Bengaluru Flyovers: ಕೋಟಿ ಕೋಟಿ ವೆಚ್ಚದಲ್ಲಿ ಕಟ್ಟಿದ ಫ್ಲೈಓವರ್‌ಗಳು ಈಗ ಕಸದ ತೊಟ್ಟಿಗಳು!
ಬೆಂಗಳೂರು, ಏಪ್ರಿಲ್. 28: ರಾಜ್ಯದ ಬಹುತೇಕರು ಉದ್ಯೋಗ ಅರಸಿ ಬರುವ ರಾಜ್ಯ ರಾಜಧಾನಿಯಲ್ಲಿ ಜನರ ಸಂಖ್ಯೆಯಷ್ಟೇ ವಾಹನಗಳ ಸಂಖ್ಯೆಯೂ ಇದೆ. ಜೊತೆಗೆ ಕಸ ಕೂಡ ಅಷ್ಟೇ ಉತ್ಪತ್ತಿಯಾಗುತ್ತಿದೆ. ಪ್ರತಿ ದಿನ ಮನೆ ಮನೆಗೆ ಬಂದು ಕಸ ತೆಗೆದುಕೊಂಡು ಹೋಗುವ ಪೌರಕಾರ್ಮಿಕರು ಇದ್ದರೂ ಕೂಡ ಜನ ಎಲ್ಲಿ ಬೇಕೊ ಅಲ್ಲಿ ಕಸ ಎಸೆಯುವುದು ಬಿಡುತ್ತಿಲ್ಲ.
ರಸ್ತೆ, ತಿರುವುಗಳು, ಕೊಂಚ ಕತ್ತಲಿರುವ ಜಾಗ, ಪಾರ್ಕ್‌ಗಳ ಗೇಟ್‌ಗಳು, ಲೈಟ್ ಕಂಬಗಳ ಪಕ್ಕ ಕಸದ ಮೂಟೆಗಳನ್ನು ಇಟ್ಟು ಹೋಗುವುದನ್ನು ದಿನ ನೋಡುತ್ತಲ್ಲೇ ಇರುತ್ತೇವೆ. ಈಗ ಕಸ ಎಸೆಯಲು ಜನ ಹೊಸ ಜಾಗಗಳನ್ನು ಹುಡುಕಿಕೊಂಡಿದ್ದಾರೆ. ಅವುಗಳೇ... ಕೋಟಿ ಕೋಟಿ ಸುರಿದು ಕಟ್ಟಿರುವ ಬೆಂಗಳೂರಿನ ಮೇಲಸೇತುವೆಗಳು. ಹಲವು ಫ್ಲೈಓವರ್‌ಗಳ ಮೇಲೆ ಕಸದ ಚೀಲಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಜನರು ಅಪಘಾತವಾಗುವ ಆತಂಕದಲ್ಲಿ ವಾಹನ ಚಾಲನೆ ಮಾಡಬೇಕಿದೆ.

ಕೋಟಿ ಕೋಟಿ ಖರ್ಚು ಮಾಡಿದ ಫ್ಲೈಓವರ್ ಈಗ ಕಸದ ಬುಟ್ಟಿ!
