Bengaluru Airport: ಗುಡ್‌ನ್ಯೂಸ್: ದೇಶದಲ್ಲೇ ದೊಡ್ಡ 'ಕಾರ್ಗೋ ಟರ್ಮಿನಲ್' ಆರಂಭ, ವಿಶೇಷತೆಗಳು
ಬೆಂಗಳೂರು, ಫೆಬ್ರವರಿ 27: ಬೆಂಗಳೂರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿತ್ತು. ಕಾರ್ಗೋ ಸಾಗಾಟದಲ್ಲೂ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿತ್ತು. ಇದೀಗ ಭಾರತದಲ್ಲೇ ಪ್ರಪ್ರಥಮವಾಗಿ ಅತೀ ದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ (DCT) ಆರಂಭಿಸಲಾಗಿದೆ. ಇದರಲ್ಲಿ ಏನೆಲ್ಲ ಸೌಕರ್ಯಗಳಿವೆ, ವೈಶಿಷ್ಟ್ಯಗಳೇನು, ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (KIAL) ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಬರೋಬ್ಬರಿ 2,45,000 ಚದರ ಅಡಿ ವ್ಯಾಪ್ತಿ ಹೊಂದಿರುವ ಈ ಕಾರ್ಗೋ ಟರ್ಮಿನಲ್ ಇದಾಗಿದೆ.

ಕೈಗಾರಿಕೆಗಳ ಸಂಪರ್ಕ ಮತ್ತು ಪೂರೈಕೆ ಸರಪಳಿಗಳ ಬಲಪಡಿಸುವಿಕೆಯಲ್ಲಿ ಹೊಸ ಕಾರ್ಗೋ ಟರ್ಮಿನಲ್ ಮಹತ್ವದ ಪಾತ್ರ ವಹಿಸಲಿದೆ. ದೇಶದಲ್ಲಿ ಸರಕು ಸಾಗಣೆ ಮತ್ತು ಪ್ರಾದೇಶಿಕ ವ್ಯಾಪಾರದ ಭವಿಷ್ಯವನ್ನು ಸುಸ್ಥಿರಗೊಳಿಸಲಿದೆ. ಜೊತೆಗೆ, ದೇಶೀಯ ವಾಯುಮಾರ್ಗ ಸರಕು ಸಾಗಣೆಯ ನಿರ್ವಹಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಹತ್ವದ ಹೆಸರು ತಂದುಕೊಡಲಿದೆ.
ಅತ್ಯುತ್ತಮ ಹಾಗೂ ಸುಧಾರಿತ ಸೌಕರ್ಯ
KIAL ವತಿಯಿಂದ ಒಟ್ಟು 7 ಎಕರೆಯಲ್ಲಿ ವ್ಯಾಪಿಸಿರುವ ಬೃಹತ್ ದೇಶೀಯ ಕಾರ್ಗೋ ಟರ್ಮಿನಲ್, ಸುಮಾರು 360,000 ಮೆಟ್ರಿಕ್ ಟನ್‌ಗಳ ಗರಿಷ್ಠ ನಿರ್ವಹಣಾ ಸಾಮರ್ಥ್ಯ ಮತ್ತು 400,000 ಮೆಟ್ರಿಕ್ ಟನ್‌ಗಳವರೆಗೆ ವಿಸ್ತರಣೆ ಮಾಡಲಾಗಿದೆ. ಸುಮಾರು 42 ಬೃಹತ್ ಟ್ರಕ್‌ಗಳು, 400ಕ್ಕೂ ಹೆಚ್ಚು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾರ್ಗೋ ಬೋಗಿಗಳು ಸಂಚರಿಸುವ ಸಾಮರ್ಥ್ಯವನ್ನು ಹೊಸ ಕಾರ್ಗೋ ಟರ್ಮಿನಲ್ ಹೊಂದಿದೆ.

ಸರಕು ಪರಿಶೀಲನೆಗೆ ಎಕ್ಸ್-ರೇ ಯಂತ್ರ
ಇಲ್ಲಿ ಸರಕುಗಳನ್ನು ಪರೀಕ್ಷಿಸುವ ಎಕ್ಸ್-ರೇ ಯಂತ್ರದ ಜೊತೆ ಸಂಯೋಜಿಸಲ್ಪಟ್ಟ ಸಾಧನಗಳು ಇಲ್ಲಿವೆ. ವಿಮಾನಕ್ಕೆ ಸರಕುಗಳನ್ನು ಸಾಗಿಸುವ ಮುನ್ನ ನಿರ್ವಹಣೆ ಮಾಡುವ ಸರಿಸುಮಾರು 30 ಕೇಂದ್ರಗಳು (ಯುಎಲ್‌ಡಿ), ನೈಜ ಸಮಯದಲ್ಲಿ ಸರಕುಗಳ ದತ್ತಾಂಶ ಸಂಗ್ರಹಿಸುವ 40 ಹ್ಯಾಂಡ್‌ಹೆಲ್ಡ್ ಟರ್ಮಿನಲ್ ಸಾಧನಗಳು ಮತ್ತು ಏಜೆಂಟರಿಗೆ ಸ್ವಯಂ ಸೇವಾ ಕಿಯೋಸ್ಕ್ ಸೌಲಭ್ಯಗಳು ಈ ಹೊಸ ವಾಯುಯಾನ ಸರಕು ಸಾಗಣೆ ಟರ್ಮಿನಲ್‌ನಲ್ಲಿ ಇಲ್ಲಿವೆ.

