Bengaluru Yelahanka Flyover: ನೆನೆಗುದಿಗೆ ಬಿದ್ದ ಯಲಹಂಕ ಮೇಲ್ಸೇತುವೆ ಕಾಮಗಾರಿ- ಹೆಚ್ಚಿದ ಸಂಚಾರ ದಟ್ಟಣೆ, ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 30: ಆರ್‌ಎಂಝಡ್ ಮಾಲ್ ಮತ್ತು ರೈಲ್ ವ್ಹೀಲ್ ಫ್ಯಾಕ್ಟರಿ ನಡುವೆ 1.8 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಕಾರಣ ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ ಮೂಲಕ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಕುರಿತ ವರದಿಯನ್ನು 'ಟೈಮ್ಸ್ ಆಫ್ ಇಂಡಿಯಾ' ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಹೇಳುವ ಪ್ರಕಾರ, ದೊಡ್ಡಬಳ್ಳಾಪುರ ಮುಖ್ಯರಸ್ತೆಗೆ ಹೋಗುವ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದು ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು.

ಆದರೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪ್ರಕಾರ, ಈ ಪ್ಲೈಓವರ್ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷವಾದರೂ ಬೇಕಾಬಹುದು.
175 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿ 2022ರ ಜನವರಿಯಲ್ಲಿ ಆರಂಭಗೊಂಡಿದೆ. ಇದು 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ರಸ್ತೆಯಲ್ಲಿ ವಾಹನಗಳ ಓಡಾಟ, ಕಚ್ಚಾವಸ್ತುಗಳ ಕೊರತೆ, ಜಲ್ಲಿ, ಮರಳಿನ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ.
ವಿವಿಧ ಕಾರಣಗಳಿಂದ ಯೋಜನೆಯು ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ. ಸಾಧ್ಯವಾದಷ್ಟು ಬೇಗ ಈ ಫ್ಲೈಓವರ್ ಅನ್ನು ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ 'ಟೈಮ್ಸ್ ಆಫ್ ಇಂಡಿಯಾ'ಗೆ ಹೇಳಿದ್ದಾರೆ.
ಕಾಮಗಾರಿ ಆರಂಭದ ದಿನಗಳಲ್ಲಿ ಯಲಹಂಕ ಪೊಲೀಸ್ ಠಾಣೆ ಜಂಕ್ಷನ್‌ನಿಂದ ರೈಲ್ ವೀಲ್ ಫ್ಯಾಕ್ಟರಿವರೆಗೆ ಸಂಚಾರ ವಿರಳವಾಗಿತ್ತು ಎಂದು ಪುಟ್ಟೇನಹಳ್ಳಿ ನಿವಾಸಿ ಸುದರ್ಶನ್ ಪಿ ತಿಳಿಸಿದ್ದಾರೆ.

ಆದರೆ, ಈಗ ಟ್ರಾಫಿಕ್ ಜಾಮ್ ಅಥವಾ ವಾಹನಗಳ ನಿಧಾನ ಚಲನೆಯನ್ನು ದಿನದ ಯಾವುದೇ ಸಮಯದಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಸಾಫ್ಟ್‌ವೇರ್ ಇಂಜಿನಿಯರ್‌ಗಳು ನಗರದ ಉತ್ತರ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಿನ ಟ್ರಾಫಿಕ್ ಜಾಮ್ ಬಗ್ಗೆ ಅವರಿಂದ ದೂರುಗಳು ಕೇಳಿಬಂದಿವೆ.
'ಫ್ಲೈಓವರ್ ಕಾಮಗಾರಿ ಪ್ರಾರಂಭವಾದಾಗಿನಿಂದ ನನ್ನ ಕಚೇರಿಗೆ ಪ್ರಯಾಣಿಸಲು ಕನಿಷ್ಠ 30 ನಿಮಿಷಗಳಷ್ಟು ವಿಳಂಬವಾಗುತ್ತಿದೆ. ಸಂಜೆ ಮನೆಗೆ ವಾಪಸಾಗುವಾಗಲೂ ಇದೇ ರೀತಿಯ ಸಮಸ್ಯೆ ಎದುರಿಸುತ್ತೇವೆ' ಎಂದು ಸಾಫ್ಟ್‌ವೇರ್ ಎಂಜಿನಿಯರ್ ರಾಹುಲ್ ರಾಜ್ 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.
ಪುಟ್ಟೇನಹಳ್ಳಿ, ರಾಜಾನುಕುಂಟೆ ಮತ್ತು ದೊಡ್ಡಬಳ್ಳಾಪುರ ಕಡೆಗೆ ಹೋಗುವ ವಾಹನ ಸವಾರರಿಗೆ ಸಿಗ್ನಲ್ ಮುಕ್ತ ಮಾರ್ಗವನ್ನು ಒದಗಿಸುವ ಉದ್ದೇಶವನ್ನು ಫ್ಲೈಓವರ್ ಯೋಜನೆ ಹೊಂದಿದೆ. ಯಲಹಂಕ, ಯಲಹಂಕ ನ್ಯೂ ಟೌನ್ ಮತ್ತು ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಾಲ್ಕು ಪಥದ ಮೇಲ್ಸೇತುವೆಯನ್ನು ಬಿಬಿಎಂಪಿ ನಿರ್ಮಿಸುತ್ತಿದೆ.












Click it and Unblock the Notifications