ಬೆಂಗಳೂರಿಗೆ ಫ್ಲೈಟ್‌ನಲ್ಲಿ ಬಂದು ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳನ ಬಂಧನ, ಅಪಾರ ಚಿನ್ನ ವಶ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ತಕ್ಕಮಟ್ಟಿಗೆ ಕಡಿಮೆ ಆಗುತ್ತಿವೆ ಎನ್ನುಷ್ಟರಲ್ಲಿ ಹೊಸದೊಂದು ಹೈಟೆಕ್ ಕಳ್ಳತನ ಪ್ರಕರಣ ವರದಿ ಆಗಿದೆ. ಬೆಂಗಳೂರಿಗೆ ಫ್ಲೈಟ್‌ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಹೈಟೆಕ್ ಕಳ್ಳನನ್ನು ವಿಲ್ಸನ್ ಗಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿಗೆ ಹೊರ ರಾಜ್ಯದಿಂದ ಬಂದು ಇಲ್ಲಿನ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದವನ ನಸೀಬು ಈ ಬಾರಿ ಕೆಟ್ಟಿತ್ತು. ಚಿನ್ನಾಭರಣ ಸೇರಿ ಕೈಗೆ ಸಿಕ್ಕಿದ್ದೆಲ್ಲ ಕದ್ದು ಪರಾರಿಯಾಗುತ್ತಿದ್ದವ ಈ ಬಾರಿ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಹೈಟೆಕ್ ಕಳ್ಳ ವಿನೋದ್ ನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಅಪಾರ ಚಿನ್ನಾಭರಣ ಮತ್ತು ವಿದೇಶಿ ಲಾಲರ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದ ಹಿಂದೆ ಯಾರೆಲ್ಲ ಕೈವಾಡ ಇದೆ, ಕಳ್ಳತನ, ಮನೆ ಗುರುತಿಸುವಲ್ಲಿ ಯಾರಾದರು ಸಹಾಯ ಮಾಡುತ್ತಿದ್ದರಾ ಎಂದೆಲ್ಲ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಆರೋಪಿ ಪತ್ತೆ ಆಗಿದ್ದು ಹೇಗೆ?
ನೆರೆ ರಾಜ್ಯದ ಹೈದರಾಬಾದ್ ನಿಂದ ನೇರವಾಗಿ ಪ್ಲೈಟ್ ನಲ್ಲಿ ಈ ಕಳ್ಳ ವಿನೋದ್ ಬೆಂಗಳೂರಿಗೆ ಬರುತ್ತಿದ್ದ. ಪ್ರತಿ ಬಾರಿಯು ಹೀಗೆ ಬಂದು ತನ್ನ ಕೈಚಳಕ ತೋರಿಸುತ್ತಿದ್ದ. ಇಲ್ಲಿನ ಒಂಟಿ ದೊಡ್ಡ ದೊಡ್ಡ ಮನೆಗಳನ್ನು ನೋಡಿ ಕಳ್ಳತನ ಮಾಡಿ, ಕೈಗೆ ಸಿಕ್ಕಿದ್ದೆಲ್ಲ ದೋಚಿ ಮತ್ತೆ ಪರಾರಿಯಾಗುತ್ತಿದ್ದ. ಕಳ್ಳತನ ಬಳಿಕ ಏನು ಆಗಿಲ್ಲ ಎಂಬಂತೆ ಮರಳಿ ವಿಮಾನದಲ್ಲಿ ತೆರಳುತ್ತಿದ್ದ ಎಂದು ತಿಳಿದು ಬಂದಿದೆ.
270 ಗ್ರಾಂ ಚಿನ್ನ, 300 ಡಾಲರ್ ವಿದೇಶಿ ಕರೆನ್ಸಿ ವಶ
ಈ ಬಾರಿ ವಿಲ್ಸನ್ ಗಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಒಂಟಿ ಮನೆಗೆ ಕನ್ನ ಹಾಕಿದ್ದರು. ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 270 ಗ್ರಾಂ ಚಿನ್ನ ಹಾಗೂ 300 ಡಾಲರ್ ವಿದೇಶಿ ಕರೆನ್ಸಿ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಲಭ್ಯ ಮಾಹಿತಿ, ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡು, ಆರೋಪಿ ವಿನೋದ್ ಬಂಧಿಸುವಲ್ಲಿ ಯಶಸ್ವಿಯಾದರು.
ಡಾಲರ್ ಎಕ್ಸ್‌ಚೇಂಜ್ ಮಾಡಿದ್ದ ಆರೋಪಿ
ಇನ್ನು ಬೆಂಗಳೂರಿನೀಂದ ಕಳ್ಳತನ ಮಾಡಿದ್ದ ಆರೋಪಿ ವಿನೋದ್ 270 ಡಾಲರ್ ಅನ್ನು ದೆಹಲಿಯಲ್ಲಿ ರೂಪಾಯಿಗೆ ಬದಲಾವಣೆ (ಎಕ್ಸ್ ಚೇಂಜ್) ಮಾಡಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಈ ಹಿಂದೆಯು ಈತ ಸುಮಾರು 30ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಸದ್ಯ ಆರೋಪಿಯಿಂದ ಆರೋಪಿಯಿಂದ 42 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 30 ಡಾಲರ್ ನೋಟು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Click it and Unblock the Notifications
