3ನೇ ಅಲೆ ಭೀತಿ: ಬೆಂಗಳೂರಿಗರಲ್ಲಿ ಭಯ ಹುಟ್ಟಿಸಿದ ಡೆಲ್ಟಾ ಪ್ಲಸ್ ಸೋಂಕಿತ ವ್ಯಕ್ತಿ!?
ಬೆಂಗಳೂರು, ಆಗಸ್ಟ್ 9: ಭಾರತದಲ್ಲಿ ಕೊವಿಡ್-19 ಸೋಂಕಿನ ಮೂರನೇ ಅಲೆಯ ಭೀತಿ ಆವರಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆರೆಹೊರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಂದ ಡೆಲ್ಟಾ ಪ್ಲಸ್ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಗೆ ಅಂತರ್-ರಾಜ್ಯ ಪ್ರಯಾಣಿಕರೇ ಪ್ರಮುಖ ಕಾರಣ ಎನ್ನುವುದು ಇದೀಗ ಗೊತ್ತಾಗುತ್ತಿದೆ.
ಕಳೆದ 10 ದಿನಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ವಲಯವಾರು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಪತ್ತೆಯಾದ ವ್ಯಕ್ತಿಯು ಕಾಣೆಯಾಗಿರುವುದು ಮತ್ತಷ್ಟು ಭಯವನ್ನು ಹುಟ್ಟು ಹಾಕುತ್ತಿದೆ.
ಕಳೆದ 10 ದಿನಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.0.1ರಷ್ಟು ಏರಿಕೆಯಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಬೆಂಗಳೂರಿನ 8 ವಲಯಗಳ ಪೈಕಿ 16 ವಾರ್ಡ್ ಗಳಲ್ಲಿ ಅತಿಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.(30ಕ್ಕಿಂತ ಹೆಚ್ಚು) ಬೇಗೂರಿನ 192ನೇ ವಾರ್ಡಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ಬಿಬಿಎಂಪಿ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ಕೆಲವು ದಿನಗಳಲ್ಲೇ ಈ ಪ್ರದೇಶದಲ್ಲಿ 50 ರಿಂದ 100 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ನೆರೆ ರಾಜ್ಯಗಳಿಂದ ಹೆಚ್ಚಿದ ಕೊರೊನಾವೈರಸ್ ಭೀತಿ
ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಿಂದ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವ ಅಪಾಯ ಹೆಚ್ಚಿದೆ ಎಂದು ವಲಯವಾರು ಅಧಿಕಾರಿಗಳು ಹೇಳುತ್ತಿದ್ದಾರೆ. ಮಹಾರಾಷ್ಟ್ರ, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಆಗಮಿಸುವ ವಲಸೆ ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯಿಂದ ಕೊವಿಡ್-19 ಸೋಂಕಿತ ಹರಡುವಿಕೆ ಆತಂಕ ಹೆಚ್ಚಾಗಿದೆ. ಈ ಪೈಕಿ ಅಂತರ್-ರಾಜ್ಯಗಳಿಂದ ಆಗಮಿಸಿದ ವೈದ್ಯಕೀಯ ಸಿಬ್ಬಂದಿಯಿಂದಲೇ ಹೆಚ್ಚು ಹೆಚ್ಚು ಸೋಂಕು ಹರಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.

ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿನ ಭೀತಿ ಸೃಷ್ಟಿ
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರುಮುಖವಾಗುತ್ತಿದ್ದಂತೆ ರಾಜ್ಯ ರಾಜಧಾನಿಯಲ್ಲಿ ಮೂರನೇ ಅಲೆಯ ಭೀತಿ ಸೃಷ್ಟಿಯಾಗುತ್ತಿದೆ. ಅಪಾರ್ಟ್ ಮೆಂಟ್, ಕಂಟೇನ್ಮೆಂಟ್, ಕಾಂಪ್ಲೆಕ್ಸ್ ಹಾಗೂ ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಬ್ಬರ ಪ್ರಯಾಣದ ಹಿನ್ನೆಲೆಯನ್ನು ಕೆದುಕಿ ನೋಡಲಾಗುತ್ತಿದೆ. ರಾಜರಾಜೇಶ್ವರಿ ನಗರ ಮತ್ತು ಯಲಹಂಕದ ಇತರ ವಲಯಗಳಲ್ಲಿ ಇರುವಂತೆ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿಲ್ಲ, ಆದರೂ ಒಂದು ಕಾಳಜಿಯಿದೆ ಎಂದು ವಲಯದ ಜಂಟಿ ಆಯುಕ್ತರಾದ ಎಂ ರಾಮಕೃಷ್ಣ ಹೇಳಿದ್ದಾರೆ. ಒಟ್ಟು 2.5 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಶೇ.104ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್ ನೀಡಲಾಗಿದೆ. ಈ ಪೈಕಿ 18-44 ವಯೋಮಾನದ ಶೇ.38ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡವರ ಪ್ರಮಾಣವನ್ನು ಬಹಿರಂಗಪಡಿಸಲು ವಲಯ ಅಧಿಕಾರಿಗಳು ನಿರಾಕರಿಸಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿನ ವ್ಯಕ್ತಿ ನಾಪತ್ತೆ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರ ತಳಿ ಕಾರಣ ಎಂಬುದನ್ನು ಈಗಾಗಲೇ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಬೆಂಗಳೂರಿನಲ್ಲೇ ಡೆಲ್ಟಾ ಪ್ಲಸ್ ಸೋಂಕು ತಗುಲಿರುವುದು ಗೊತ್ತಾಗಿದೆ. ಆದರೆ ಸೋಂಕಿತ ವ್ಯಕ್ತಿಯು ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. "ಕೊವಿಡ್-19 ಸೋಂಕು ತಪಾಸಣೆ ವೇಳೆ ವ್ಯಕ್ತಿಯು ತಪ್ಪು ವಿಳಾಸವನ್ನು ನೀಡಿದ್ದು, ದೂರವಾಣಿ ಸಂಖ್ಯೆಯು ಸ್ವಿಚ್ ಆಫ್ ಆಗಿದೆ. ಆತನ ಪತ್ತೆ ಮಾಡುವುದು ಕಷ್ಟಸಾಧ್ಯವಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ," ಎಂದು ವಲಯದ ಜಂಟಿ ಆಯುಕ್ತರಾದ ಎಂ ರಾಮಕೃಷ್ಣ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ಸೋಂಕಿತನ ಕುರಿತು ತಿಳಿದಿರುವ ಮಾಹಿತಿ ಎಷ್ಟಿದೆ?
ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಹರಡುವಿಕೆ ಆತಂಕ ಸೃಷ್ಟಿಸುವ ವ್ಯಕ್ತಿಯ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕಳೆದ ಜುಲೈ 15ರಂದು 32 ವರ್ಷದ ಆಸುಪಾಸಿನ ವ್ಯಕ್ತಿಯು ಕೊರೊನಾವೈರಸ್ ಸೋಂಕಿತ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. 14 ದಿನಗಳ ನಂತರ ಆತನನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಆ ವ್ಯಕ್ತಿಯ ಸಂಪರ್ಕದಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ರಾಜ್ಯದಲ್ಲಿ ಕೊವಿಡ್-19 ಸೋಂಕು ಹರಡುವಿಕೆ ಭೀತಿ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಳಿತ ಮುಂದುವರಿದಿದೆ. ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಭೀತಿ ಹೆಚ್ಚುತ್ತಿದ್ದು, ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.25ರಷ್ಟಿದೆ. ಒಂದು ದಿನದಲ್ಲಿ 1598 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1914 ಸೋಂಕಿತರು ಗುಣಮುಖರಾಗಿದ್ದಾರೆ. 24 ಗಂಟೆಗಳಲ್ಲಿ 20 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36793 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2918525ಕ್ಕೆ ಏರಿಕೆಯಾಗಿದೆ. 2857776 ಸೋಂಕಿತರು ಗುಣಮುಖರಾಗಿದ್ದು. 23930 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ 348 ಜನರಿಗೆ ಕೊವಿಡ್-19
ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 348 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1230486ಕ್ಕೆ ಏರಿಕೆಯಾಗಿದೆ. 1 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15914ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 8493 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಎಷ್ಟು ಮಂದಿಗೆ ಕೊವಿಡ್-19 ಪರೀಕ್ಷೆ?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 32,270 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,14,176 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,46,446 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 73,82,806 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,24,63,517 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 3,98,46,323 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.
Recommended Video

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?
ರಾಜ್ಯದಲ್ಲಿ ಈವರೆಗೂ 7,61,525 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,54,490 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,31,372 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 3,76,548 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,24,19,290 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 55,81,445 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 2,55,71,602 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 73,30,212 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications