ಬೆಂಗಳೂರು: ಹೆಜ್ಜಾಲದಿಂದ ಹೀಲಲಿಗೆ ಹೊಸ ರೈಲು ಮಾರ್ಗ
ಬೆಂಗಳೂರು, ಜನವರಿ 17: ಬೆಂಗಳೂರು ನಗರಕ್ಕೆ ಹೊಸ ರೈಲು ಮಾರ್ಗ ಲಭ್ಯವಾಗಲಿದ್ದು, ಆಗ್ನೇಯ ದಿಕ್ಕಿನಿಂದ ನೈಋತ್ಯಕ್ಕೆ ಸಂಪರ್ಕಿಸುವ ಹೊಸ ರೈಲು ಮಾರ್ಗವನ್ನು ಅಳವಡಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಹೊಸ ಮಾರ್ಗವು ಹೀಲಲಿಗೆ ಮತ್ತು ಹೆಜ್ಜಾಲ ನಡುವಿನ 33 ಕಿಮೀ ರೈಲು ಮಾರ್ಗಕ್ಕೆ ಪ್ರಿಲಿಮಿನರಿ ಇಂಜಿನಿಯರಿಂಗ್ ಕಮ್ ಟ್ರಾಫಿಕ್ (ಪಿಇಟಿ) ಸಮೀಕ್ಷೆಯನ್ನು ರೈಲ್ವೆ ಮಂಡಳಿಯು ಅನುಮೋದಿಸಿದೆ. ಹೀಲಲಿಗೆ ಬೈಯಪ್ಪನಹಳ್ಳಿ- ಹೊಸೂರು ಮಾರ್ಗದಲ್ಲಿರುವ ಒಂದು ಸಣ್ಣ ರೈಲು ನಿಲ್ದಾಣವಾದರೆ, ಹೆಜ್ಜಾಲ ನಿಲ್ದಾಣವು ಬೆಂಗಳೂರು-ಮೈಸೂರು ಮಾರ್ಗದಲ್ಲಿದೆ.
ಹೊಸ ಮಾರ್ಗವು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ದಕ್ಷಿಣ ಮತ್ತು ಆಗ್ನೇಯ ಪ್ರದೇಶಗಳಿಂದ ಪಶ್ಚಿಮ ಮತ್ತು ನೈಋತ್ಯ ಉಪನಗರಗಳಾದ ಕೆಂಗೇರಿಗೆ ಪ್ರಯಾಣಿಸುವ ಜನರಿಗೆ ಅನುಕೂಲವಾಗುತ್ತದೆ. ಪ್ರಸ್ತುತ, ಪ್ರಯಾಣಿಕರು ಕೆಎಸ್ಆರ್ ಬೆಂಗಳೂರು ನಿಲ್ದಾಣದ ಮೂಲಕ ಹೋಗಬೇಕಾಗಿದೆ. ಸಮೀಕ್ಷೆಗೆ 16.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಮತ್ತು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ನೈಋತ್ಯ ರೈಲ್ವೆ ಸಮೀಕ್ಷೆಯನ್ನು ನಡೆಸಲು ಏಜೆನ್ಸಿಯನ್ನು ಆಯ್ಕೆ ಮಾಡಲು ಟೆಂಡರ್‌ಗಳನ್ನು ಕರೆಯುವ ಪ್ರಕ್ರಿಯೆಯಲ್ಲಿದೆ. ಹೊಸ ಮಾರ್ಗವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವೇ ಎಂಬುದನ್ನು ಸಮೀಕ್ಷೆಯಲ್ಲಿ ಪರಿಶೀಲಿಸಲಾಗುವುದು. ಹೊಸ ಮಾರ್ಗವು ಬೆಂಗಳೂರು ರೈಲ್ವೆ ವಿಭಾಗದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಎಸ್‌ಡಬ್ಲ್ಯೂಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ಹೇಳಿದರು ಎಂದು ಡಿಎಚ್ ವರದಿ ಮಾಡಿದೆ.

