತೆಗೆ ಹಾಸನ, ಕಣ್ಣೂರು ಮತ್ತು ಕಾರವಾರ ಸೇರಿದಂತೆ ಈ ಭಾಗಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಇನ್ನೂ ಡಿಸೆಂಬರ್ 25ರಂದು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಮಾಡಲಾಗುತ್ತದೆ. ಇದರಿಂದಾಗಿ ದೂರದೂರುಗಳಿಗೆ ಪ್ರಯಾಣ ಮಾಡುವವರ ಸಂಖ್ಯೆ ಅಧಿಕ. ಆದರೆ ಎರಡು ವಾರಕ್ಕಿಂತಲೂ ಮುಂಚಿತವಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಏಕಾಏಕಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ್ದರಿಂದ ಬಸ್‌ಗಳ ವ್ಯವಸ್ಥೆಗೂ ತೊಂದರೆಯಾಗಿದೆ.
ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸ್ಥಗಿತ:-
ಇಂಜಿನಿಯರಿಂಗ್ ಕೆಲಸಕ್ಕಾಗಿ ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ ಟ್ರಾಫಿಕ್ ಬ್ಲಾಕ್ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವುದೇ ರೈಲು ಸಂಚಾರ ನಡೆಸುವುದಿಲ್ಲ.

ರದ್ದುಗೊಳಿಸಲಾದ ರೈಲುಗಳು:-
ಬೆಂಗಳೂರು-ಕಣ್ಣೂರು-ಬೆಂಗಳೂರು ಮತ್ತು ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರಾತ್ರಿಯ ಸೇವೆಗಳು ರದ್ದಾದ ರೈಲುಗಳಲ್ಲಿ ಸೇರಿವೆ.
ರೈಲು ಸಂಖ್ಯೆ 16511 ಬೆಂಗಳೂರು-ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 14, 17, 19 ಮತ್ತು 21 ರಂದು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 13, 15, 18, 20 ಮತ್ತು 22 ರಂದು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ತ್ರಿ-ಸಾಪ್ತಾಹಿಕವನ್ನು ಡಿಸೆಂಬರ್ 14, 16, 19, 21 ಮತ್ತು 23 ರಂದು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16539/16540 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಕ್ರಮವಾಗಿ ಡಿಸೆಂಬರ್ 16 ಮತ್ತು 17 ರಂದು ರದ್ದುಗೊಳಿಸಲಾಗಿದೆ.
ಬೆಂಗಳೂರಿನಿಂದ ಕರಾವಳಿ ಕರ್ನಾಟಕ ರೈಲು ಸೇವೆ ಲಭ್ಯ:-
ರೈಲು ಸಂಖ್ಯೆ. 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬೆಂಗಳೂರು-ಮುರ್ಡೇಶ್ವರ್ ರಾಜ್ಯದ ರಾಜಧಾನಿಯನ್ನು ಕರಾವಳಿಗೆ ಸಂಪರ್ಕಿಸುವ ಏಕೈಕ ರೈಲು ಆಗಿರುತ್ತದೆ, ಆದರೆ ಈ ಅವಧಿಯಲ್ಲಿ ಇದು ಮೈಸೂರು ಪ್ರದೇಶದ ಮೂಲಕ ಕಾರ್ಯನಿರ್ವಹಿಸುವುದಿಲ್ಲ.
ಡಿಸೆಂಬರ್ 14 ರಿಂದ ಡಿಸೆಂಬರ್ 16 ರವರೆಗೆ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮಾರ್ಗವಾಗಿ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ರೈಲುಗಳು ಕಾರ್ಯನಿರ್ವಹಿಸಲಿವೆ.
ಡಿಸೆಂಬರ್ 17 ರಿಂದ ಡಿಸೆಂಬರ್ 22 ರವರೆಗೆ ಈ ರೈಲುಗಳು ಮೈಸೂರು ಮಾರ್ಗವನ್ನು ಬಿಟ್ಟು ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮಾರ್ಗವಾಗಿ ಕಾರ್ಯನಿರ್ವಹಿಸಲಿವೆ.












Click it and Unblock the Notifications