Lalbagh: ಲಾಲ್‌ಬಾಗ್‌ನಲ್ಲಿ ಹೊಸ ರೂಲ್ಸ್, ನಿಯಮ ಪಾಲಿಸದಿದ್ರೆ ಭಾರೀ ದಂಡ
ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಈಗಾಗಲೇ ವಾಯುವಿಹಾರಿಗಳು ಹಾಗೂ ಪ್ರವಾಸಿಗರ ಸಂಖ್ಯೆ ಲಾಲ್‌ಬಾಗ್‌ನಲ್ಲಿ ಹೆಚ್ಚಾಗಿರುವ ಹಿನ್ನೆಲೆ ಹೊಸ ನಿಯಮಗಳನ್ನು ತಂದಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ. ಒಂದು ವೇಳೆ ಈ ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.
ಲಾಲ್‌ಬಾಗ್ ಉದ್ಯಾನವನದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಕ್ಕೆ ಹೆಚ್ಚಿನ ಜನರು ಬರುತ್ತಾರೆ. ಬಾಕಿ ಸಮಯದಲ್ಲಿ ಲಾಲ್‌ಬಾಗ್ ಪ್ರವೇಶಿಸಲು ಶುಲ್ಕವೂ ಇದೆ. ಆದರೆ ಇನ್ನು ಮುಂದೆ ಲಾಲ್‌ಬಾಗ್ ಒಳಗೆ ಬಂದಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಇಲ್ಲದಿದ್ದರೆ ಸ್ಥಳದಲ್ಲೇ ದಂಡ ವಿಧಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಹೇಳಿದೆ.
ಹೊಸ ನಿಯಮದಂತೆ ಇನ್ನು ಮುಂದೆ ಲಾಲ್‌ಬಾಗ್ ಉದ್ಯಾನಕ್ಕೆ ಸಾಕು ಪ್ರಾಣಿಗಳನ್ನು ಕರೆತರುವಂತಿಲ್ಲ. ಅಲ್ಲದೆ ಮಕ್ಕಳು ಸೈಕ್ಲಿಂಗ್, ಸ್ಕೇಟಿಂಗ್ ಮಾಡುವುದನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ 5.30 ರಿಂದ 9 ಗಂಟೆಯವರೆಗೆ ಮತ್ತು ಸಂಜೆ 4.30ರಿಂದ 7 ಗಂಟೆಯವರೆಗೆ ಮಾತ್ರವೇ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೆಲವರು ವಾಯುವಿಹಾರಕ್ಕೆ ಬರುವಾಗ ತಮ್ಮೊಂದಿಗೆ ತಮ್ಮ ಸಾಕು ಪ್ರಾಣಿಗಳನ್ನು ಕೂಡ ಕರೆತರುತ್ತಾರೆ. ಸಾಕು ಪ್ರಾಣಿಗಳು ಉದ್ಯಾನದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದು ಮಾತ್ರವಲ್ಲದೆ, ಇತರ ವಾಯುವಿಹಾರಿಗಳಿಗೂ ಇದರಿಂದ ತೊಂದರೆ ಎದುರಾಗುತ್ತಿರುವ ಹಿನ್ನೆಲೆ ಸಾಕು ಪ್ರಾಣಿಗಳನ್ನು ಉದ್ಯಾನದಲ್ಲಿ ನಿಷೇಧಿಸಲಾಗಿದೆ.
ಚಿತ್ರೀಕರಣಕ್ಕೂ ಬ್ರೇಕ್
ಲಾಲ್‍ಬಾಗ್‌ನಲ್ಲಿ ಕಳೆದ ಕೆಲವು ತಿಂಗಳಿನಿಂದ ರೀಲ್ಸ್ ಹುಚ್ಚಾಟ, ಪ್ರೀ-ವೆಡ್ಡಿಂಗ್ ಹಾಗೂ ಪೋಸ್ಟ್-ವೆಡ್ಡಿಂಗ್ ಶೂಟ್‌ಗಳು ಮಿತಿಮೀರಿದ್ದವು. ಇದರಿಂದ ಮುಂಜಾನೆ ಯೋಗ ಮಾಡಲು ಬರುವ ಹಿರಿಯರು, ವಾಕಿಂಗ್‌ಗೆ ಬರುವ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಹೀಗಾಗಿ ಇನ್ಮುಂದೆ ಲಾಲ್‍ಬಾಗ್‌ನಲ್ಲಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಪ್ರೀ-ವೆಡ್ಡಿಂಗ್, ರೀಲ್ಸ್ ಶೂಟ್ ನಿಯಂತ್ರಣಕ್ಕೆ ಆಡಳಿತ ಮಂಡಳಿ ಮುಂದಾಗಿದೆ.
ಲಾಲ್‌ಬಾಗ್‌ನಲ್ಲಿ ಫೋಟೋಶೂಟ್, ವಿಡಿಯೋಶೂಟ್ ಮಾಡುವವರು ಹೆಚ್ಚಾಗುತ್ತಿರುವ ಕಾರಣ ಇವುಗಳನ್ನು ನಿಷೇಧಿಸಿ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ಪ್ರವಾಸಿ ತಾಣವಾದ ಈ ಉದ್ಯಾನವನದಲ್ಲಿ ಇನ್ನು ಮುಂದೆ ಮನರಂಜನಾ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ.
ಏನೆಲ್ಲ ಹೊಸ ರೂಲ್ಸ್?
ಸಾಮೂಹಿಕ ಚಟುವಟಿಕೆಗಳು, ಮರ ಹತ್ತುವುದು, ಅಲ್ಲಿರುವ ರೆಂಬೆಗಳೊಂದಿಗೆ ಆಟ ಆಡುವುದು, ಹಣ್ಣು, ಹೂವುಗಳನ್ನು ಕಿತ್ತುಕೊಳ್ಳುವುದು, ಪಕ್ಷಿಗಳು ಮತ್ತು ಮೀನುಗಳಿಗೆ ಆಹಾರ ನೀಡುವುದು ಹಾಗೂ ಸಾಕು ಪ್ರಾಣಿಗಳನ್ನು ಕರೆತರುವುದು ಕೂಡ ನಿಷಿದ್ಧ. ಹೊರಗಿನಿಂದ ಆಹಾರ, ಆಟಿಕೆಗಳು ಮತ್ತು ಬಲೂನ್‌ಗಳನ್ನು ತರುವುದು, ವಾಕಥಾನ್, ಮ್ಯಾರಥಾನ್, ಸ್ಕೇಟಿಂಗ್, ಸೈಕ್ಲಿಂಗ್, ಶಸ್ತ್ರಾಸ್ತ್ರಗಳನ್ನು ತರುವಂತಿಲ್ಲ. ರೀಲ್ಸ್ ಮಾಡುವುದು, ಫೋಟೋಶೂಟ್‌ಗಳು, ಮಾಡೆಲಿಂಗ್, ಡ್ರೋನ್ ಬಳಕೆ ಕೂಡ ನಿಷೇಧಿಸಲಾಗಿದೆ.












Click it and Unblock the Notifications