ಬೆಂಗಳೂರು ಅಗ್ನಿ ದರುಂತ: ಅಗ್ನಿ ಸುರಕ್ಷತೆಗೆ ಹೋಟೆಲುಗಳ ಸಂಘದ ಕ್ರಮಗಳೇನು?
ಬೆಂಗಳೂರು, ಅಕ್ಟೋಬರ್ 22: ಬೆಂಗಳೂರಿನಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಕಡೆ ಅಗ್ನಿ ದರುಂತೆ ನಡೆದಿದೆ. ಅದರಲ್ಲೂ ಕೋರಮಂಗಲದ ಮಡ್ ಪೈಪ್ ಕೆಫೆ ಎಂಬ ಬಾರ್ ನಲ್ಲಿ ನಡೆದ ಅವಘಡ ಭಾರೀ ಸುದ್ದಿ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ 'ಬೃಹತ್ ಬೆಂಗಳೂರು ಹೋಟೆಲುಗಳ ಸಂಘ' (BBHA) ತಮ್ಮ ಹೋಟೆಲುಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮ, ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಡ್ ಕೆಫೆ ಪಬ್ ನಲ್ಲಿ ಅಗ್ನಿ ದುರಂತ ನಡೆದಿರುವುದು ದುರದೃಷ್ಟಕರವಾದ ಸಂಗತಿ. ನಮ್ಮ ಗ್ರಾಹಕರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು, ಮಾರ್ಗಸೂಚಿಗಳನ್ನು ಕ್ರಮಬದ್ಧವಾಗಿ ನೋಡಿಕೊಳ್ಳುವುದು ಎಲ್ಲಾ ಮಾಲೀಕರ ಕರ್ತವ್ಯವಾಗಿರುತ್ತದೆ. ಈಗಾಗಲೇ ಹೆಚ್ಚಿನ ಮಾಲೀಕರು ಇದರ ಬಗ್ಗೆ ಸಂಪೂರ್ಣವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಅಗತ್ಯವಿರುವ Fire Extinguisher ಮತ್ತು ಗ್ಯಾಸ್ ಬಳಕೆಯ ಬಗ್ಗೆ ತಿಳುವಳಿಕೆಗಳನ್ನು ಕೊಟ್ಟಿರುತ್ತಾರೆ. ಹೀಗಿದ್ದರೂ ಯಾವುದೇ ಕಾರಣಕ್ಕೂ ನಮ್ಮ ಅಜಾಗರೂಕತೆಯಿಂದ ದುರಂತಗಳು ನಡೆಯಬಾರದೆಂಬುದು ಹೋಟೆಲ್ ಮಾಲೀಕರ ಸಂಘದ ಆಶಯ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಇನ್ನೂ ಹೆಚ್ಚಿನ ಸುರಕ್ಷತಾ ಕಾರ್ಯಕ್ರಮಗಳು, ತರಬೇತಿಗಳು, ಪೋಸ್ಟರ್ ಗಳು ಹಾಗೂ ಮಾರ್ಗಸೂಚಿಗಳನ್ನು ನಮ್ಮ ಎಲ್ಲಾ ಸದಸ್ಯರಿಗೆ ಹೆಚ್ಚಿನ ರೀತಿಯಲ್ಲಿ ತಿಳಿಯಪಡಿಸಲು ಮುಂದಾಗಲಿದ್ದೇವೆ.
ನೋಟಿಸ್ ನೀಡಿ ಸರಿಪಡಿಸಿ
ಅಗ್ನಿ ದುರಂತ ಎಂಬುದು ಒಂದು ಆಕಸ್ಮಿಕ. ಪ್ರತಿಯೊಂದು ಬಾರ್ ಅಥವಾ ಪಬ್ ಸರ್ಕಾರದ ನಿಯಮದ ಪ್ರಕಾರ ಪರವಾನಿಗೆ (License) ಪಡೆದು ನಡೆಸಲಾಗುತ್ತದೆ. ಕಟ್ಟಡ ನಿರ್ವಹಣೆ, ಕಾರ್ಮಿಕರ ಸಂಬಳ, ತೆರಿಗೆ ಹಾಗೂ ಇತರ ಖರ್ಚು ವೆಚ್ಚಗಳ ಹೊರೆ ಬಹಳಷ್ಟು ಇರುವುದರಿಂದ ಯಾವುದೇ ತಪ್ಪು ಕಂಡಲ್ಲಿ ಮುನ್ಸೂಚನಾ ನೋಟೀಸ್ ನೀಡಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಮುಚ್ಚಿಸುವುದೊಂದೇ ಪರಿಹಾರವಲ್ಲ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ತಕ್ಷಣ ಅಧಿಕಾರಿಗಳು ಇದರ ಕಡೆ ಗಮನಹರಿಸಿ ಅಗತ್ಯವಿರುವ ಎಲ್ಲ ರೀತಿಯ ಕಾನೂನುಗಳನ್ನು ಪರಿಪಾಲನೆ ಮಾಡಲು ನಮ್ಮೊಂದಿಗೆ ಚರ್ಚಿಸುವುದು ಸೂಕ್ತ. ನಮ್ಮ ಕಾರ್ಮಿಕರ ಹಾಗೂ ಗ್ರಾಹಕರ ಸುರಕ್ಷತೆ ಕಾಪಾಡುವಲ್ಲಿ ನಾವು ಕೂಡ ಕೈಜೋಡಿಸಲಿದ್ದೇವೆ ಎಂದರು.
ಈ ವಲಯದಿಂದ ಹೆಚ್ಚು ತೆರಿಗೆ
ಉದ್ಯಮಿಯಾಗು ಉದ್ಯೋಗ ಕೊಡು ಎಂದು ಹೇಳುವ ಸರ್ಕಾರದ ನುಡಿಗೆ ಅನುಗುಣವಾಗಿ ಪ್ರತಿಯೊಂದು ಉದ್ಯಮಿಯೂ ಕೂಡ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ, ರಾಜ್ಯದ ಬೆಳವಣಿಗೆಗೆ ಬಹಳಷ್ಟು ತೆರಿಗೆಯನ್ನು ಸಂದಾಯ ಮಾಡುತ್ತಿರುವ ಉದ್ಯಮಿಗಳಿಗೆ ಈ ರೀತಿಯ ಅವೈಜ್ಞಾನಿಕವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಿರುವುದು ಸಮಂಜಸವಲ್ಲ. ಈ ವಿಚಾರದ ಕುರಿತು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರಲಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications