Leopard in Bengaluru: ಮೂರು ದಿನಗಳ ಸತತ ಕಾರ್ಯಾಚರಣೆ ಬಳಿಕ ಸೆರೆ ಸಿಕ್ಕ ಚಿರತೆ
ಬೆ೦ಗಳೂರಿನ ಅರಣ್ಯಾಧಿಕಾರಿಗಳು ಮೂರು ದಿನಗಳ ಸತತ ಕಾರ್ಯಾಚರಣೆ ಬಳಿಕ ಕೂಡ್ಲು ಪ್ರದೇಶದಲ್ಲಿ ಅಲೆದಾಡುತ್ತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಹಲವು ಬಾರಿ ಚಿರತೆ ಓಡಾಟ ಕಂಡುಬಂದ ನಂತರ, ಅರಣ್ಯ ಇಲಾಖೆಯು ಕ್ಷಿಪ್ರ ಕ್ರಮ ಕೈಗೊಂಡಿದ್ದು, ಅದರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಇಡಲಾಗಿತ್ತು.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ಜನನಿಬಿಡ ಪ್ರದೇಶದಲ್ಲಿರುವ ಕೂಡ್ಲು ಗೇಟ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಇರುವುದು ಸೆರೆಯಾದ ನಂತರ ಈ ಭಾಗದ ಜನರಲ್ಲಿ ಆತಂಕ ಉಂಟಾಗಿತ್ತು.
ಈ ದೃಶ್ಯಗಳು ವೈರಲ್ ಆದ ನಂತರ ತಕ್ಷಣ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ, ಪಂಜರಗಳನ್ನು ಇಟ್ಟಿದ್ದರು. ಚಿರತೆಯನ್ನು ರಕ್ಷಿಸಲು ಭಾರತ್‌ನಗರದ ಕಲ್ಲು ಕ್ವಾರಿಯೊಂದರ ಬಳಿ ಆಯಕಟ್ಟಿನ ರೀತಿಯಲ್ಲಿ ಎರಡು ಬೋನುಗಳನ್ನು ಇರಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ.ರವೀಂದ್ರ ತಿಳಿಸಿದ್ದರು.
ಅರಣ್ಯ ಅಧಿಕಾರಿಗಳು ಕಣ್ಗಾವಲು ಕ್ಯಾಮೆರಾಗಳ ಸಂಯೋಜನೆಯನ್ನು ಬಳಸಿಕೊಂಡರು ಮತ್ತು ಅಲೆದಾಡುವ ಚಿರತೆಯನ್ನು ಪತ್ತೆಹಚ್ಚಲು ಮತ್ತು ಸೆರೆಹಿಡಿಯಲು ಡ್ರೋನ್ ತಂತ್ರಜ್ಞಾನದ ಬಳಕೆಯ ಜೊತೆಗೆ 30 ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗಿತ್ತು.
BENGALURU LEOPARD 🐆 HAS BEEN CAPTURED & RESCUED AT KUDLU NOW
— Karnataka Weather (@Bnglrweatherman) November 1, 2023
Hard work by @aranya_kfd 👏👏👏 for 4 days. Hope it gets good care & food https://t.co/90ep5Yr2Ub pic.twitter.com/qTEyARsW5t
ವೈದ್ಯರ ಮೇಲೆ ದಾಳಿ ಮಾಡಿದ್ದ ಚಿರತೆ
ಬುಧವಾರ ಬೆಳಗ್ಗೆ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಚಿರತೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆಹಿಡಿಯಲು ಪ್ರಯತ್ನ ಮಾಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಚಿರತೆ ಕಟ್ಟಡದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜಿಗಿದು ವೈದ್ಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಿತ್ತು.
ಮಧ್ಯಾಹ್ನ ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಕಿದ್ದ ಬಲೆಗೆ ಚಿರತೆ ಬಿದ್ದಿದೆ. ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ, ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಿದ್ದಾರೆ.












Click it and Unblock the Notifications