ನವೀನ ಮತ್ತು ಡಿಜಿಟಲ್ ಸೌಲಭ್ಯ
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಲಭ್ಯಗಳ ಜೊತೆಗೆ ಸುಸಜ್ಜಿತಗೊಂಡಿರುವ ಈ ಹೊಸ ಕಾರ್ಗೋ ಟರ್ಮಿನಲ್‌ನಲ್ಲಿ, ಸರಕುಗಳ ಸಾಗಣೆಯ ನೈಜ ಸಮಯದ ಟ್ರ್ಯಾಕಿಂಗ್, ದತ್ತಾಂಶ ವಿಶ್ಲೇಷಣೆ ಪರಿಕರಗಳು, ಬಾರ್‌ಕೋಡ್ ಮತ್ತು ಕ್ಯೂಆರ್ ಕೋಡ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ವರ್ಧಿತ ಸಂವಹನ ವ್ಯವಸ್ಥೆಗಳಂತಹ ನವೀನ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಈ ಸೌಲಭ್ಯಗಳು ತಡೆರಹಿತ ದತ್ತಾಂಶ ವಿನಿಮಯಕ್ಕೆ ಅವಕಾಶ ಕಲ್ಪಿಸಿವೆ. ಒಟ್ಟಾರೆ ಸರಕು ಸಾಗಣೆ ಪ್ರಕ್ರಿಯೆಯ ಸಮಯ ಕಡಿಮೆಗೊಳಿಸುತ್ತದೆ ಎಂದು ಕೆಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೊಸ ಟರ್ಮಿನಲ್ ಮಾನವನ ಅವಲಂಬನೆ ಕಡಿಮೆ ಮಾಡುತ್ತದೆ. ವೇಗ ಮತ್ತು ಸುರಕ್ಷಿತವಾಗಿ ಸರಕು ನಿರ್ವಹಣೆ ಮಾಡಲು ಅನುವು ಮಾಡಿಕೊಡಲಿದೆ. ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಕಾರ್ಯಾಚರಣೆ, ಪೂರೈಕೆ ಸರಪಳಿಗಳನ್ನು ಸುಲಲಿತಗೊಳಿಸುತ್ತದೆ.
ನಿರ್ವಹಣಾ ಸಾಮರ್ಥ್ಯ ಹೆಚ್ಚಳ
ನಿತ್ಯ ಮಾವಿನಹಣ್ಣು, ಕೊತ್ತಂಬರಿ ಸೊಪ್ಪು, ಪ್ರೇಮಿಗಳ ದಿನಾಚರಣೆಯಂತ ಸಂದರ್ಭದಲ್ಲಿ ಹೂವುಗಳು ಇನ್ನಿತರ ಸರಕುಗಳ ರಫ್ತಿನಲ್ಲಿ ಬೆಂಗಳೂರು ಏರ್‌ಪೋರ್ಟ್ ಖ್ಯಾತಿ ಪಡೆದಿದೆ. ಹೊಸದಾಗಿ ದೇಶೀಯ ಕಾರ್ಗೋ ಟರ್ಮಿನಲ್‌ನ್ನು ಆರಂಭಿಸಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಸರಕು ಸಾಗಣೆ ನಿರ್ವಹಣಾ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಇದಕ್ಕೆ ಪೂರಕವಾಗಿ ಈ ಕಾರ್ಗೋ ಟರ್ಮಿನಲ್ ನಿರ್ಮಿಸಲಾಗಿದೆ.
ಕೆಐಎ ಭವಿಷ್ಯದಲ್ಲಿ ವಾಯು ಸರಕು ಸಾಗಾಣೆ ಕೇಂದ್ರ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಸತ್ಯಕಿ ರಘುನಾಥ್ ಮಾತನಾಡಿ, ದೇಶೀಯ ಕಾರ್ಗೋ ಟರ್ಮಿನಲ್ ಆರಂಭವು ಸುಸ್ಥಿರ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಾತಾವರಣ ಅಳವಡಿಸಿಕೊಳ್ಳುವ ಮೂಲಕ, ದೇಶೀಯವಾಗಿ ವಾಯುಮಾರ್ಗ ಸರಕು ಸಾಗಣೆಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಕೆಗೆ ಅನುಕೂಲ ಒದಗಿಸುತ್ತದೆ. ಭವಿಷ್ಯದಲ್ಲಿ ಬೆಂಗಳೂರು ಏರ್‌ಪೋರ್ಟ್ ವಾಯು ಸರಕು ಸಾಗಣೆ ಕೇಂದ್ರವಾಗಲಿದೆ ಎಂದು ತಿಳಿಸಿದರು.












Click it and Unblock the Notifications