ವಿವರವಾದ ಯೋಜನಾ ವರದಿ
ಈ ಸಮೀಕ್ಷೆಯ ವರದಿಯನ್ನು ರೈಲ್ವೇ ಸಚಿವಾಲಯಕ್ಕೆ ಸಲ್ಲಿಸಲಾಗುತ್ತದೆ. ಅದು ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಮತ್ತು ಮಾರ್ಗವು ಸೂಕ್ತವೆಂದು ಕಂಡುಬಂದರೆ ಅನುಮೋದಿಸುತ್ತದೆ. ವಿವರವಾದ ಯೋಜನಾ ವರದಿ (ಡಿಪಿಆರ್) ಮತ್ತು ಅಂತಿಮ ಸ್ಥಳ ಸಮೀಕ್ಷೆಯನ್ನು ಸಿದ್ಧಪಡಿಸುವುದು ಮುಂದೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಹೀಲಲಿಗೆ- ಹೆಜ್ಜಲ ಮಾರ್ಗದ ಸಮೀಕ್ಷೆ
ಬೆಂಗಳೂರು ದಕ್ಷಿಣ ಸಂಸದ ಎಲ್ ಎಸ್ ತೇಜಸ್ವಿ ಸೂರ್ಯ ಕರ್ನಾಟಕದಲ್ಲಿ ಅತ್ಯಂತ ಜನನಿಬಿಡವಾದ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಈ ಮಾರ್ಗವು ಅಗಾಧವಾದ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು. ಹೀಲಲಿಗೆ- ಹೆಜ್ಜಲ ಮಾರ್ಗದ ಸಮೀಕ್ಷೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಜನವಸತಿ ಮತ್ತು ಪರಿಸರವನ್ನು ರಕ್ಷಿಸುವ ಸಲುವಾಗಿ ಆನೇಕಲ್-ಬಿಡದಿ ರೈಲು ಮಾರ್ಗಕ್ಕೆ ಹೊಸ ಜೋಡಣೆಯನ್ನು ರಚಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರಿನ ಮುಖ್ಯ ಸಮಸ್ಯೆ ಬೇರೆ
ಹೊಸ ಮಾರ್ಗವು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ರೈಲ್ವೆ ಕಾರ್ಯಕರ್ತರು ಒಪ್ಪವುದಿಲ್ಲ. ಅವರ ಪ್ರಕಾರ, ಹೊಸ ಮಾರ್ಗವು ದಿನದ ಬೆಳಕನ್ನು ನೋಡಲು ಕನಿಷ್ಠ 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದು ಕೇರಳ ಮತ್ತು ತಮಿಳುನಾಡಿನ ಒಳಬರುವ ರೈಲುಗಳಿಗೆ ಬೆಂಗಳೂರು ರೈಲ್ವೆ ನಿಲ್ದಾಣವನ್ನು ಬೈಪಾಸ್ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ ಬೆಂಗಳೂರಿನ ಮುಖ್ಯ ಸಮಸ್ಯೆ ಬೇರೆಯೇ ಆಗಿದೆ ಎಂದು ಅವರು ಹೇಳಿದರು.

ನಾಲ್ಕು ರೈಲು ಹಳಿಗಳನ್ನು ನಿರ್ಮಿಸಬೇಕು
ಕೆಎಸ್‌ಆರ್ ಬೆಂಗಳೂರಿನಿಂದ ಕೆಂಗೇರಿವರೆಗಿನ ಗ್ರೇಡಿಯಂಟ್ ಮತ್ತು ವಕ್ರತೆಯನ್ನು ರೈಲ್ವೇಗಳು ಕಡಿಮೆ ಮಾಡಬೇಕು ಮತ್ತು ಆ ಮಾರ್ಗದಲ್ಲಿ ನಾಲ್ಕು ರೈಲು ಹಳಿಗಳನ್ನು ನಿರ್ಮಿಸಬೇಕು ಎಂದು ರೈಲ್ವೆ ಕಾರ್ಯಕರ್ತರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಕೆಎಸ್‌ಆರ್ ಬೆಂಗಳೂರು ನಲ್ಲಿರುವ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಒಂದೇ ಮಟ್ಟದಲ್ಲಿರಬೇಕು. ಯಶವಂತಪುರ ಜಂಕ್ಷನ್‌ನಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು ಇನ್ನೊಂದು ಮಾಡಬೇಕಾದ ಕೆಲಸ. ಕೆಎಸ್‌ಆರ್ ಬೆಂಗಳೂರಿನಿಂದ ಕೆಂಗೇರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮುಖ್ಯ ಸಮಸ್ಯೆಯಾಗಿದೆ. ಹೊಸ ಮಾರ್ಗವು ಇದಕ್ಕೆ ಸಹಾಯ ಮಾಡದಿರಬಹುದು ಎಂದು ಅವರು ಹೇಳಿದ್ದಾರೆ.












Click it and Unblock the Notifications