BTS-22: ಬೆಂಗಳೂರು ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆದು ದೊಡ್ಡಣ್ಣನ ಸಾಧನೆ ಮೀರಿಸಲಿ: ಸಿಎಂ
ಬೆಂಗಳೂರು, ನವೆಂಬರ್ 17: ವಿಜ್ಞಾನ ಮತ್ತು ತಂತ್ರಜ್ಞಾನಗಳ ರಾಜಧಾನಿಯಾದ ಬೆಂಗಳೂರು ಇಡೀ ಜಗತ್ತಿನ ಸಿಲಿಕಾನ್ ವ್ಯಾಲಿಯಾಗಿ ಬೆಳೆಯಬೇಕು. ಭವಿಷ್ಯದ ತಂತ್ರಜ್ಞಾನದ ಬೆಳವಣಿಗೆ ಕುರಿತು ಬಿಟಿಎಸ್ ಸಮಾವೇಶ 'ಬೆಂಗಳೂರು ಘೋಷಣೆ'ಯೊಂದಿಗೆ ನಡೆಯಬೇಕು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ 'ಬೆಂಗಳೂರು ತಂತ್ರಜ್ಞಾನ ಸಮಾವೇಶ 2023' (ಬಿಟಿಎಸ್ 22)ದಲ್ಲಿ ಮಾತನಾಡಿದ ಅವರು, ಸಾಧನೆ ಮೂಲಕ ಬೆಂಗಳೂರು ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆಯಬೇಕು. ಈ ಸಾಧನೆಯು ಜಗತ್ತಿನ ದೊಡ್ಡಣ್ಣ ದೇಶ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ಸಾಧನೆಯನ್ನು ಮೀರಿಸಬೇಕು ಎಂದರು.
ಬೆಂಗಳೂರು ಹೆಚ್ಚು ಪ್ರತಿಭೆಗಳು, ಅವಕಾಶಗಳು ಮತ್ತು ಬೆಳವಣಿಗೆಗಳ ನಗರವಾಗಿದೆ. ಈಗಾಗಲೇ ಬೆಂಗಳೂರು ನಗರ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಡಿರುವ ಯಶಸ್ಸು ನಿರಂತರವಾಗಿ ಮುಂದುವರಿಯಲು ಬೇಕಾದ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ. ಅಲ್ಲದೇ ಪ್ರಧಾನಮಂತ್ರಿಗಳ ನವಭಾರತ ನಿರ್ಮಾಣದ ಗುರಿ ಇದೆ ಎಂದು ತಿಳಿಸಿದರು.
ಒಂದು ಸಿನಿಮಾ ಹೆಚ್ಚುದಿನ ಓಡಿದರೆ ಬೆಳ್ಳಿಹಬ್ಬ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ವಿಜ್ಞಾನ ಹಾಗೂ ತಂತ್ರಜ್ಞಾನ ಐಟಿ ಕ್ಷೇತ್ರದಲ್ಲಿನ ಕಳೆದ ಇಪ್ಪತ್ತೈದು ವರ್ಷ ಮಾಡಿದ ಸಾಧನೆ ಮಹತ್ವದ್ದಾಗಿದ್ದು, ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಐಟಿ ಉದ್ಯಮ ಇಷ್ಟೊಂದು ಬೆಳೆದರೂ ಉದ್ಯಮಿಗಳಲ್ಲಿನ ಉತ್ಸಾಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದು ಅವರು ಶ್ಲಾಘಿಸಿದರು.

ನಮ್ಮನ್ನು ಓವರ್‌ಟೆಕ್ ಮಾಡಲು ಆಗದು: ಸಿಎಂ ವಿಶ್ವಾಸ
ಐಟಿ ವಲಯದಲ್ಲಿ ಗಣಿತದ ಪಾತ್ರ ಮುಖ್ಯವಾಗಿರುತ್ತದೆ. ಭಾರತೀಯರು ಗಣಿತದಲ್ಲಿ ಪರಿಣಿತರು. ಐಟಿ ಕ್ಷೇತ್ರದಲ್ಲಿ ಚರ್ಚೆ ನಡೆದಷ್ಟು ಉತ್ತಮ ಫಲಿತಾಂಶ ಹೊರ ಬರುತ್ತದೆ. ಹೆಚ್ಚು ವರ್ಷ ಬುದುಕುವ ಮನ್ಯುನ ಬದುಕಿನಲ್ಲೂ ಮತ್ತು ಐಟಿ ಕ್ಷೇತ್ರದಲ್ಲಿ ನೆಟ್‌ವರ್ಕ ಹೆಚ್ಚು ಮುಖ್ಯ. ಐಟಿ ಉದ್ಯಮಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಅತ್ಯಂತ ಮುಖ್ಯವಾದದ್ದು. ಅನೇಕರು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇತರರು ನಮ್ಮನ್ನು ಅನುಸರಿಸಬಹುದು, ಓವರ್‌ಟೆಕ್ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು, ಐಟಿ ವಲಯ ಕುರಿತು ಬೊಮ್ಮಾಯಿ ಹೆಮ್ಮೆ ವ್ಯಕ್ತಪಡಿಸಿದರು.

