14 x15 ಅಡಿ ಹಾಲ್ ನಲ್ಲೇ 109 ಕಿ.ಮೀ. ವಾಕ್ ಮಾಡಿದ ಬೆಂಗಳೂರಿನ ಅಡ್ವೋಕೇಟ್!
ಬೆಂಗಳೂರು, ಮೇ. 04: ಕೊರೊನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವಕೀಲ ವಿ. ಶಂಕರಪ್ಪ ಅವರ ಮನೆಯಲ್ಲಿಯೇ ವಾಕ್ ಮಾಡುವ ಮೂಲಕ ಊಹೆಗೂ ನಿಲುಕದ ದಾಖಲೆ ನಿರ್ಮಿಸಿದ್ದಾರೆ. 14 x 15 ಅಡಿ ಹಾಲ್‌ನಲ್ಲಿ ಬರೋಬ್ಬರಿ 109 ಕಿ.ಮೀ. ದೂರ ವಾಕ್ ಮಾಡಿದ್ದಾರೆ!
ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಹೊರಗೆ ಬರುವಂತಿಲ್ಲ. ಮನೆಯಲ್ಲಿ ವ್ಯಾಯಾಮ ಮಾಡದೇ ಪರೋಕ್ಷವಾಗಿ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುವ ರೀತಿ ದೇಹವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮನಸಿದ್ದರೆ ಮಾರ್ಗ ಎಂಬುದಕ್ಕೆ ಹಿರಿಯ ವಕೀಲ ವಿ. ಶಂಕರಪ್ಪ ಅವರು ಮನೆಯ ಹಾಲ್ ನಲ್ಲೇ ದಿನಕ್ಕೆ 20 ಕಿ.ಮೀ. ವಾಕ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಈ ರೀತಿಯ ಸಾಹಸ ಮಾಡಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹುಡುಕಿದರೆ, ಯಾರೂ ಮಾಡಿಲ್ಲ. ಇದೊಂದು ದಾಖಲೆ ಅಂತಲೇ ಹೇಳಲಾಗುತ್ತಿದೆ. ಕೊರೊನಾ ಸೋಂಕಿಗೆ ಒಳಗಾದ ಶಂಕರಪ್ಪ ಅವರಿಗೆ ನಡಿಗೆಯ ಅಗತ್ಯತೆ ಯಾಕೆ ಬಿತ್ತು. ಅದರಿಂದ ಆದ ಅನುಕೂಲಗಳ ಬಗ್ಗೆ ತನ್ನ ಅನುಭವವನ್ನು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.

ದಿನದ ನಡಿಗೆ : ಶಂಕರಪ್ಪ ಅವರು ಸದ್ಯ ಸಿದ್ದಾಪುರದಲ್ಲಿ ನೆಲೆಸಿದ್ದು ಅವರ ಮನೆಯ ಹಾಲ್ ನ ವಿಸ್ತೀರ್ಣ ಕೇವಲ 14 x 15 ಅಡಿ. ಕೊರೊನಾ ಲಾಕ್ ಡೌನ್ ಹಾಗೂ ಸೋಂಕಿನ ಭಯದಿಂದ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ವಾಕ್ ಮಾಡಲು ಆರಂಭಿಸಿದ್ದಾರೆ. ಬೆಳಗ್ಗೆ ಒಂದೂವರೆ ತಾಸು, ಮಧ್ಯಾಹ್ನ ಒಂದು ಗಂಟೆ, ಸಂಜೆ ಒಂದೂವರೆ ಗಂಟೆ ಕಾಲ ಮನೆಯಲ್ಲಿ ವಾಕ್ ಮಾಡುತ್ತಾರೆ. ನಾನು ದಿನಕ್ಕೆ ಎಷ್ಟು ನಡೆಯುತ್ತೇನೆ ಎಂಬ ಅರಿವು ನನಗೆ ಇರಲಿಲ್ಲ. ನನ್ನ ಮಕ್ಕಳು ಕೊಟ್ಟ ಸಲಹೆಯಿಂದ ನಾನು ಆಪ್ ಮೂಲಕ ನನ್ನ ದಿನದ ವಾಕ್ ವಿವರ ಆಪ್ ನಲ್ಲಿ ದಾಖಲಿಸಲು ನೋಂದಣಿ ಮಾಡಿದೆ. ಕಳೆದ ಆರು ದಿನದಲ್ಲಿ ಮನೆಯೊಳಗೆ 109 ಕಿ.ಮೀ. ವಾಕ್ ಮಾಡಿದ್ದೇನೆ. ಬರೋಬ್ಬರಿ 92,436 ಹೆಜ್ಜೆ, 410 Heart pts, 14166 ಕ್ಯಾಲೋರೀಸ್ ಬರ್ನ್ ಮಾಡಲಾಗಿದ್ದು, 1803 ನಿಮಿಷದಲ್ಲಿ 109.11 ಕಿ. ಮೀ. ದೂರ ಕ್ರಮಿಸಿದ್ದೇನೆ ಎಂದು ವಕೀಲ ಶಂಕರಪ್ಪ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಮೊದಲ ಅಲೆಗೆ ಕೊರೊನಾ ಸೋಂಕಿಗೆ ಒಳಗಾದೆ. ಕೊರೊನಾದಿಂದ ಜೀವ ಉಳಿಸಿಕೊಂಡಿದ್ದು ನನಗೊಂದು ಪುನರ್ಜನ್ಮ. ಮಣಿಪಾಲ್ ಆಸ್ಪತ್ರೆಯ ವೈದ್ಯರಿಗೆ ಆ ವಿಚಾರದಲ್ಲಿ ನಾನು ಕೃತಜ್ಞ. ಇನ್ನು ಕೊರೊನಾ ಎರಡನೇ ಅಲೆಗೆ ನನ್ನ ಆಪ್ತ ಬಳಗವನ್ನು ಕಳೆದುಕೊಂಡಿದ್ದೇನೆ. ನನ್ನು ಆರೋಗ್ಯ ಸುಧಾರಣೆಗೆ ವೈದ್ಯರೊಬ್ಬರು ದಿನ ನಿತ್ಯ ನಡೆಯಬೇಕು ಎಂದು ಸಲಹೆ ಮಾಡಿದ್ದರು. ಹೀಗಾಗಿ ಅಂದಿನಿಂದ ದಿನ ಬಿಡದಂತೆ ವಾಕ್ ಮಾಡುತ್ತಿದ್ದೇನೆ. ಹೀಗಾಗಿ ಪುಟ್ಟ ಹಾಲ್ ನಲ್ಲಿಯೇ ದಿನಕ್ಕೆ 20 ಕಿ.ಮೀ. ವಾಕ್ ಮಾಡುತ್ತಿದ್ದೇನೆ.

Recommended Video
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಂದವರಗೆ ನಾನು ಕೊಡುವ ಪುಟ್ಟ ಸಲಹೆ ಇಷ್ಟೇ. ತಪ್ಪದೇ ವಾಕ್ ಮಾಡಿ. ಎಷ್ಟು ನಡೆಯುತ್ತೀರೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು. ಬೇರೆ ಕಾಯಿಲೆಗಳಿಂದ ದೂರ ಉಳಿಯಲು ನಡಿಗೆ ಅಗತ್ಯ. ಲಾಕ್ ಡೌನ್ ಇದೆ. ಜಾಗ ಇಲ್ಲ ಅಂತ ಮನೆಯಲ್ಲಿ ಕೂತರೆ ಕಾಯಿಲೆಗಳನ್ನು ಮೈಮೇಲೆ ಆಹ್ವಾನಿಸಿಕೊಂಡಂತೆ ಎಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications