ಬೆಂಗಳೂರಿನಲ್ಲಿ 6.3 ಕೋಟಿ ರೂಪಾಯಿ ಮೌಲ್ಯದ ಒತ್ತುವರಿ ತೆರವು!
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರಿನ ಒತ್ತುವರಿ ವಿರುದ್ಧ ಸಮರ ಸಾರಿದೆ. ಹೀಗೆ ಮೊದಲ ದಿನ ಭರ್ಜರಿ ಕಾರ್ಯಾಚರಣೆಯನ್ನೂ ನಡೆಸಿ, ಬರೋಬ್ಬರಿ 6.3 ಕೋಟಿ ರೂಪಾಯಿ ಮೌಲ್ಯದ 2.37 ಎಕರೆ ಒತ್ತುವರಿ ಜಾಗವನ್ನ ತೆರವು ಮಾಡಲಾಗಿದೆಯಂತೆ. ಈ ಮೂಲಕ ರಾಜಧಾನಿ ಬೆಂಗಳೂರಿನ ಒತ್ತುವರಿ ಕುಳಗಳಿಗೆ ಶಾಕ್ ನೀಡಿದೆ ಸಿದ್ದರಾಮಯ್ಯ ಸರ್ಕಾರ!
ಅಂದಹಾಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. 8 ಕೆರೆಗಳು ಸೇರಿ ಒಟ್ಟು 2.37 ಎಕರೆ ವಿಸ್ತೀರ್ಣದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನಿನ ಅನಧಿಕೃತ ಒತ್ತುವರಿಯನ್ನು ಇಂದು ವಿಶೇಷ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ. ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇದ್ದಾಗಲೂ ಬೆಂಗಳೂರಿನ ಒತ್ತುವರಿ ಕುರಿತು ಗಂಭೀರವಾದ ಆರೋಪ ಮಾಡಿತ್ತು. ಇದೀಗ ತಾನೇ ಅಧಿಕಾರಕ್ಕೆ ಬಂದ ನಂತರ ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಎಲ್ಲೆಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ?
ಬೆಂಗಳೂರು ಪೂರ್ವ ತಾಲೂಕಿನ ಬಿದರಳ್ಳಿ ಹೋಬಳಿ ಕಣ್ಣೂರು ಗ್ರಾಮದದಲ್ಲಿ ಒಟ್ಟಾರೆ 67 ಲಕ್ಷ ರೂಪಾಯಿ ಮೌಲ್ಯದ 20 ಗುಂಟೆ ವಿಸ್ತೀರ್ಣದ ಸರ್ಕಾರಿ ಗೋಮಾಳ, 60 ಲಕ್ಷ ಮೌಲ್ಯದ ಬಿದರಹಳ್ಳಿ ಹೋಬಳಿಯ ಮಾರಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕುಂಟೆ, ರೂ. 30 ಲಕ್ಷ ಮೌಲ್ಯದ ಕೆ.ಆರ್ ಪುರಂ ಹೋಬಳಿಯ ಹಗದೂರು ಗ್ರಾಮದ ಸರ್ಕಾರಿ ಹುಲ್ಲು ಬನ್ನಿ ಹಾಗೂ ರೂ.30ಲಕ್ಷ ಮೌಲ್ಯದ ವರ್ತೂರು ಹೋಬಳಿಯ ಕೊಡತಿ ಗ್ರಾಮದ 0-05 ವಿಸ್ತೀರ್ಣದ ಸರ್ಕಾರಿ ಕುಂಟೆಯ ಅನಧಿಕೃತ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯನ್ನ ನೀಡಿದ್ದಾರೆ.
ಒತ್ತುವರಿ ಮಾಡಿದವರಿಗೆ ಬಿಗ್ ಶಾಕ್!
ಹಾಗೇ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಪಿಳ್ಳಹಳ್ಳಿ ಗ್ರಾಮದ 10 ಲಕ್ಷ ಮೌಲ್ಯದ ಸರ್ಕಾರಿ ಗೋಮಾಳ, ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ದಾಸನಪುರ ಹೋಬಳಿ ತೋಟದ ಗುಡ್ಡದ ಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಹಾಗೂ 15 ಲಕ್ಷ ಮೌಲ್ಯದ ದಾಸನಪುರ ಹೋಬಳಿಯ ಹುಲ್ಲೇ ಗೌಡನಹಳ್ಳಿ ಗ್ರಾಮದ ಸರ್ಕಾರಿ ಕುಂಟೆ ಒತ್ತುವರಿ ತೆರೆವನ್ನು ಮಾಡಲಾಗಿದೆ. ಹಾಗೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿ ವಾಜರಹಳ್ಳಿ ಗ್ರಾಮದ 35 ಲಕ್ಷ ಮೌಲ್ಯದ ಭೈಯಪ್ಪನ ಕುಂಟೆ ಸರ್ಕಾರಿ ಜಮೀನು, 42 ಲಕ್ಷ ಮೌಲ್ಯದ ಬೇಗೂರು ಹೋಬಳಿ ಮೈಲಸಂದ್ರ ಗ್ರಾಮದ ಕೆರೆ ಒತ್ತುವರಿ & ಕೆಂಗೇರಿ ಹೋಬಳಿ ತಗಚಗುಪ್ಪೆ ಗ್ರಾಮದ 50 ಲಕ್ಷ ಮೌಲ್ಯದ ವಿಸ್ತೀರ್ಣದ ಸರ್ಕಾರಿ ಕುಂಟೆ ಪ್ರದೇಶ ಒತ್ತುವರಿ ತೆರವಾಗಿದೆ.

ಇಷ್ಟೆಲ್ಲದರ ನಡುವೆ ಆನೇಕಲ್ ತಾಲೂಕಿನ ಕಸಬ ಹೋಬಳಿ ಸಮಂದೂರು ಗ್ರಾಮದ 6 ಲಕ್ಷ ಮೌಲ್ಯದ ಸರ್ಕಾರಿ ಕುಂಟೆ, 20 ಲಕ್ಷ ಮೌಲ್ಯದ ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ರಾಜ ಕಾಲುವೆ, 13 ಲಕ್ಷ ಮೌಲ್ಯದ ಬನ್ನೇರುಘಟ್ಟ ಗ್ರಾಮದ ರಾಜ ಕಾಲುವೆ ಒತ್ತುವರಿ ಸೇರಿ ಮತ್ತು 60 ಲಕ್ಷ ಮೌಲ್ಯದ ಸರ್ಜಾಪುರ ಹೋಬಳಿ ನೆಕ್ಕುಂದಿ ದೊಮ್ಮಸಂದ್ರದ ಕೆರೆ ಒತ್ತುವರಿಯನ್ನು ಈಗ ತೆರವು ಮಾಡಲಾಗಿದೆ. ಈ ಮೂಲಕ ಒಟ್ಟಾರೆ 6.38 ಕೋಟಿ ಮೌಲ್ಯದ ಒಟ್ಟು 2-37 ಎ/ಗು ವಿಸ್ತೀರ್ಣದ ಸರ್ಕಾರದ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ.












Click it and Unblock the Notifications