ಬೆಂಗಳೂರಿನ ಚಿಂತನೆಯಿಂದ ದೇಶ ಬದಲು
ನಂತರ ಮಾತನಾಡಿದ ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬೆಂಗಳೂರು ಏನನ್ನು ಚಿಂತಿಸುತ್ತದೋ ಅದು ಇಡೀ ಭಾರತವನ್ನೇ ಬದಲಿಸುತ್ತಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ನಗರವು ಕಳೆದ ಐದು ಶತಮಾನಗಳಿಂದಲೂ ಪೂರ್ವಗಾಮಿಯಾಗಿದೆ. ಈ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ 108 ಅಡಿಗಳ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ ಎಂದರು.

ಬೆಂಗಳೂರು, ರಾಜ್ಯದ ಕೀರ್ತಿಗೆ ಐಟಿ ಕಂಪನಿಗಳು ಕಾರಣ
ಬೆಂಗಳೂರಿನ ಯಶೋಗಾಥೆಯಲ್ಲಿ ಇಲ್ಲಿರುವ ಕಂಪನಿಗಳ ಪಾತ್ರವು ಇದೆ. ಇಲ್ಲಿನ ಸ್ಫೂರ್ತಿದಾಯಕ ಉದ್ದಿಮೆಗಳಿಂದಾಗಿ ಬೆಂಗಳೂರಿನ ಜತೆಗೆ ಇಡೀ ಕರ್ನಾಟಕ ಮತ್ತು ಭಾರತಕ್ಕೆ ಕೀರ್ತಿ ಬಂದಿದೆ. ಇಲ್ಲಿ ನೆಲೆ ನಿಂತಿರುವ ಉದ್ಯಮಶೀಲ ಸಾಹಸಿಗಳಿಂದ ರಾಜ್ಯವು ಐಟಿ-ಬಿಟಿ, ಸೆಮಿ ಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಹೀಗೆ ಹಲವು ಕ್ಷೇತ್ರಗಳ ರಾಜಧಾನಿಯಾಗಿ ವಿರಾಜಿಸುತ್ತಿದೆ ಎಂದು ಸಚಿವರು ಬಣ್ಣಿಸಿದರು.

ಇನ್ಫೋಸಿಸ್, ವಿಪ್ರೋ ಸೇರಿ 34 ಕಂಪನಿಗಳಿಗೆ ಸನ್ಮಾನ
ಬೆಂಗಳೂರು ತಂತ್ರಜ್ಞಾನ ಸಮಾವೇಶದ ರಜತೋತ್ಸವದ ಭಾಗವಾಗಿ ನಗರದಲ್ಲಿ 25 ವರ್ಷಗಳಿಂದಲೂ ಸಕ್ರಿಯವಾಗಿರುವ ಇನ್ಫೋಸಿಸ್, ವಿಪ್ರೋ ಸೇರಿದಂತೆ ಫಿಲಿಪ್ಸ್, ಬಾಶ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಹಲವು ಉನ್ನತ ಮಟ್ಟದ ಕಂಪನಿಗಳನ್ನು ಉನ್ನತ ಮಟ್ಟದ ಪ್ರತಿನಿಧಿಗಳು ಸನ್ಮಾನ ಸ್ವೀಕರಿಸಿದರು.
ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಸಾಧಿಸಿರುವ ಯಶೋಗಾಥೆಗೆ 25 ವರ್ಷಗಳಿಂದಲೂ ಮಹತ್ತರ ಕೊಡುಗೆ ನೀಡುತ್ತಿರುವ ಇನ್ಫೋಸಿಸ್, ವಿಪ್ರೋ ಸೇರಿದಂತೆ 34 ಕಂಪನಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇದುವರೆಗೆ ರಾಜ್ಯ ಸರ್ಕಾರದ ವ್ಯಾಪ್ತಿಯ ಐಟಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಹಲವು ಹಿರಿಯ ಕಾರ್ಯದರ್ಶಿಗಳನ್ನು ಸಹ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಐಐಐಟಿ-ಬಿ ಸಂಸ್ಥಾಪಕ ಪ್ರೊ.ಷಡಗೋಪನ್, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ನಾಸ್ಕಾಂನ ವಿಶ್ವನಾಥನ್, ಉದ್ಯಮಿಗಳಾದ ಜಿ.ಎಸ್.ಕೃಷ್ಣನ್, ವಿವೇಕ್ ತ್ಯಾಗಿ, ಐಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.












Click it and Unblock the Notifications