Bengaluru-Kalaburagi Train: ಇಂದಿನಿಂದ ಬೆಂಗಳೂರು-ಕಲಬುರಗಿ ಮಧ್ಯೆ ವಿಶೇಷ ರೈಲು ಸಂಚಾರ, ವೇಳಾಪಟ್ಟಿ
ಬೆಂಗಳೂರು, ಜುಲೈ 15: ರಾಜ್ಯದ ದಕ್ಷಿಣದ ತುದಿಯಿಂದ ಉತ್ತರ ಕರ್ನಾಟಕದ ಕೊನೆಯ ತುದಿಗೆ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ಈ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಲ್ದಾಣದಿಂದ ಹೊರಡಲಿದೆ. ರೈಲಿನ ಸಮಯ, ದಿನಾಂಕ ಸೇರಿದಂತೆ ವೇಳಾಪಟ್ಟಿ ಗಮನಿಸಿ ಪ್ರಯಾಣಿಕರು ಸಂಚರಿಸಬೇಕು ಎಂದು ನೈಋತ್ಯ ರೈಲ್ವೆ (SWR) ಕೋರಿದೆ.
ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ಈ ವಿಶೇಷ ರೈಲು ಜು.15 ಸೋಮವಾರದಿಂದಲೇ ಸೇವೆ ಆರಂಭಿಸಲಿದೆ. ರೈಲು ಸಂಖ್ಯೆ 06589 ಇಂದು ರಾತ್ರಿ 8ಕ್ಕೆ ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟು ನಾಳೆ ಜುಲೈ 16ರಂದು ಬೆಳಗ್ಗೆ 7:45 ಕೈ ಕಲಬುರಗಿ ನಿಲ್ದಾಣ ತಲುಪಲಿದೆ.

ಮರಳಿ ಕಲಬುರಗಿಯಿಂದ ಜುಲೈ 16ರಂದು ಮಂಗಳವಾರ ರೈಲು (ಸಂಖ್ಯೆ 06590) ಬೆಳಗ್ಗೆ 9.30ಗಂಟೆಗೆ ಹೊರಟು ಅದೇ ದಿನ ರಾತ್ರಿ 8:30 ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣ ಬಂದು ಸೇರಲಿದೆ.
ಇನ್ನೂ ವಿಶೇಷ ರೈಲು (ಸಂಖ್ಯೆ 06597) ಬೆಂಗಳೂರಿನ ಯಶವಂತಪುರದಿಂದ ಜು.16 ರಂದು (ಮಂಗಳವಾರ) ರಾತ್ರಿ 11:50 ಕ್ಕೆ ಹೊರಟು ಮರುದಿನ ಬೆಳಗ್ಗೆ ಅಂದರೆ ಜುಲೈ 17ರಂದು 11.30 ಗಂಟೆಗೆ ಕಲಬುರಗಿ ರೈಲು ನಿಲ್ದಾಣ ತಲುಪುತ್ತದೆ.
ಮರಳಿ ಕಲಬುರಗಿಯಿಂದ ಅದೇ ಅದೇ ದಿಕ್ಕಿನಲ್ಲಿ ಈ ವಿಶೇಷ ರೈಲು (ಸಂಖ್ಯೆ 06598) ಜುಲೈ 17 ರಂದು ಬುಧವಾರ ಮಧ್ಯಾಹ್ನ 1.30 ಗಂಟೆಗೆ ಬೆಂಗಳೂರಿನತ್ತ ಪ್ರಯಾಣ ಆರಂಭಿಸುತ್ತದೆ. ಅದೇ ದಿನ ರಾತ್ರಿ ಸುಮಾರು 11.55 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಲಿದೆ.
ರೈಲು ನಿಲುಗಡೆ ವಿವರ
ಬೆಂಗಳೂರು-ಕಲಬುರಗಿ- ಬೆಂಗಳೂರು ವಿಶೇಷ ರೈಲು ಎಸ್‌ಎಂವಿಡಿ ಹಾಗೂ ಯಶವಂತಪುರದಿಂದ ಹೊರಟ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಪ್ರಯಾಣಿಕರು ವೇಳಾಪಟ್ಟಿ ಗಮನಿಸಿ ಹೊರಡಬೇಕು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ತೆರಳುವ ಸಾವಿರಾರು ಜನರಿಗೆ ಈ ವಿಶೇಷ ರೈಲು ಸೌಲಭ್ಯ ಹೆಚ್ಚು ಅನುಕೂಲ ಒದಗಿಸಲಿದೆ. ಅಲ್ಲದೇ ಬೆಂಗಳೂರಿನಿಂದ ಕಲಬುರಗಿವರೆಗಿನ ನಡುವೆ ಬರುವ ಜಿಲ್ಲೆಗಳು, ಪಟ್ಟಣಗಳ ನಿವಾಸಿಗಳು ಈ ರೈಲು ಸೇವೆ ಅತ್ಯಧಿಕ ಉಪಯುಕ್ತವಾಗಿದೆ.












Click it and Unblock the Notifications