ಬೆಂಗಳೂರು ಕರಗ ಉತ್ಸವ-2022 ಯಾವಾಗ?: ಪೂರ್ವಭಾವಿ ಸಭೆಯಲ್ಲಿ ನಡೆದ ಚರ್ಚೆಗಳೇನು?
ಬೆಂಗಳೂರು, ಮಾರ್ಚ್ 18: ಐತಿಹಾಸಿಕ ಬೆಂಗಳೂರು ಕರಗ ಉತ್ಸವ 2022ರ ಆಚರಣೆಗೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಯಿತು.
ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವು ಪುರಾತನ ಹಾಗೂ ಪ್ರಸಿದ್ಧವಾದ ಹಬ್ಬವಾಗಿದೆ ಎಂದು ಶಾಸಕ ಉದಯ್ ಬಿ. ಗರುಡಾಚಾರ್ ಹೇಳಿದರು. ಕೋವಿಡ್ ಸೋಂಕಿನ ಕಾರಣಕ್ಕಾಗಿ ಎರಡು ವರ್ಷಗಳಿಂದ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದೇ ಸರಳವಾಗಿ ಮುಗಿಸಲಾಗುತ್ತಿತ್ತು ಎಂದರು. ಶುಕ್ರವಾರ ನಡೆದ ಸಭೆಯಲ್ಲಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ರಂಗಪ್ಪ, ತುಳಸಿ ಮದ್ದಿನೇನಿ, ಜಂಟಿ ಆಯುಕ್ತೆ ಶಿಲ್ಪಾ, ಶ್ರೀನಿವಾಸ್, ಜಗದೀಶ್ ನಾಯ್ಕ್, ಉಪ ಆಯುಕ್ತ ಯೋಗೇಶ್, ಮುಜರಾಯಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದ್ದು, ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಅಡಚಣೆಯಾಗದಂತೆ ಎಲ್ಲರೂ ಒಂದೊಂದು ಜವಾಬ್ದಾರಿ ವಹಿಸಿಕೊಂಡು ಸುವ್ಯವಸ್ಥಿತವಾಗಿ ನಡೆಯಬೇಕು ಎಂದು ಹೇಳಿದರು.

ಬೆಂಗಳೂರು ಕರಗ-2022ರ ವಿಜೃಂಭಣೆಯ ಆಚರಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಸರಿಯಾದ ರೀತಿಯಲ್ಲಿ ಬೆಂಗಳೂರು ಕರಗವನ್ನು ಆಚರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಕೋವಿಡ್ ಹಾವಳಿ ಕಡಿಮೆಯಾಗಿದೆ. ಈ ಬಾರಿ ಬೆಂಗಳೂರು ಕರಗ ಆಚರಣೆಯನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ತಿಳಿಸಿದ್ದಾರೆ.
ಕರಗ ಉತ್ಸವವು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಕರಗ ಹೋಗಿ ಬರುವ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿ ಇಡಬೇಕು. ಸಂಪಂಗಿ ರಾಮನಗರದ ಕಲ್ಯಾಣಿಯ ಸುತ್ತಲು ಸ್ವಚ್ಛಗೊಳಿಸಬೇಕು. ಬೀದಿ ದೀಪಗಳ ಅಳವಡಿಕೆ, ಜಲಮಂಡಳಿಯಿಂದ ಸಮರ್ಪಕ ನೀರಿನ ವ್ಯವಸ್ಥೆ, ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ಕರಗ ಉತ್ಸವಕ್ಕಾಗಿ ಬಿಬಿಎಂಪಿಯು ಸೂಕ್ತ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದರು.
ಯಾವಾಗ ನಡೆಯಲಿದೆ ಬೆಂಗಳೂರು ಕರಗ-2022?:
ಬೆಂಗಳೂರಿನ ಐತಿಹಾಸಿಕ ಕರಗ-2022 ಆಚರಣೆಯು ಏಪ್ರಿಲ್ 8 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 16 ರಂದು ನಡೆಯುವ ಕರಗ ಶಕ್ತ್ಯೋತ್ಸವ ನಡೆಯುವ ದಿನವಾಗಿದ್ದು, ಏಪ್ರಿಲ್ 18ರಂದು ಸಂತೋತ್ಸವ ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.

ಕರಗ ಉತ್ಸವ ಆಚರಣೆ ಬಗ್ಗೆ ಬಿಬಿಎಂಪಿ ಆಯುಕ್ತರ ಸ್ಪಷ್ಟನೆ:
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಈ ಸಂಬಂಧ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವು ಏಪ್ರಿಲ್ 8 ರಿಂದ ಪ್ರಾರಂಭವಾಗಲಿದ್ದು, ಸದರಿ ಕರಗ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯುವ ಸಮಯದಲ್ಲಿ ಅತಿ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ನಗರದ ಸುತ್ತಮುತ್ತಲಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪಾಲಿಕೆ, ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅಡಚಣೆಯಾಗದಂತೆ ಕರಗ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಕೋವಿಡ್-19 ನಿಯಮ ಪಾಲಿಸುವಂತೆ ಮನವಿ:
ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ನಡೆಯದಿರುವ ಕಾರಣ, ಈ ಬಾರಿ ನಡೆಯುವ ಕರಗ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರಲಿದ್ದಾರೆ. ಕೋವಿಡ್ ಸೋಂಕು ಇರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಪ್ರತಿದಿನ ಸ್ವಚ್ಚತೆ ಮಾಡಬೇಕು, ಸಂಚಾರಿ ಶೌಚಾಲಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ಬೀದಿ ದೀಪಗಳ ಅಳವಡಿಕೆ, ರಸ್ತೆ ದುರಸ್ತಿ ಕಾರ್ಯ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಸರಿಯಾಗಿ ಮಾಡಬೇಕಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.












Click it and Unblock the Notifications