Kissing Video: ಕಬ್ಬನ್ ಪಾರ್ಕ್‌ನಲ್ಲಿ ಅಸಭ್ಯ ವರ್ತನೆ ನಿಷಿದ್ಧ ಎಂಬ ನಾಮಫಲಕದ ಮುಂದೆ ಲಿಪ್‌ಲಾಕ್ ಮಾಡಿದ ಜೋಡಿ
Cubbon Park Kissing Video: ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವರ್ತನೆ ತೋರಿ ಸಮಾಜಕ್ಕೆ ಕೆಟ್ಟ ಸಂದೇಶ ತಲುಪಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಜೋಡಿಯೊಂದು 'ಅಸಭ್ಯ ವರ್ತನೆ ನಿಷಿದ್ಧ' ಎಂಬ ನಾಮಫಕಲ ಮುಂದೆ ನಿಂತು ಲಿಪ್‌ಲಾಕ್ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ನನಲ್ಲಿ ಅಳವಡಿಸಿರುವ "ಅಸಭ್ಯ ವರ್ತನೆ ನಿಷಿದ್ಧ" ಎಂಬ ಎಚ್ಚರಿಕೆ ಫಲಕದ ವಿರುದ್ಧ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಪ್ರತಿಭಟಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಫಲಕದ ಎದುರಲ್ಲೇ ತಮ್ಮ ಪತಿಗೆ ಮುತ್ತಿಡುವ ಮೂಲಕ ಅವರು ಈ ನಿಯಮವನ್ನು ಪ್ರಶ್ನಿಸಿದ್ದು, ಅದರ ವೀಡಿಯೋ ವೈರಲ್ ಆಗಿದೆ.

ಪಾರ್ಕ್‌ನಲ್ಲಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ನಡೆಯದಂತೆ ತಡೆಯುವ ಉದ್ದೇಶದಿಂದ ಆಡಳಿತ ಮಂಡಳಿ ಹಲವು ಸ್ಥಳಗಳಲ್ಲಿ ಇಂತಹ ಎಚ್ಚರಿಕೆ ಫಲಕಗಳನ್ನು ಅಳವಡಿಕೆ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ಅತಿರೇಕ ವರ್ತನೆಗೆ ಬ್ರೇಕ್ ಹಾಕುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಿಸ್ ಮಾಡಿದ ಯುವತಿ ಹೇಳಿದ್ದೇನು?
ಆದರೆ, ಖ್ಯಾತಿ ಶ್ರೀ ಎಂಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ವ್ಯಾಲೆಂಟೈನ್ಸ್ ಡೇ ದಿನದಂದು ಈ ಫಲಕದ ಮುಂದೆ ನಿಂತು ಅದರ ಅರ್ಥವನ್ನೇ ಪ್ರಶ್ನಿಸಿದ್ದಾರೆ. "ಒಬ್ಬ ವ್ಯಕ್ತಿ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಪ್ರೀತಿಸುವುದು ಅಥವಾ ಮುತ್ತಿಡುವುದು ಅಸಭ್ಯ ವರ್ತನೆಯಲ್ಲ. ನಿಜವಾದ ಅಸಭ್ಯತೆ ಎಂದರೆ ಬೇರೆಯವರನ್ನು ಚುಡಾಯಿಸುವುದು, ಕಿರುಕುಳ ನೀಡುವುದು ಅಥವಾ ಗಲಾಟೆ ಮಾಡುವುದು," ಎಂದು ಅವರು ತಮ್ಮ ವೀಡಿಯೋದಲ್ಲಿ ಹೇಳಿದ್ದಾರೆ.
ನೆಟ್ಟಿಗರ ಪರ-ವಿರೋಧದ ಚರ್ಚೆಗಳು
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಪರ-ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಅವರ ಮಾತಿಗೆ ಬೆಂಬಲ ಸೂಚಿಸಿದರೆ, ಇನ್ನೂ ಹಲವರು ಸಾರ್ವಜನಿಕ ಸ್ಥಳದಲ್ಲಿ ಇಂತಹ ನಡೆ ಸರಿಯಲ್ಲ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ವರ್ತನೆಗೆ ಸಂಬಂಧಿಸಿದ ನಿಯಮಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ನಡುವೆ ಇರುವ ಗಡಿಯನ್ನು ಮತ್ತೆ ಚರ್ಚೆಗೆ ತಂದು ನಿಲ್ಲಿಸಿದೆ.












Click it and Unblock the Notifications