Bengaluru Weather: ದೆಹಲಿಗಿಂತ ಬೆಂಗಳೂರಿನ ತಾಪಮಾನ ಹೆಚ್ಚಳ; ಹವಾಮಾನ ಇಲಾಖೆ ಹೇಳಿದ್ದೇನು?
ಬೆಂಗಳೂರು ಸಿಲಿಕಾನ್ ಸಿಟಿ, ಐಟಿ ಸಿಟಿ ಎಂದೆಲ್ಲಾ ಹೆಸರು ಪಡೆದಿದೆ. ಅದಕ್ಕೂ ಮುನ್ನ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯಲಾಗುತ್ತಿತ್ತು, ಬೇಸಿಗೆಯಲ್ಲೂ ಬೆಂಗಳೂರು ಕೂಲ್ ಆಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೂ ಬೇಸಿಗೆ ಬಿಸಿ ತಟ್ಟಲು ಆರಂಭಿಸಿದೆ. 2025ರಲ್ಲಿ ಕೂಡ ಬೇಸಿಗೆ ತಾಪ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫೆಬ್ರವರಿ 17 ರಂದು (ಸೋಮವಾರ) ನಗರದಲ್ಲಿ ತಾಪಮಾನ ಹೊಸ ದಾಖಲೆ ಬರೆದಿದೆ. ದೆಹಲಿಯ ತಾಪಮಾನವನ್ನು ಮೀರಿಸಿರುವುದು ವಿಶೇಷ. ಸೋಮವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ನಗರದ ತಾಪಮಾನ ಮತ್ತಷ್ಟು ಹೆಚ್ಚಲಿದೆ ಎಂದು ಭಾರತೀಯ ಹಮಾಮಾನ ಇಲಾಖೆ ( ಐಎಂಡಿ) ತಿಳಿಸಿದೆ.

ವರ್ಷಪೂರ್ತಿ ಆಹ್ಲಾದಕರ ವಾತಾವರಣ ಹೊಂದಿರುವ ಬೆಂಗಳೂರು, ಮುಂದಿನ ದಿನಗಳಲ್ಲಿ ತಾಪಮಾನದ ವಿಚಾರದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನೇ ಮೀರಿಸಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚವುದು ಖಚಿತವಾಗಿದೆ. 2024ರ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೆಂಗಳೂರಿನ ತಾಪಮಾನ 2.7 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ದೆಹಲಿಯಲ್ಲಿ ಸೋಮವಾರ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬೆಂಗಳೂರಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ.
ಫೆಬ್ರವರಿ 17, 2025 ರಂದು 35.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಈವರೆಗಿನ ಬಿಸಿಯಾದ ದಿನವಾಗಿದೆ. ಹಗಲಿನ ಹೊತ್ತು ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಸಂಜೆ ವೇಳೆ ಚಳಿ ವಾತಾವರಣ ಇರುತ್ತದೆ. ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರುತ್ತದೆ, ಆದರೂ ಬೆಂಗಳೂರು ದೆಹಲಿಗಿಂತ ಹೆಚ್ಚಿನ ತಾಪಮಾನವಿರುತ್ತದೆ.
ಬೇಸಿಗೆ ಯಾವಾಗ ಆರಂಭ?
ಸಾಮಾನ್ಯವಾಗಿ ಮಾರ್ಚ್ ಮೊದಲವಾರದಲ್ಲಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗುತ್ತದೆ. ಆದರೆ ಈ ವರ್ಷ ಫೆಬ್ರವರಿ ಕೊನೆಯ ವಾರದಲ್ಲೇ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಮಾರುತಗಳು ಬೀಸದೆ ಇರುವುದೇ ಇದಕ್ಕೆ ಕಾರಣ ಎಂದು ಐಎಂಡಿ ತಿಳಿಸಿದೆ. ಉತ್ತರ ಮಾರುತಗಳು ತಾಪಮಾನವನ್ನು ತಂಪು ಮಾಡುವ ಮೂಲಕ ಸಮತೋಲಗೊಳಿಸಲು ಸಹಾಯ ಮಾಡುತ್ತದೆ. ಲಾ ನಿನಾ ವಿದ್ಯಮಾನವು ಬೆಂಗಳೂರಿನ ಹವಾಮಾನದ ಮೇಲೆ ಪರಿಣಾಮ ಬೀರುತ್ತಿರಬಹುದು ಎಂದು ಹವಾಮಾನಶಾಸ್ತ್ರಜ್ಞರು ಸುಳಿವು ನೀಡಿದ್ದಾರೆ.












Click it and Unblock the Notifications