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬೆಂಗಳೂರಿನ ಅನೇಕ ಮೇಲ್ಸೇತುವೆಗಳು ಈಗ ಡಂಪಿಂಗ್ ಯಾರ್ಡ್‌ಗಳಾಗಿ ಮಾರ್ಪಟ್ಟಿವೆ. ಈ ಕಸದ ಚೀಲಗಳು ರಸ್ತೆಗಳನ್ನು ಹಾಳು ಮಾಡುವುದರ ಜೊತೆಗೆ, ಬೈಕ್ ಸವಾರರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಇದರಿಂದ ಫ್ಲೈಓವರ್‌ಗಳಲ್ಲಿ ಅಪಘಾತಗಳು ಹೆಚ್ಚಾಗಲಿವೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಾಲ್ಮಿಯಾ ಸರ್ಕಲ್ ಮೇಲ್ಸೇತುವೆ, ಹೆಣ್ಣೂರು ಮೇಲ್ಸೇತುವೆ, ಈಜೀಪುರ ಫ್ಲೈಓವರ್, ಹೆಬ್ಬಾಳ ಮೇಲ್ಸೇತುವೆ ಸೇರಿ ಅನೇಕ ಫ್ಲೈಓವರ್‌ಗಳ ಮೇಲೆ ಇಲ್ಲ ಕೆಳಗೆ ಕಸ ಸುರಿಯಲಾಗುತ್ತಿದೆ. ಇದರಿಂದ ವಾಹನ ಸವಾರರು ಇಲ್ಲಿ ಓಡಾಡುವುದು ಕಷ್ಟವಾಗುತ್ತಿದೆ. ದುರ್ನಾತ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.
ಕಸದ ರಾಶಿಯನ್ನು ತಪ್ಪಿಸುವ ಜೊತೆಗೆ ಜನರು ಈ ಫ್ಲೈಒವರ್‌ಗಳ ಮೇಲೆ ಅಡ್ಡವಾಗಿ ಬೆಳೆದು ನಿಂತ ಮರಗಳಿಂದಲೂ ತೊಂದರೆ ಎದುರಿಸುವಂತಾಗಿದೆ. ದಾಲ್ಮಿಯಾ ಸರ್ಕಲ್ ಮೇಲ್ಸೇತುವೆ ಮೇಲೆ ಬೈಕ್ ಹೋಗುವ ಮಾರ್ಗಗಳನ್ನು ಮರಗಳು ಮತ್ತು ಕೊಂಬೆಗಳು ತುಂಬಿಕೊಂಡಿದ್ದು, ಬೈಕ್ ಸವಾರರು ಕಾರುಗಳು ಹೋಗುವ ಲೇನ್ ಬಳಸಬೇಕಾಗುತ್ತದೆ. ಇದು ಅಪಘಾತಕ್ಕೆ ಕಾರಣವಾಗಬಹುದು ಎಂದು ಸವಾರರು ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ಎರಡು ವರ್ಷಗಳಿಂದ ಹೆಣ್ಣೂರು ಮೇಲ್ಸೇತುವೆಯನ್ನು ಕಸದಿಂದ ಮುಕ್ತವಾಗಿಸಲು ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಇನ್ನು ನಿಂತಿಲಲ್. ಜನ ಕಸ ಹಾಕುವುದು ಮುಂದುವರೆಯುತ್ತಲೇ ಇದೆ. ಕೊರೊನಾ ಕಾಲದಲ್ಲಿ ಜನ ಫ್ಲೈಓವರ್ ಮೇಲೆ ಕಸದ ಚೀಲಗಳನ್ನು ಎಸೆಯಲು ಪ್ರಾರಂಭಿಸಿದ್ದು, ಇನ್ನೂ ಕೂಡ ನಿಲ್ಲಿಸಿಲ್ಲ.
ಹೆಬ್ಬಾಳ ಮೇಲ್ಸೇತುವೆಯ ಕೆಆರ್ ಪುರಂ ಕಡೆಗೆ ಹೋಗುವಾಗಲೂ ತುಂಬಾ ಕೆಟ್ಟ ವಾಸನೆಯನ್ನು ವಾಹನ ಸವಾರರು ಅನುಭವಿಸಬೇಕಾಗಿದೆ. ಇತ್ತ, ಇನ್ನೂ ಸಂಚಾರಕ್ಕೆ ತೆರವಾಗದ ಈಜಿಪುರ ಮೇಲ್ಸೇತುವೆ ಕೂಡ ಡಂಪಿಂಗ್ ಯಾರ್ಡ್ ಆಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವವ ವಾಹನ ಸವಾರರು ಕಣ್ಣು, ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಆದಷ್ಟು ಬೇಗ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.












Click it and Unblock the Notifications