ಬೆಂಗಳೂರು: 30 ವರ್ಷದ ಹಳೆಯ ಸ್ಕೈವಾಕ್ ದುರಸ್ತಿಗೆ/ ಮರು ನಿರ್ಮಾಣಕ್ಕೆ ಚಿಂತನೆ, ಸದ್ಯ ಗುಣಮಟ್ಟ ಪರಿಶೀಲನೆ
ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮೂರು ದಶಕಗಳ ಹಿಂದಿನ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್) ಅನ್ನು ದುರ್ಬಲಗೊಂಡಿದೆ. ಅದರ ನವೀಕರಣ ಇಲ್ಲವೇ ಅದನ್ನು ಕೆಡವಿ ಹೊಸದೊಂದು ಸ್ಕೈವಾಕ್ ಕಟ್ಟಬೇಕೆ? ಎಂಬ ಬಗ್ಗೆ ಚಿಂತನೆ ನಡೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಸುಪರ್ದಿಯ ಮೆಜೆಸ್ಟಿಕ್ ನಲ್ಲಿನ ಸಂತೋಷ್ ಥಿಯೇಟರ್ ಬಳಿ ಇರುವ ಸುಮಾರು 30 ವರ್ಷಗಳಷ್ಟು ಹಳೆಯದಾದ ಸ್ಕೈವಾಕ್ ದುರ್ಬಲಗೊಂಡಿದೆ. ಹೀಗಾಗಿ ಅಲ್ಲಿ ಹೊತ ಸ್ಕೈವಾಕ್ ನಿರ್ಮಾಣಕ್ಕೆ ಈ ಹಿಂದೆ ಟೆಂಡರ್ ಕರೆದಿದ್ದರು. ಯಾರೂ ಮುಂದೆ ಬಂದಿಲ್ಲ ಎನ್ನಲಾಗಿದೆ.

ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್ ನಲ್ಲಿ ಕೆಂಪೇಗೌಡ ವೃತ್ತ, ಅಕ್ಕಪಕ್ಕದ ಜನರು ರಸ್ತೆ ದಾಟಲು ಅನುಕೂಲವಾಗಲೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂರು ವರ್ಷಗಳ ಹಿಂದೆ 1990-1991 ಆಸುಪಾಸಿನಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಹಳೆಯ ಪಾದಾಚಾರಿ ಮೇಲ್ಸೇತುವೆಯನ್ನು (ಹಳೆಯ ಸ್ಕೈವಾಕ್) ನವೀಕರಿಸಬೇಕೆ? ಬೇಡವೇ ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ. ಸದ್ಯ ಈ ಸ್ಕೈವಾಕ್‌ನ ಸ್ಥಿರತೆ ಪರೀಶೀಲನೆ ನಡೆಯುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಬಿಬಿಎಂಪಿ ಆಯುಕ್ತರು ಹೇಳಿದ್ದೇನು?
ಈ ಕುರಿತು ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯಿಸಿದ್ದು, ಅಸ್ತಿತ್ವದಲ್ಲಿರುವುದನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸದನ್ನು ನಿರ್ಮಿಸಲು ನಾಗರಿಕ ಸಂಸ್ಥೆ ಮೂರು ಬಾರಿ ಟೆಂಡರ್‌ಗಳನ್ನು ಕರೆದಿದ್ದೇವೆ. ಆದರೆ ಹಲವು ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದರು.

ಆದರೂ ಸಹ ಇದೀಗ ಸ್ಕೈವಾಕ್ ಗುಣಮಟ್ಟವನ್ನು ಪರಿಶೀಲಿಸಲು ಮುಖ್ಯ ಇಂಜಿನಿಯರ್ ಸೇರಿದಂತೆ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಅವರು ಪರಿಶೀಲಿಸಿ ನೀಡುವ ವರದಿ ಆಧರಿಸಿ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಪಾಯಕಾರಿಯಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಸ್ಕೈವಾಕ್ ಅನ್ನೇ ಕಡೆವಲಾಗುವುದು ಎಂದು ತಿಳಿಸಿದರು.
ತಜ್ಞರಿಂದ ಗುಣಮಟ್ಟ ಪರೀಕ್ಷೆ: ಬಿಬಿಎಂಪಿ
ಈ ಹಿಂದೆಯು ಇದೇ ಸ್ಕೈವಾಕ್ ಅನ್ನು ಹಲವು ಬಾರಿ ನವೀಕರಿಸಿದ್ದೇವೆ. ನಮ್ಮ ಪ್ರಾಥಮಿಕ ತಪಾಸಣೆಯ ಪ್ರಕಾರ ಸದ್ಯಕ್ಕೆ ಪಾದಾಚಾರ ಮೇಲ್ಸೇತುವೆ ಉತ್ತಮ ಸ್ಥಿತಿಯಲ್ಲಿದೆ. ಆದರೆ ಮೆಟ್ಟಿಲುಗಳ ಕೆಳಗೆ ಪ್ಲಾಸ್ಟರಿಂಗ್ ಬಿದ್ದಿದೆ. ಸಾಮರ್ಥ್ಯ ಮತ್ತು ಸ್ಥಿರತೆಯನ್ನು ವಿಶ್ಲೇಷಿಸಲು, ಅಪಾಯ ತೆಡೆಗೆ, ಜನರ ಸುರಕ್ಷತೆ ದೃಷ್ಟಿಯಿಂದ ಗುಣಮಟ್ಟ ಪರೀಕ್ಷೆಯನ್ನು ನಡೆಸಲು ತಜ್ಞರಲ್ಲಿ ಮನವಿ ಮಾಡಿದ್ದೇವೆ. ಈ ಸ್ಕೈವಾಕ್‌ಗೆ ಎಸ್ಕಲೇಟರ್ ಸೌಲಭ್ಯ ಕಲ್ಪಿಸಿ ಬಳಸಬಹುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ವಿವರಿಸಿದರು.
ಈ ಪದಾಚಾರಿ ಮೇಲ್ಸೇತುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಅದರ ಸ್ಥಿತಿ ಹದಗೆಟ್ಟ ಬಳಿಕವೇ ಪಾದಾಚಾರಿಗಳು ಅದರ ಬಳಕೆ ನಿಲ್ಲಿಸಿದ್ದಾರೆ. ಹಲವು ಮಂದಿ ಸ್ಕೈವಾಕ್ ಮೇಲೆ ಕಸ ಸುರಿಯಲು ಪ್ರಯತ್ನಿಸಿದ್ದಾರೆ ಎಂದು ಸ್ಥಳಿಯರು ತಿಳಿಸಿದರು.
ಈ ಸಂಬಂಧ ಮಂಗಳವಾರ ಅಧಿಕಾರಿಗಳು ಸ್ಕೈವಾಕ್ ಇರುವ ಸ್ಥಳಕ್ಕೆ ಭೇಟಿ ನೀಡಿದರು. ಮೇಲ್ಸೇತುವೆ ಬಿರುಕು ಬಿಟ್ಟ ಕಾಂಕ್ರೀಟ್ ನಲ್ಲಿ ಸಣ್ಣ ಸಣ್ಣ ಸಸಿಗಳು ಬೆಳೆದಿವೆ. ಮೇಲ್ಸೇತುವೆ ತುಂಬೆಲ್ಲ ಜ್ಯೂಸ್ ಮದ್ಯದ ಟೆಟ್ರಾ ಪ್ಯಾಕ್‌ಗಳು, ಪ್ಲಾಸ್ಟಿಕ್ ಮತ್ತು ನೀರಿನ ಖಾಲಿ ಬಾಟಲಿಗಳು ತುಂಬಿವೆ. ಕೆಲವು ಭಾಗದಲ್ಲಿ ಮೂತ್ರದ ವಾಸನೆ ಬೀರುತ್ತಿದೆ. ದುಸ್ಥಿತಿಯಲ್ಲಿರುವ ಸ್ಕೈವಾಕ್ ಹೀಗೆಲ್ಲ ಬಳಕೆಯಾಗಿರುವುದು ವಿಷಾಧನಿಯ.
ಸ್ಕೈವಾಕ್ ಸಂಪೂರ್ಣ ಹಾಳಾಗಿದೆ. ಬಳಕೆಗೆ ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಹೀಗಾಗಿ ನಿತ್ಯ ಸುಮಾರು 50 ಮಂದಿ ಪಾದಾಚಾರಿಗಳು ಇದನ್ನು ಬಳಸಿದರೆ ಹೆಚ್ಚು ಎಂದು ಕೆಂಪೇಗೌಡ ವೃತ್ತದ ಸಮೀಪ ಫುಟ್‌ಪಾತ್‌ನಲ್ಲಿನ ವ್ಯಾಪಾರಿಯೊಬ್ಬ ಹೇಳಿದರು.












Click it and Unblock the Notifications