Bengaluru: ರಾಜಧಾನಿಯಲ್ಲಿ ಹಾಡುಹಗಲೇ ಜೋಡಿ ಹತ್ಯೆ: ಮಾಜಿ ಉದ್ಯೋಗಿಯಿಂದಲೇ ಕಂಪನಿ ಮುಖ್ಯಸ್ಥರ ಅಂತ್ಯ
ಬೆಂಗಳೂರು, ಜುಲೈ 11: ಕಂಪನಿಯೊಂದರ ಮಾಜಿ ಉದ್ಯೋಗಿ ತಾನಿದ್ದ ಅದೇ ಹಳೇ ಕಂಪನಿಯ ಇಬ್ಬರು ಮುಖ್ಯಸ್ಥರನ್ನು ಹಾಡು ಹಗಲೇ ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ. ಈ ಘಟನೆ ಬೆಂಗಳೂರಿಗರನ್ನು ಆತಂಕಕ್ಕೆ ದೂಡಿದೆ.
ಅಮೃತಹಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ಈ ಜೋಡಿ ಹತ್ಯೆ ನಡೆದಿದೆ. ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿನುಕುಮಾರ್ ಮೃತಪಟ್ಟ ದುರ್ದೈವಿಗಳು. ಹಂತಕನನ್ನು ಇದೇ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂದು ಗೊತ್ತಾಗಿದೆ.

ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಈ ಏರೋನಿಕ್ಸ್ ಇಂಟರ್‌ನೆಟ್ ಕಂಪನಿ ಮಂಗಳವಾರ ಸಂಜೆ 4.30ರ ಹೊತ್ತಿಗೆ ಆಗಮಿಸಿ ಮಾಜಿ ಉದ್ಯೋಗಿ ಫೆಲಿಕ್ಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಭರ್ಬರವಾಗಿ ಜೋಡಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.
ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಅಮೃತಹಳ್ಳಿ ಠಾಣೆ ಪೊಲೀಸರು ಈ ಘಟನೆ ಹಳೇ ದ್ವೇಷದಿಂದ ನಡೆಯಿತಾ? ಅಥವಾ ವೈಯಕ್ತಿಕ ಕಾರಣವೇನಾದರೂ ಇತ್ತಾ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಫೆನಿಕ್ಸ್ ಕಂಪನಿ ಬಿಟ್ಟು ಹೋದ ಬಳಿಕ ತಾನು ಒಂದು ಸ್ವಂತ ಕಂಪನಿ ಇಟ್ಟುಕೊಂಡಿದ್ದ. ಯಾವುದೋ ವಿಚಾರವಾಗಿ ಮಾಜಿ ಕಂಪನಿಯವರು ಜೊತೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಂಗಳವಾರ ಒಮ್ಮೆಲೆ ಆಟೋದಲ್ಲಿ ಬಂದಿದ್ದ ಎನ್ನಲಾಗುತ್ತಿರುವ ಈ ಹಂತಕ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬಡಾವಣೆಯಲ್ಲಿ ಆತಂಕದ ವಾತಾವರಣ ನಿರ್ಮಾನವಾಗಿದ್ದು, ಸ್ಥಳಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಸದ್ಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications