ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸತತ 24 ಗಂಟೆ ಮಾತನಾಡಿದ ಚಂದ್ರಮೌಳಿ
ಬೆಂಗಳೂರು, ಮಾರ್ಚ್ 26: ಅವರ ಹೆಸರು ಟಿ.ಕೆ.ಚಂದ್ರಮೌಳಿ. ಬಡ ವಿದ್ಯಾರ್ಥಿಗಳ ಸಲುವಾಗಿ ಚಂದ್ರಮೌಳಿ ಮಾಡಿರುವ ಈ ಪ್ರಯತ್ನ ಎಂಥವರೂ ಮೆಚ್ಚುವಂಥದ್ದು. ವಿದ್ಯಾರ್ಥಿಗಳ ನೆರವಿನ ಸಲುವಾಗಿ ಸತತ 24 ಗಂಟೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿರುವ 52 ವರ್ಷದ ಇವರು, 6 ಲಕ್ಷ ರುಪಾಯಿ ಸಂಗ್ರಹಿಸಿದ್ದಾರೆ. ವಿದ್ಯಾ ದಾನ ವಿದ್ಯಾರ್ಥಿ ವೇತನ ಯೋಜನೆ ಮೂಲಕ ಆ ಮೊತ್ತವನ್ನು ಅರ್ಹರಿಗೆ ತಲುಪಿಸಲಾಗುತ್ತದೆ.
ಈ ವಿದ್ಯಾರ್ಥಿ ವೇತನದ ಯೋಜನೆ ತಂದಿರುವುದು ಇಂದಿರಾ ನಗರದ ರೋಟರಿ ಕ್ಲಬ್. ಪ್ರವಾಸಿಗ, ರಂಗ ನಟ, ರೊಟೇರಿಯನ್, ತರಬೇತುದಾರ ಹೀಗೆ ಬಹುಮುಖ ಪ್ರತಿಭೆಯ ಚಂದ್ರಮೌಳಿ ಅವರು ಈ ಸುದೀರ್ಘ ಮಾತುಕತೆಯ ಸವಾಲಿಗೆ ಒಂಬತ್ತು ತಿಂಗಳ ಸಿದ್ಧತೆ ನಡೆಸಿದ್ದಾರೆ.
ಮಾರ್ಚ್ ಹದಿನಾರನೇ ತಾರೀಕು ಬೆಳಗ್ಗೆ ಎಂಟು ಗಂಟೆಗೆ ಆರಂಭಿಸಿದ ಅವರ ಮಾತು ಸಮಾಪ್ತಿ ಆಗಿದ್ದು ಮರು ದಿನ ಬೆಳಗ್ಗೆ ಎಂಟು ಗಂಟೆಗೆ. ಇಂದಿರಾ ನಗರದ ರೋಟರಿ ಹೌಸ್ ಆಫ್ ಸರ್ವೀಸ್ ನಲ್ಲಿ ಈ ಕಾರ್ಯಕ್ರಮ ಇತ್ತು. ತಮ್ಮ ಜೀವನ ಪಯಣದ ಬಗ್ಗೆ ತಿಳಿಸಿದರು ಚಂದ್ರಮೌಳಿ.

ತಮ್ಮ ಪರಿಚಯ, ಕುಟುಂಬದವರ ಪರಿಚಯ, ಶಾಲೆ- ಕಾಲೇಜು ಜೀವನ, ಸ್ನೇಹಿತರು, ಹಿಂದಿನ ಬೆಂಗಳೂರು, ಸಿನಿಮಾ, ನಾಟಕ ಹೀಗೆ ಯಾವ ವಿಷಯವನ್ನೂ ಬಿಡದೆ ಎಲ್ಲದರ ಬಗ್ಗೆಯೂ ಮಾತನಾಡಿದರು. ಇನ್ನು ರಷ್ಯಾ, ಅಲಾಸ್ಕಾ, ಕೀನ್ಯಾ, ಹಿಮಾಲಯ ಪ್ರವಾಸದ ವೇಳೆಯ ತಮ್ಮ ಅನುಭವವನ್ನು ಕೂಡ ಹಂಚಿಕೊಂಡರು.
ಅಕೌಂಟ್ಸ್ ವಿಷಯದಲ್ಲಿ ತೊಂಬತ್ತೈದರಷ್ಟು ಅಂಕ ಪಡೆದಿದ್ದ ಒಬ್ಬ ಬಡ ವಿದ್ಯಾರ್ಥಿನಿಗೆ ಮುಂದೆ ಓದಲು ಆಗದ ಸ್ಥಿತಿಯನ್ನು ಕಂಡ ಚಂದ್ರಮೌಳಿಯವರು, ಈ ರೀತಿ ಒಂದು ಶೋ ಮಾಡಲು ಆಲೋಚಿಸಿದರಂತೆ. "ನಾವು ಈಗಾಗಲೇ ಆರು ನೂರು ವಿದ್ಯಾರ್ಥಿಗಳನ್ನು ಗುರುತಿಸಿದ್ದೇವೆ. ಅದು ಸಾವಿರ ತಲುಪಬಹುದು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ" ಎಂದು ರೋಟರಿ ಇಂದಿರಾನಗರದ ಎ.ಕೆ.ಸುಗುಣನ್ ತಿಳಿಸಿದ್ದಾರೆ.












Click it and Unblock the Notifications