'ಮಂತ್ರಿ ಮಾಲ್' ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಆದೇಶ!
ಬೆಂಗಳೂರು, ಜನವರಿ 7: ಬೆಂಗಳೂರಿನ ಜನಪ್ರಿಯ ಶಾಪಿಂಗ್ ಮಾಲ್ ಆದ 'ಮಂತ್ರಿ ಮಾಲ್'ಗೆ ನ್ಯಾಯಾಲಯ ದೊಡ್ಡ ಆಘಾತ ನೀಡಿದೆ. ಇದರಿಂದ ಮಂತ್ರಿ ಮಾಲ್ ಇನ್ಮುಂದೆ ಇರುತ್ತಾ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ.
'ಮಂತ್ರಿ ಶಾಪಿಂಗ್ ಮಾಲ್‌ನ್ನು (ಮಂತ್ರಿ ಸ್ಕ್ವೇರ್) ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದು, ಅದನ್ನು ಸರ್ಕಾರ ವಶಕ್ಕೆ ಪಡೆಯಬೇಕು' ಎಂದು ಬೆಂಗಳೂರು ವಿಭಾಗದ 'ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯ' ಶುಕ್ರವಾರ ಆದೇಶ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಜಾಗದಲ್ಲಿ ನಿಯಮಬಾಹಿರವಾಗಿ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಮಳಿಗೆಗಳನ್ನು ತೆರೆದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಹಾಗೂ ಇತರರು ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಮಂತ್ರಿ ಮಾಲ್ ಅನಧಿಕೃತ; ಎನ್ ಆರ್ ರಮೇಶ್
ನ್ಯಾಯಾಲಯದ ಆದೇಶದ ಕುರಿತ ಮಾಧ್ಯಮಗಳೊಂದಿಗೆ ಮಾತನಾಡಿರುವ ದೂರುದಾರ ಎನ್ ಆರ್ ರಮೇಶ್ ಅವರು, ''ಸರ್ವೆ ನಂಬರ್ 56 ರಲ್ಲಿ 3.31 ಎಕರೆ ಬಿಬಿಎಂಪಿ ಸ್ವತ್ತನ್ನು ಒತ್ತುವರಿ ಮಾಡಿಕೊಂಡು ಮಂತ್ರಿ ವಸತಿ ಸಮುಚ್ಚಯ ನಿರ್ಮಿಸಿದ್ದಾರೆ. ಅದರಲ್ಲಿ ಶೇ 20 ರಷ್ಟು ತೆರವುಗೊಳಿಸಬೇಕಾಗುತ್ತದೆ. ಜಕ್ಕರಾಯನಕೆರೆಯ 37 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಮಂತ್ರಿ ಮಾಲ್ ಕಟ್ಟಲಾಗಿದೆ. ಅದರಲ್ಲಿ ಶೇ 15 ರಷ್ಟು ತೆರವುಗೊಳಿಸಬೇಕಾಗುತ್ತದೆ. ಸಕ್ಷಮ ಪ್ರಾಧಿಕಾರಿ ನ್ಯಾಯಾಲಯಕ್ಕೆ ನಮ್ಮ ದೂರು ಮನವರಿಕೆಯಾಗಿ ಈ ಆದೇಶ ನೀಡಿದೆ'' ಎಂದು ಹೇಳಿದರು.

ಕೇವಿಯಟ್ ಅರ್ಜಿ ಸಲ್ಲಿಸಲಿದ್ದೇವೆ
''ಮಂತ್ರಿ ಮಾಲ್ ಕಡೆಯವರು ಪ್ರಾಧಿಕಾರಿ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಭವವಿದೆ. ಆದರೆ, ಅರ್ಜಿದಾರರಾದ ನಾವು ಕೂಡ ಹೈಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಲಿದ್ದೇವೆ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ. ಹಾಗಾಗಿ ಮಂತ್ರಿ ಮಾಲ್ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಕೊಚ್ಚಿ ಮಾದರಿಯಲ್ಲಿ ತೆರವು ಮಾಡಲಿ
''ಕೆರೆ ಒತ್ತುವರಿ ಮಾಡಿ ಬೃಹತ್ ಮಾಲ್ ಕಟ್ಟಿರುವುದು ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯದಿಂದ ಸಾಭೀತಾಗಿದೆ. ಇತ್ತೀಚೆಗೆ ಅಕ್ರಮವಾಗಿ ನಿಯಮಾವಳಿಗಳನ್ನು ಮೀರಿ ಕೊಚ್ಚಿಯಲ್ಲಿ ಕಟ್ಟಿದ್ದ ಬೃಹತ್ ಅಪಾರ್ಟ್‌ಮೆಂಟಿನ ರೀತಿಯೇ ಮಂತ್ರಿ ಮಾಲ್ ಮೇಲೂ ಕ್ರಮ ಜರುಗಿಸಬೇಕು. ಒತ್ತುವರಿ ಮಾಡುವವರಿಗೆ ಇದೊಂದು ಪಾಠ ಆಗಲಿ'' ಎಂದು ಎನ್ ಆರ್ ರಮೇಶ್ ಒತ್ತಾಯಿಸಿದ್ದಾರೆ.

ಭಾರಿ ಬೆಲೆಬಾಳುವ ಮಾಲ್
ಬೆಂಗಳೂರಿನ ಪ್ರತಿಷ್ಠಿತ ಮಾಲ್ ಹಾಗೂ ಜನನಿಬಿಡ ಮಾಲ್ ಎಂದು ಪರಿಗಣಿತವಾಗಿರುವ ಈ ಮಾಲ್ ಬೆಂಗಳೂರಿನ ಹೃದಯ ಭಾಗವಾದ ಮಲ್ಲೇಶ್ವರದಲ್ಲಿದೆ.
4.29 ಎಕರೆ ಪ್ರದೇಶದಲ್ಲಿ ಸುಮಾರು 400 ಕೋಟಿ ರುಪಾಯಿ ಬೆಲೆ ಬಾಳುವ ಮಂತ್ರಿ ಶಾಪಿಂಗ್ ಮಾಲ್ ನಿರ್ಮಿಸಲಾಗಿದೆ.












Click it and Unblock the Notifications