ಬೆಂಗಳೂರು: ಬಂಧಿಸಿದ್ದ ಆರೋಪಿಗಳನ್ನು ಅಪಹರಿಸಿದ ಪೊಲೀಸರು, ಹಣಕ್ಕೆ ಬೇಡಿಕೆ ಇಟ್ಟು ಅಮಾನತು
ಬೆಂಗಳೂರು, ಮಾರ್ಚ್ 24: ಅಪರಾಧ ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದ ಪೊಲೀಸರು ತಮ್ಮ ವಶದಲ್ಲಿರುವ ಆರೋಪಿಯನ್ನು ಬಿಟ್ಟು ಕಳುಹಿಸಲು ಲಕ್ಷ ಲಕ್ಷ ಹಣ ಪೀಕಲು ಮುಂದಾಗಿ ಅಮಾನತುಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾರತ್ತಹಳ್ಳಿಯಲ್ಲಿ ಹುಲಿ ಸುಲಿದು, ಉಗುರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಆಸಾಮಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದರೆ ಅವರನ್ನು ಬಂಧಿಸಿದ ಪೊಲೀಸರು ಪೋಲಿಸ್ ಠಾಣೆಗೆ ಕರೆದೊಯ್ದಿಲ್ಲ. ಜೊತೆಗೆ ಅವರ ಮೇಲೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಬಾಗಲೂರು ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಾಂಜನೇಯ, ಜಾಕೀರ್ ಹುಸೇನ್ ಮತ್ತು ಶಬ್ಬೀರ್ ಖಾನ್ ಈ ಇಬ್ಬರು ಹುಲಿ ಉಗರನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ವ್ಯಕ್ತಿಗಳು. ಮಾರತ್ತಹಳ್ಳಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರಂಗೇಶ್, ಹೆಡ್ ಕಾನ್‌ಸ್ಟೆಬಲ್ ಹರೀಶ್ ಕೆಎಲ್ ಮತ್ತು ಕಾನ್ಸ್‌ಟೇಬಲ್ ಮಹೇಶ್ ನಾಯಕ್ ಇವರು ಕರ್ತವ್ಯ ಲೋಪದಿಂದ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಏನಿದು ಘಟನೆ?
ಬಂಧಿತ ಮೂವರು ಆರೋಪಿಗಳು ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಹುಲಿ ಸುಲಿದು ಉಗುರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಈ ವೇಳೆ ಅಮಾನತುಗೊಂಡಿರುವ ಮಾರತ್ತಹಳ್ಳಿಯ ಮೂವರು ಪೊಲೀಸ್ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕೂಡಲೇ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಪ್ರಕರಣ ಸಂಬಂಧ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕಿತ್ತು.
ಆದರೆ ಹಾಗೇ ಮಾಡದ ಸಬ್ ಇನ್ಸ್ ಪೆಕ್ಟರ್ ರಂಗೇಶ್ ನೇತೃತ್ವದ ತಂಡ ಆರೋಪಿಗಳನ್ನು ಅಪಹರಿಸಿದ್ದಾರೆ. ಅವರನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅದರಲ್ಲಿ ರಾಮಾಂಜನೇಯ ಅವರ ಕುಟುಂಬದ ಸದಸ್ಯರೊಬ್ಬರ ಸಂಪರ್ಕ ಸಂಖ್ಯೆ ಸಂಗ್ರಹಿಸಿ, ಕರೆ ಮಾಡಿ ಕೂಡಲೇ ಬಿಡುಗಡೆಗೆ 45 ಲಕ್ಷ ರೂ. ನೀಡುವಂತೆ ಆಗ್ರಹಿಸಿದ್ದಾರೆ. ಆರೋಪಿಗಳನ್ನು ಬಿಟ್ಟು ಕಳುಹಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸಂಬಂಧಿಕರ ದೂರು: ಪೊಲೀಸರ ಕೈವಾಡ ಬಯಲು
ಹಣ ನಿಡದಿದ್ದರೆ ಜೈಲಿಗೆ ಕಳುಹಿಸುತ್ತೇವೆ. ಕುಟುಂಬದ ಸದಸ್ಯರನ್ನು ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ. ಆರೋಪಿಗಳು ತಾವು ಪೊಲೀಸರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ರಾಮಾಂಜನೇಯನನ್ನು ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ನಿಜವಾದ ಹೆಸರು ಹೇಳಿಲ್ಲ ಎನ್ನಲಾಗಿದೆ.
ರಾಮಾಂಜನೇಯ ಅವರಿಗೆ ಜೀವ ಬೆದರಿಕೆ ಇದೆ ಎಂಬ ಭಯದಿಂದ ಅವರ ಸಂಬಂಧಿ ಎಂ.ಬಿ.ಶಿವರಾಮಯ್ಯ ಎಂಬವರು ಮಂಗಳವಾರ ಬಾಗಲೂರು ಪೊಲೀಸರಿಗೆ ದೂರು ದಾಖಲಿಸಲು ಮುಂದಾಗಿದ್ದಾರೆ. ಮಲ್ಲಪ್ಪ ಸೇರಿ ಇತರರು ರಾಮಾಂಜನೇಯನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಶಿವರಾಮಯ್ಯ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕರೆ ಮಾಡಿದ ಮೊಬೈಲ್ ಟವರ್ ಮೂಲಕ ಸ್ಥಳ ಪತ್ತೆ ಮಾಡಿದ್ದಾರೆ. ಬಳಿಕ ರಾಮಾಂಜನೆಯ ಜೊತೆಗಿದ್ದವರನ್ನು ಬಂದಿಸಿದ್ದಾರೆ. ಆಗ ತಮ್ಮ ಪೊಲೀಸ್ ಸಿಬ್ಬಂದಿ ಕೈವಾಡ ಇದರಲ್ಲಿ ಇರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಡಿಸಿಪಿ (ಈಶಾನ್ಯ) ಬಿಎಂ ಲಕ್ಷ್ಮೀ ಪ್ರಸಾದ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಇಲಾಖೆಯ ಸಿಬ್ಬಂದಿ ಮೇಲೆ ಕ್ರಮ ಜರುಗಿಸಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ.












Click it and Unblock the Notifications