'ಸದ್ಯಕ್ಕಂತೂ ನಮಗಿಲ್ಲಪ್ಪಾ ಕಸ ತಾಪತ್ರಯ'
ಬೆಂಗಳೂರು, ಜೂ. 17: ಅತ್ತ ದೆಹಲಿಯಲ್ಲಿ ಪೌರ ಕಾರ್ಮಿಕರು ಪ್ರತಿಭಟನೆಗೆ ಇಳಿದ ಪರಿಣಾಮ ರಾಜಧಾನಿ ವಾಸನೆ ನಗರವಾಗಿದ್ದರೆ, ಇತ್ತ ಬೆಂಗಳೂರಲ್ಲೂ ಕಸದ ಸಮಸ್ಯೆ ತಲೆ ಎತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಬಳಿಯ ಟೆರ್ರಾ ಫಾರ್ಮ ಕಸ ವಿಲೇವಾರಿ ಘಟಕಕ್ಕೆ ಬೆಂಗಳೂರಿನಿಂದ ತೆರಳುತ್ತಿದ್ದ ಕಸದ ಲಾರಿಗಳನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ಆರಂಭಿಸಿದ್ದಾರೆ.
ಆದರೆ ಜಯನಗರ ವ್ಯಾಪ್ತಿಯ ಭಾಗದಲ್ಲಿ ಸದ್ಯಕ್ಕೆ ಕಸದ ಸಮಸ್ಯೆ ತಲೆದೊರಿಲ್ಲ. ಜಯನಗರ ಸುತ್ತಮುತ್ತಲ ಪ್ರದೇಶದ ಕಸವನ್ನು ಬನ್ನೇರುಘಟ್ಟ ಸಮೀಪದ ಬೆಂಕಿಪುರಕ್ಕೆ ಕೊಂಡೊಯ್ಯಲಾಗುತ್ತಿದೆ. ಸೌತ್ ಎಂಡ್ ವೃತ್ತ, ಕೆಆರ್ ರಸ್ತೆ, ಲಕ್ಷ್ಮಣ್ ರಾವ್ ಪಾರ್ಕ್ ಸುತ್ತಮುತ್ತ ಎಂದಿನಂತೆ ಕಸ ವಿಲೇವಾರಿ ಕೆಲಸ ನಡೆಯುತ್ತಿದ್ದ ದೃಶ್ಯ ಕಂಡುಬಂತು.[ಮತ್ತೆ ಶುರುವಾಯ್ತು ಕಸ ಗಲಾಟೆ, ಎಲ್ಲಿ ಹೋಯ್ತು ಸ್ವಚ್ಛಭಾರತ?]
ಮಂಡೂರಿಗೆ ಕಸ ವಿಲೇವಾರಿ ಸ್ಥಗಿತವಾದ ಮೇಲೆ ಬಿಬಿಎಂಪಿ ಗುಂಡ್ಲಹಳ್ಳಿ ಬಳಿಯ ಟೆರ್ರಾ ಫಾರ್ಮ ನ್ನು ಕಸ ವಿಲೇವಾರಿಗೆ ಆಯ್ಕೆ ಮಾಡಿಕೊಂಡಿತ್ತು. ಆದರೆ ಈಗ ಅಲ್ಲಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಲಿದೆ. ಬೆಂಕಿಪುರಕ್ಕೆ ನಗರದ ಹೆಚ್ಚುವರಿ ಕಸ ವಿಲೇವಾರಿ ಮಾಡಲು ತಾತ್ಕಾಲಿಕ ಕ್ರಮ ತೆಗೆದುಕೊಂಡರೂ ಆಶ್ಷರ್ಯವಿಲ್ಲ.

ಕಸ ವಿಲೇವಾರಿ ಹೇಗಿದೆ?
ಅಷ್ಟಕ್ಕೂ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜಯನಗರದಲ್ಲಿ ಕಸ ವಿಲೇವಾರಿ ಸಸೂತ್ರವಾಗಿ ನಡೆಯುತ್ತಿದೆ. ಆದರೆ ಪಕ್ಕದ ತಿಲಕ್ ನಗರ, ಬನಶಂಕರಿ ಕಡೆ ಕಸದ ವಾಸನೆ ಜೋರಾಗಿಯೇ ಇದೆ. ಬಿಬಿಎಂಪಿ ನಿರ್ದಿಷ್ಟ ಗುತ್ತಿಗೆದಾರರಿಗೆ ಪ್ರದೇಶಗಳನ್ನು ವಹಿಸಿದ್ದು ಅವರ ಕೆಲಸದ ಆಧಾರದಲ್ಲಿ ಕಸ ವಿಲೇವಾರಿ ನಡೆಯುತ್ತದೆ.

ಯಾವುದೇ ಅಡ್ಡಿ ಇಲ್ಲ
ನಮಗೆ ಸದ್ಯಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಬೇರೆ ಏರಿಯಾದ ಕತೆ ಗೊತ್ತಿಲ್ಲ. ಬೆಂಕಿಪುರದಲ್ಲಿ ಇಲ್ಲಿಯವರೆಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ದೊಡ್ಡಬಳ್ಳಾಪುರಕ್ಕೆ ಹೋಲಿಸಿದರೆ ಇಲ್ಲಿಂದ ಸಾಗಾಟವಾಗುವ ಕಸದ ಲಾರಿಗಳ ಸಂಖ್ಯೆ ಕಡಿಮೆ ಇದ್ದು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇಲ್ಲ ಎಂದು ಕೆಆರ್ ರಸ್ತೆ ಕಸ ವಿಲೇವಾರಿ ಜವಾಬ್ದಾರಿ ವಹಿಸಿಕೊಂಡಿರುವ ನಂಜಪ್ಪ ಹೇಳುತ್ತಾರೆ.

ನಾಗರಿಕರು ತಿಳಿದುಕೊಳ್ಳಬೇಕು
ಕಸ ವಿಲೇವಾರಿಗೆ ಕೇವಲ ಪೌರ ಕಾರ್ಮಿಕರು ಮಾತ್ರ ಶ್ರಮಿಸಿದರೆ ಸಾಲದು. ನಾಗರಿಕರು ತಿಳಿದು ಕಸ ಹಾಕಬೇಕು. ರಸ್ತೆಯಲ್ಲಿ ಅಡ್ಡಾದಿಟ್ಟಿ ಕಸ ಎಸೆಯುವುದು ನಮಗೆ ಸಮಸ್ಯೆಯಾಗುತ್ತದೆ. ಬೆಳಿಗ್ಗೆ ಗಂಟೆ ಗಾಡಿಗೆ ಕಸ ನೀಡುವುದಿಲ್ಲ. ಅದೇ ಮಧ್ಯರಾತ್ರಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದು ನಮ್ಮ ಕೆಲಸಕ್ಕೆ ತೊಂದರೆಯಾಗಿ ಪರಿಣಮಿಸಿದೆ ಎಂದು ಪೌರ ಕಾರ್ಮಿಕರಾದ ಅಲಮೇಲು, ಸಂಗೀತಾ ಅವರ ದೂರು.

ದುರ್ವಾಸನೆ ಇಲ್ಲವೇ?
ಪೌರ ಕಾರ್ಮಿಕರು ಎಷ್ಟೇ ಶ್ರಮ ವಹಿಸಿದರೂ ಜನ ಪಾರ್ಕ್ ಪಕ್ಕದಲ್ಲಿ, ಮರದಡಿಯಲ್ಲಿ ಕಸ ಎಸೆಯುವ ಬುದ್ಧಿ ಬಿಟ್ಟಿಲ್ಲ. ಪರಿಣಾಮ ಬನಶಂಕರಿಗೆ ತೆರಳುವ ರಸ್ತೆಯೊಂದು ಯಾವಾಗಲೂ ಗಬ್ಬು ನಾರುತ್ತಿರುತ್ತದೆ. ಬಿಬಿಎಂಪಿ ಕಸ ಹಾಕಲು ತೊಟ್ಟಿ ಇಟ್ಟಿದ್ದರೂ, ಅದನ್ನು ಬಿಟ್ಟು ಹೊರಗೆ ಕಸ ಏಸೆಯುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಮುಂದೇನಾಗಬಹುದು?
ದೊಡ್ಡಬಳ್ಳಾಪುರಕ್ಕೆ ಬಿಬಿವಿಎಂಪಿ ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ಮಾತುಕತೆಗೆ ತೆರಳಿದ್ದು, ಪ್ರತಿಭಟನೆ ಹಿಂಪಡೆದರೆ ಬೆಂಗಳೂರಿಗರ ಸಮಸ್ಯೆ ಬಗೆಹರಿಯಲಿದೆ. ಇಲ್ಲವಾದಲ್ಲಿ ಬೆಂಕಿಪುರಕ್ಕೆ ಮತ್ತಷ್ಟು ಕಸದ ಲಾರಿಗಳು ನುಗ್ಗಬಹುದು. ಅದೂ ಸಾಧ್ಯವಾಗದಿದ್ದರೆ ಕಸ ವಿಲೇವಾರಿಗೆ ಹೊಸ ಜಾಗ ಹುಡುಕಿಕೊಳ್ಳಬೇಕಾಗುತ್ತದೆ.












Click it and Unblock the Notifications