Bengaluru: 24x7 ಹೋಟೆಲ್ ತೆರೆಯಲು ಸರ್ಕಾರಕ್ಕೆ ಸಂಘದಿಂದ ಮತ್ತೆ ಮನವಿ
ಬೆಂಗಳೂರು, ಜೂನ್ 05: ಗ್ರಾಹಕ ಸೇವೆ ಹಾಗೂ ವ್ಯಾಪಾರದ ಹಿತದೃಷ್ಟಿಯಿಂದ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (BBHA) ಮತ್ತೊಮ್ಮೆ ಮನವಿ ಮಾಡಿದೆ. ಈ ಬಾರಿ ಬೇಡಿಕೆ ಈಡೇರಿಸದಿದ್ದರೆ, ಒಂದು ತಿಂಗಳ ನಂತರ ಕಾನೂನು ಹೋರಾಟ ಮಾಡುವ ಬಗ್ಗೆ ಸಂಘ ಎಚ್ಚರಿಕೆ ನೀಡಿದೆ.
ಈ ಹಿಂದೆಯು ಹೋಟೆಲುಗಳ ಸಂಘ ಹಲವು ಬಾರಿ ಬಿಜೆಪಿ ಸರ್ಕಾರಕ್ಕೆ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು. ಹೋಟೆಲ್, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲರ್ ಮತ್ತಿತರ ಅಂಗಡಿಗಳನ್ನು ದಿನದ 24ಗಂಟೆಯೂ ತೆರೆದಿಡಲು ಅನುಮತಿ ನೀಡುವಂತೆ ಕೇಳಿತ್ತು. ಆದರೆ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿದರೂ ಭದ್ರತೆ ದೃಷ್ಠಿಯಿಂದ ಪೊಲೀಸ್ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರು ಹಲವು ಬಾರಿ ಸಭೆಗಳನ್ನು ನಡೆಸಿ ಚರ್ಚಿಸಿದ್ದರು.

ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಾಗೂ ಬೆಂಗಳೂರು ಪೊಲೀಸರಿಗೆ ಮತ್ತೆ ಮನವಿ ಸಲ್ಲಿಸಿದೆ. ಗ್ರಾಹಕರ ಸೇವೆ ಹಾಗೂ ವ್ಯಾಪಾರಿಗಳ ಅನುಕೂಲತೆಗಾಗಿ 24x7 ಹೋಟೆಲ್ ಸೇರಿದಂತೆ ಇನ್ನಿತರ ಮಳಿಗೆ ತೆರಯಲು 30 ದಿನದೊಳಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ. ಒಂದು ವೇಳೆ ಅನುಮತಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.
ಒಪ್ಪದ ಪೊಲೀಸ್ ಇಲಾಖೆ: ನಿರೀಕ್ಷೆ ಹುಸಿ
ಈ ಹಿಂದೆಯೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್ ಸೇವೆ ನೀಡಲು ಅನುಮತಿಸಿದ್ದವು. ಆದರೆ ಕೆಲವು ಕಾರಣ ನೀಡಿದ್ದ ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಪೊಲೀಸ್ ಇಲಾಖೆ ನಡೆಯಿಂದ ಬೆಂಗಳೂರಿನ ಜನದಟ್ಟಣೆಯ ಭಾಗದ ಹೋಟೆಲ್, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲರ್, ಬೇಕರಿಯಂತಹ ಇನ್ನಿತರ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿತ್ತು. ವ್ಯಾಪಾರ ಮಾರ್ಗಸೂಚಿ ಹೊರಡಿಸಿದ್ದರೂ ಇದರ ಪ್ರಯೋಜನವಾಗಿಲ್ಲ ಎಂದರು.
ಕೊರೊನಾ ನಂತರ ನಿರಂತರ ಬೆಲೆ ಏರಿಕೆಗಳಿಂದ ವ್ಯಾಪಾರ ಉದ್ಯಮಕ್ಕೆ ಹೊಡೆತ ಬೀಳುತ್ತಲೆ ಇದೆ. ಉದ್ಯಮದ ಏಳಿಗೆಗಾಗಿ ಹಾಗೂ ತಡರಾತ್ರಿವರೆಗೆ ಸೇವೆ ಬಯಸುವ ಗ್ರಾಹಕರ ಹಿತ ದೃಷ್ಟಿಯಿಂದ ಈಗ ಮತ್ತೊಮ್ಮೆ ಕಾಂಗ್ರೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ. ಬೆಂಗಳೂರು ಪೊಲೀಸರಿಗೂ ಮನವಿ ಮಾಡಲಾಗಿದೆ. ಒಂದು ತಿಂಗಳೊಳಗೆ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ರಾತ್ರಿಯೀಡಿ ಹೋಟೆಲ್ ತೆರೆದರೆ ಆಗುವ ಲಾಭ?
ಸರ್ಕಾರ ಮನವಿಗೆ ಸ್ಪಂದಿಸಿದರೆ ವ್ಯಾಪಾರೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಅಧಿಕ ಉದ್ಯೋಗ ಸೃಷ್ಟಿ ಜೊತೆಗೆ ತಡರಾತ್ರಿ ಓಡಾಡುವ ಸವಾರರಿಗೆ, ಪ್ರಯಾಣಿಕರಿಗೆ, ಆಟೋ ಚಾಲಕರು ಸೇರಿದಂತೆ ಇನ್ನಿತರ ವಿಧದ ಗ್ರಾಹಕರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ. ಇದರಿಂದ ವ್ಯಾಪಾರವು ವೃದ್ಧಿಯಾಗುತ್ತದೆ. ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳನ್ನು ರಾತ್ರಿಯೀಡಿ ತೆರೆಯಲು ಅನುಮತಿಸಿದರೆ ಗುಂಡಾಗಿರಿ ಸಹ ಕಡಿಮೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ರಾತ್ರಿಯಿಡಿ ಹೋಟೆಲ್ ಇನ್ನಿತರ ಅಂಗಡಿ ಮುಂಗಟ್ಟು ತೆರೆದಿಡುವ ನಿರ್ಧಾರಕ್ಕೆ ಕೆಲವು ಮಳಿಗೆ ಮಾಲಿಕರು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡಿ ತೆರೆದರೆ ಸಂಪನ್ಮೂಲ ನಷ್ಟವಾಗುತ್ತದೆ. ಇದರಿಂದ ಪ್ರಯೋಜನವಿಲ್ಲ ಅಂತಲೂ ಎಂಜಿ ರಸ್ತೆ ಕೆಲವ ಹೋಟೆಲುಗಳ ಮಾಲೀಕರು ಅಭಿಪ್ರಾಯ ಹೊರ ಹಾಕಿದ್ದಾರೆ.












Click it and Unblock the Notifications