ಮದ್ಯದ ಅಮಲಿನಲ್ಲಿ ಡಿಕ್ಕಿ, ರೋಡಲ್ಲಿ ಬೆಂಕಿ, ಬುಲೆಟ್ ಬೈಕ್ ಅನ್ನು ಅರ್ಧ ಕಿ.ಮೀ ಎಳೆದೊಯ್ದ ಕಾರು
ಬೆಂಗಳೂರು: ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾನೆ. ತನ್ನ ಕಾರಿನ ಅಡಿಯಲ್ಲಿ ಬುಲೆಟ್ ಬೈಕ್ ಸಿಲುಕಿಕೊಂಡಿರುವುದನ್ನು ಗಮನಿಸದೆ ಸುಮಾರು ಅರ್ಧ ಕಿಲೋಮೀಟರ್‌ವರೆಗೆ ಮುಖ್ಯರಸ್ತೆಯಲ್ಲೇ ಎಳೆದೊಯ್ದಿದ್ದಾನೆ. ಕ್ರಿಸ್‌ಮಸ್ ಹಿಂದಿನ ದಿನ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬುಧವಾರ ರಾತ್ರಿ ಕಾಮಾಕ್ಷಿಪಾಳ್ಯದ ಸುಮನಹಳ್ಳಿ ಫ್ಲೈಓವರ್‌ನಲ್ಲಿ ಈ ದೃಶ್ಯ ಕಂಡು ಸಾರ್ವಹನಿಕರು ಬೆಚ್ಚಿಬಿದ್ದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಂತೆ, ಸುಮನಹಳ್ಳಿ ಫ್ಲೈಓವರ್‌ನಲ್ಲಿ ಹುಂಡೈ ಕ್ರೆಟಾ ಕಾರನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ವಾಹನದ ಚಕ್ರಗಳ ಕೆಳಗೆ ಬೆಂಕಿ ಕಿಡಿಗಳು ಕಾಣಿಸಿಕೊಂಡಿದೆ. ಇದನ್ನು ನೋಡಿ ಇತರೆ ಪ್ರಯಾಣಿಕರು ಆಘಾತಕ್ಕೊಳಗಾಗಿದ್ದಾರೆ. ಏನಾಯಿತು ಎಂದು ಹತ್ತಿರಕ್ಕೆ ಹೋಗಿ ನೋಡಿದಾಗ ಕಾರಿನ ಅಡಿಯಲ್ಲಿ ಬುಲೆಟ್ ಬೈಕ್ ಸಿಲುಕಿಕೊಂಡಿರುವುದು ಗೊತ್ತಾಗಿದೆ.

ನಾಯಂಡಹಳ್ಳಿ ಬಳಿ ಚಾಲಕ ಲಾಕ್
ಈ ಬಗ್ಗೆ ಕಾರಿನಲ್ಲಿದ್ದ ವ್ಯಕ್ತಿಗೆ ಸಾರ್ವಜನಿಕರು ಎಚ್ಚರಿಸಿದರೂ ಅದನ್ನು ಲೆಕ್ಕಿಸದೆ, ಹಾಗೆಯೇ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಕೊನೆಗೆ ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಬಳಿಕ ನಾಯಂಡಹಳ್ಳಿ ಜಂಕ್ಷನ್ ಬಳಿ ಕಾರನ್ನು ತಡೆದು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆ ಕಾರು ಚಾಲಕ ಕುಣಿಗಲ್ ಮೂಲದ ವ್ಯಕ್ತಿಯಾಗಿದ್ದು, ಮದ್ಯದ ಅಮಲಿನಲ್ಲಿ ಕಾರು ಚಾಲನೆ ಚಾಲನೆ ಮಾಡಿರುವುದು ಸಾಬೀತಾಗಿದೆ. ಇದು ಮಾತ್ರವಲ್ಲದೆ ಮತ್ತೊಂದು ಕಾರು ಹಾಗೂ ಬೈಕ್‌ಗೂ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಹಿನ್ನೆಲೆ ಪರಿಶೀಲಿಸಿದಾಗ ತುಮಕೂರು ಜಿಲ್ಲೆಯ ಕುಣಿಗಲ್‌ನ ವೈನ್ ಅಂಗಡಿಯ ಮಾಲೀಕ ಶ್ರೀನಿವಾಸ್ ಎಂದು ತಿಳಿದುಬಂದಿದೆ. ಸುಂಕದಕಟ್ಟೆ ಕಡೆಗೆ ಕಾರು ಚಲಾಯಿಸುತ್ತಿದ್ದಾಗ, ರೋಹಿತ್ ಎಂಬ ಯುವ ಬರುತ್ತಿದ್ದ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಕಾರಿಗೆ ಸಿಲುಕಿದ್ದರೂ ವೇಗವಾಗಿ ಚಾಲನೆ ಮಾಡಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ವಿವಿಧ ಸೆಕ್ಷನ್‌ಗಳಡಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಪಾರು
ಘಟನೆ ಬಗ್ಗೆ ವಿವರಿಸಿರುವ ಬುಲೆಟ್ ಬೈಕ್ ಮಾಲೀಕ ರೋಹಿತ್, ಆ ಕಾರು ನಾನು ಬುಲೆಟ್‌ನಲ್ಲಿ ಬರುತ್ತಿರುವಾಗ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯಿತು. ಇದರಿಂದ ನಾನು ಕೆಳಗೆ ಬಿದ್ದೆ, ಆದರೆ ನನ್ನ ಬೈಕ್ ಆ ಕಾರಿನ ಮುಂಭಾಗ ಸಿಲುಕಿಕೊಂಡಿತ್ತು. ನನಗೆ ಡಿಕ್ಕಿ ಹೊಡೆದು ಕ್ಷಣವೂ ನಿಲ್ಲದೆ ವೇಗವಾಗಿ ಚಲಾಯಿಸಿಕೊಂಡು ಹೋದರು. ಸುಮಾರು ಅರ್ಧ ಕಿಲೋಮೀಟರ್‌ವರೆಗೆ ನನ್ನ ಬೈಕ್ ಎಳೆದೊಯ್ದಿದ್ದು, ಈ ವೇಳೆ ರಸ್ತೆಯಲ್ಲಿ ಕಿಡಿ ಹೊತ್ತಿಕೊಂಡಿತು. ನಂತರ ಬೈಕ್ ಪಕ್ಕಕ್ಕೆ ಸರಿದು, ಮತ್ತೆ ವೇಗವಾಗಿ ಕಾರು ನಾಯಂಡಹಳ್ಳಿ ಕಡೆಗೆ ಹೋಯಿತು" ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದ ಶ್ರೀನಿವಾಸ್ ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಅತಿಯಾಗಿ ಮದ್ಯ ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಡಿಕ್ಕಿ ಹೊಡೆದ ನಂತರ ನಾನು ಭಯಭೀತನಾಗಿದ್ದೆ. ಆದರೆ ಬುಲೆಟ್ ಬೈಕಿಗೆ ತಗುಲಿದೆ ಎಂದು ನನಗೆ ತಿಳಿದಿರಲಿಲ್ಲ. ಇತರ ಪ್ರಯಾಣಿಕರು ಕೂಗಿದಾಗಲೂ ನನಗೆ ಅಷ್ಟಾಗಿ ತಿಳಿಯಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications