ಬೆಂಗಳೂರಿನ ಈ ಭಾಗದ ಖಾಲಿ ನಿವೇಶನದಾರಿಗೆ ನೋಟಿಸ್, ಕಾರಣವೇನು ?
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತದಲ್ಲಿ ಕೆಲವೊಂದು ಆಸ್ತಿದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಮುಖ್ಯವಾಗಿ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡುವ ಉದ್ದೇಶವನ್ನು ಗ್ರೇಟರ್ ಬೆಂಗಳೂರು ಆಡಳಿತ ಹಾಕಿಕೊಂಡಿದೆ. ಇದರೊಂದಿಗೆ ಖಾಲಿ ನಿವೇಶನದ ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.
ಬೆಂಗಳೂರಿನ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು, ಮಂಗಳವಾರ (ಸೆಪ್ಟೆಂಬರ್ 23)ದಂದು ವಿವಿಧ ಸ್ಥಳಗಳ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಖಾಲಿ ನಿವೇಶನಗಳಲ್ಲಿ ಸ್ವಚ್ಚತೆ ಇಲ್ಲದಿರುವುದು ಕಂಡುಬಂದಿದ್ದು, ಖಾಲಿ ನಿವೇಶನಗಳ ಸ್ವತ್ತಿನ ಮಾಲೀಕರಿಗೆ ಕೂಡಲೇ ನೋಟಿಸ್‌ಗಳನ್ನು ನೀಡಿ ನಿವೇಶನಗಳನ್ನು ಸ್ವಚ್ಚಗೊಳಿಸುವಂತೆ ತಿಳಿಸಿದ್ದಾರೆ. ನಿರ್ದಿಷ್ಟ ಸಮಯದಲ್ಲಿ ಸ್ವತ್ತಿನ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಡದಿದ್ದರೆ ನಗರ ಪಾಲಿಕೆ ವತಿಯಿಂದ ಸ್ವಚ್ಚ ಮಾಡಿ ಮಾಲೀಕರಿಂದ ದಂಡ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.ಖಾಲಿ ನಿವೇಶನದಾರಿಗೆ ನೋಟಿಸ್ ನೀಡಲು ಸಹ ಹೇಳಲಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್ ನಿಂದ ಟಿನ್ ಫ್ಯಾಕ್ಟರಿವರೆಗೆ ಇಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ತೀವ್ರ ಸ್ವಚ್ಚತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ನಗರ ಪಾಲಿಕೆಯ ಇಬ್ಬಲೂರು ಜಂಕ್ಷನ್ ನಿಂದ ಟಿನ್ ಫ್ಯಾಕ್ಟರಿವರೆಗಿನ ರಸ್ತೆ, ಸೈಡ್ ಡ್ರೈನ್, ಪಾದಚಾರಿ ಮಾರ್ಗವನ್ನು ಪರಿಶೀಲಿಸಿದರು. ಚರಂಡಿಗಳನ್ನು ಸ್ಚಚ್ಚತೆ ಮಾಡಿ ಸರಿಯಾಗಿ ನೀರು ಹರಿದು ಹೋಗುವಂತೆ ಮಾಡಿ ಹಾಗೂ ಮುರಿದಿರುವ ಚರಂಡಿ ಸ್ಲ್ಯಾಬ್ ಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು. ಅಧಿಕಾರಿಗಳು ತಮಗೆ ನೀಡಿರುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ.
ಅನಧಿಕೃತ ಒತ್ತುವರಿದಾರರಿಗೆ ನೋಟಿಸ್: ಇನ್ನು ಇಬ್ಬಲೂರು ಜಂಕ್ಷನ್ ನಿಂದ ಟಿನ್ ಫ್ಯಾಕ್ಟರಿವರೆಗಿನ ಪಾದಚಾರಿ ಮಾರ್ಗದುದ್ದಕ್ಕೂ ಅನಧಿಕೃತವಾಗಿ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿ ತಾತ್ಕಾಲಿಕೆ ಅಂಗಡಿಗಳನ್ನು ನಿರ್ಮಿಸಿಕೊಂಡಿರುವವರಿಗೆ ನೋಟೀಸ್ ಈ ಕೂಡಲೇ ನೀಡಿ, ದಂಡ ವಿಧಿಸಲು ಹಾಗೂ ಆದಷ್ಟು ಶೀಘ್ರದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲು ಹೇಳಲಾಗಿದೆ.
BMRCL ನೊಂದಿಗೆ ಸಮ್ವನಯ: ಬೆಂಗಳೂರಿನ ಮೆಟ್ರೋ ಪಿಲ್ಲರ್ ಮತ್ತು ರೈಲ್ವೆ ಲೈನ್ ಉದ್ದಕ್ಕೂ ಸಂಗ್ರಹವಾಗಿರುವ ಡೆಬ್ರಿಸ್ ಮತ್ತು ಕಸವನ್ನು ತೆರವುಗೊಳಿಸುವ ಸಂಬಂಧ ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಡೆಬ್ರಿಸ್ ಮತ್ತು ಕಸವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರ ಪಾಲಿಕೆಯ ಸ್ವಚ್ಛತಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಸಾಹಸ ತಂಡದ ಸಹಯೋಗದೊಂದಿಗೆ ಕಸ ಸುರಿಯುತ್ತಿದ್ದ ಜಾಗವನ್ನು ಸ್ವಚ್ಚಗೊಳಿಸಿ ಸೌಂದರೀಕರಣ ಮಾಡುವ ಕಾರ್ಯದಲ್ಲಿ ಆಯುಕ್ತರು ಭಾಗಿಯಾಗಿದ್ದರು.
ವಾರ್ಡಗಳಲ್ಲಿ ತಳಮಟ್ಟದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು, ಆದ್ಯತೆ ಮೇಲೆ ಯಾವುದನ್ನು ಪರಿಗಣಿಸಬೇಕು, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ತಿಳಿದುಕೊಂಡು ಮೈಕ್ರೋ ಪ್ಲಾನ್ ತಯಾರಿಸಿ ಅದರಂತೆ ಕಾರ್ಯ ನಿರ್ವಹಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆ ಸ್ಥಳಗಳನ್ನಾಗಿ ಬಳಸಲಾಗುತ್ತಿದೆ ಅಂತಹ ಸ್ಥಳಗಳನ್ನು ಗುರುತಿಸಿ ರಾತ್ರಿಯಲ್ಲಿ ಆ ಸ್ಥಳಗಳನ್ನು ತೀವ್ರ ಸ್ಚಚ್ಚತಾ ಕಾರ್ಯವನ್ನು ಕೈಗೊಳ್ಳಲು ಆಕ್ಷನ್ ಪ್ಲಾನ್ ಸಿದ್ಧಪಡಿಸಿಕೊಂಡು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅಪರ ಆಯುಕ್ತರು (ಅಭಿವೃದ್ಧಿ) ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications