Ejipura Flyover: ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಹೊಸ ಗಡುವು, ಬಾಕಿ ಉಳಿದ ಕೆಲಸವೆಷ್ಟು?
ಬೆಂಗಳೂರು, ಜುಲೈ 18: ಸರ್ಜಾಪುರ ರಸ್ತೆ ಅಡ್ಡಲಾಗಿ ಕೋರಮಂಗಲ-ಈಜಿಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಈಜಿಪುರ ಮೇಲ್ಸೇತುವೆ (Ejipur Flyover) ಕಾಮಗಾರಿಯು ಕುಂಟುತ್ತಾ ಸಾಗುತ್ತಿದೆ. ಈ ಭಾಗದ ವಾಹನ ಸವಾರರು ನಿತ್ಯವು ಹಿಡಿಶಾಪ ಹಾಕುತ್ತಿದ್ದಾರೆ. ಹದಗೆಟ್ಟ ರಸ್ತೆ, ಧೂಳಿನಲ್ಲೇ ಸಂಚಾರ ಮಾಡುತ್ತಿದ್ದಾರೆ. ಆಗಾಗ್ಗೆ ಬಿಬಿಎಂಪಿ ಅಧಿಕಾರಿಗಳು ಬಂದು ಪರಿಶೀಲಿಸಿದಂತೆ ಶುಕ್ರವಾರವು ಪರಿಶೀಲಿಸಿದ್ದು, ಶೀಘ್ರವೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೊಸ ಗಡುವು ನೀಡಿದರು.
ಬನ್ನೇರಘಟ್ಟ ರಸ್ತೆ ಸಕಲವಾರ ಗ್ರಾಮದ ಸೆಗ್ಮೆಂಟ್ ಕಾಸ್ಟಿಂಗ್ ಯಾರ್ಡ್ ಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಇದೇ ವೇಳೆ ಈಜಿಪುರ ಮೇಲ್ಸೇತುವೆಗೆ ಕಾಸ್ಟಿಂಗ್ ಮಾಡುವ ಕಾರ್ಯವನ್ನು ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 2026ರ ವೇಳೆಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಿದರು.

ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಕಾಸ್ಟಿಂಗ್ ಗಳು ಬರಲಿದ್ದು, ಈಗಾಗಲೇ 437 ಸೆಗ್ಮೆಂಟ್ ಕಾಸ್ಟಿಂಗ್ ಗಳನ್ನು ಅಳವಡಿಸಲಾಗಿದೆ. ಇನ್ನು 325 ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸುವ ಕೆಲಸ ಬಾಕಿ ಇದೆ. ಈ ಸಂಬಂಧ ಪ್ರತಿ ತಿಂಗಳು 45 ಸೆಗ್ಮೆಂಟ್ ಗಳನ್ನು ಸಿದ್ದಪಡಿಸಿ ಅಳವಡಿಸಲು ಅವರು ಸೂಚಿಸಿದರು.
ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸುವ ಕಾಮಗಾರಿಗೆ ವೇಗ ನೀಡಿ ಕಾಸ್ಟಿಂಗ್ ಅಳವಡಿಸುವ ಪ್ರಕ್ರಿಯೆಯನ್ನು ವರ್ಷಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಇನ್ನುಳಿದ ಕಾಮಗಾರಿಯನ್ನು ಮಾರ್ಚ್ 2026ರ ಒಳಗಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈಜೀಪುರ ಮೇಲ್ಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆ ಹಾಗೂ ಸೆಂಟ್ ಜಾನ್ಸ್ ಹಾಸ್ಟೆಲ್ ಬಳಿಯ 2 ಕಡೆ ಭೂಸ್ವಾಧೀನ ಪಡಿಸಿಕೊಳ್ಳುವುದು ಬಾಕಿ ಇದೆ. ಈ ಸಂಬಂಧ ಈಗಾಗಲೇ ಸಂಬಧಪಟ್ಟವರ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಶೀಘ್ರ ರ‍್ಯಾಂಪ್ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕು.
ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್ ರವರು ಮಾತನಾಡಿ, ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ರೂಪುರೇಶೆಗಳನ್ನು ಸಿದ್ದಪಡಿಸಿಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯ ಆಯುಕ್ತರಿಗೆ ವಿವರಿಸಿದರು.
ರಾತ್ರಿಯಿಡೀ ಕಾಮಗಾರಿ ಕೆಲಸ
ಮೇಲ್ಸೇತುವೆಯಲ್ಲಿ ಕಾಸ್ಟಿಂಗ್ ಸೆಗ್ಮೆಂಟ್ ಎರೆಕ್ಷನ್ ಅನ್ನು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಮಾಡಲಾಗುತ್ತಿದೆ. ಇರುವ ಸಮಯದಲ್ಲಿ ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ನಡುವೆ ಕೆಲಸ ಮಾಡಲಾಗುತ್ತಿದೆ. ಇನ್ನು ಪಾದಚಾರಿ ಮಾರ್ಗ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಮೇಲ್ಸೇತುವೆ ಕಾಮಗಾರಿ ಆಗಿರುವ ಕೆಳಭಾಗದಲ್ಲಿ ಡಾಂಬರೀಕರಣ ಮಾಡಲಾಗಿದೆ. ಇತರೆಡೆ ಪ್ರಗತಿಯಲ್ಲಿದೆ. ಶೋಲ್ಡರ್ ಡ್ರೈನ್ ಹಾಗೂ ಮೀಡಿಯನ್ ಕೆಲಸ ಪ್ರಗತಿಯಲ್ಲಿದೆ ಎಂದು ಅಧಕಾರಿಗಳು ಮಾಹಿತಿ ತಿಳಿಸಿದ್ದಾರೆ.












Click it and Unblock the Notifications