ರಾಹುಲ್ ಗಾಂಧಿಯನ್ನು ಹಾಡಿ ಹೊಗಳಿದ ಹುಚ್ಚಾ ವೆಂಕಟ್ !
ಬೆಂಗಳೂರು, ಆಗಸ್ಟ್ 02: ಸದಾ ವಿವಾದ ಸೃಷ್ಟಿಸುವಲ್ಲಿಯೇ ಹೆಸರಾದ ಬಿಗ್ ಬಾಸ್ ಖ್ಯಾತಿಯ ಹುಚ್ಚಾ ವೆಂಕಟ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದ್ದಾರೆ.
ಫೇಸ್ ಬುಕ್ ನಲ್ಲಿ ಅವರು ಪೋಸ್ಟ್ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ, "ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಅವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರ ನಡೆ ಶ್ಲಾಘನೀಯ" ಎಂದಿದ್ದಾರೆ.

"ಪಕ್ಷ ಬೇರೆ, ವ್ಯಕ್ತಿ ಬೇರೆ, ವ್ಯಕ್ತಿತ್ವ ಬೇರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದಿರಬಹುದು. ಆದರೆ ಅನಾರೋಗ್ಯದ ಸಂದರ್ಭದಲ್ಲಿ ಅವೆಲ್ಲವನ್ನೂ ಮರೆತು ಅವರಿಗೆ ಧೈರ್ಯ ಹೇಳಬೇಕು. ರಾಹುಲ್ ಗಾಂಧಿ ಹಾಗೆಯೇ ಮಾಡಿದ್ದಾರೆ. ಈ ವಿಷಯದಲ್ಲಿ ಅವರಿಗೆ ನನ್ನ ಅಭಿನಂದನೆ" ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಹುಚ್ಚಾ ವೆಂಕಟ್ ಅವರು ಹೇಳಿದರು.
ಜ್ವರ ಮತ್ತು ಮೂತ್ರನಾಳದ ಸೋಂಕಿನ ಸಮಸ್ಯೆಯಿಂದ ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 94 ವರ್ಷದ ಅವರನ್ನು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದವರು ಭೇಟಿ ಮಾಡಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications