ಬೆಂಗಳೂರಿನಲ್ಲಿ ಕನ್ನಡಿಗರಿಗೇ ಕೆಲಸಯಿಲ್ಲ: ತಮಿಳುನಾಡಿನವರು ಮಾತ್ರ ಅರ್ಜಿ ಹಾಕಿ ಎಂದ ಕಂಪನಿಗೆ ಕನ್ನಡಿಗರ ಕ್ಲಾಸ್!

ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದ ಜನರಿಗೆ ಅನ್ನ, ಆಶ್ರಯ ಹಾಗೂ ಉದ್ಯೋಗ ನೀಡುವ ಮಹಾನಗರ ಎಂದು ಎಲ್ಲರೂ ನಂಬಿದ್ದೇವೆ. ದೇಶದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಮಂದಿ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇದೇ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯೊಂದು ಉದ್ಯೋಗ ನೀಡುವಾಗ ಕನ್ನಡಿಗರನ್ನು ಕಡೆಗಣಿಸಿ, ಕೇವಲ ನೆರೆರಾಜ್ಯದವರಿಗೆ ಮಾತ್ರ ಮಣೆ ಹಾಕಲು ಮುಂದಾಗಿರುವುದು ಇದೀಗ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಡೇಟಾ ಅನಾಲಿಸ್ಟ್ ಹುದ್ದೆಯೊಂದಕ್ಕೆ ಕೇವಲ ತಮಿಳುನಾಡು ಮೂಲದವರು ಮಾತ್ರ ಅರ್ಜಿ ಸಲ್ಲಿಸಿ ಎಂದು ಷರತ್ತು ವಿಧಿಸಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Bengaluru Company Denies Job To Kannadigas Restricts Data Analyst Role For TN Candidates

ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್ ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಕಂಪನಿಯೊಂದರ ಜನರಲ್ ಮ್ಯಾನೇಜರ್ ಮತ್ತು ಎಚ್‌ಆರ್ ಟೀಮ್ ಹೆಡ್ ಆಗಿರುವ ಬಾಲ ಎಂ. ಎಂಬುವರು ಎರಡು ದಿನಗಳ ಹಿಂದೆ ವೃತ್ತಿಪರ ಜಾಲತಾಣ ಲಿಂಕ್ಡ್ ಇನ್‌ನಲ್ಲಿ ಉದ್ಯೋಗ ಪ್ರಕಟಣೆಯೊಂದನ್ನ ಹಂಚಿಕೊಂಡಿದ್ದರು.

ತಮ್ಮ ಕಂಪನಿಯಲ್ಲಿ ಖಾಲಿ ಇರುವ ಡೇಟಾ ಅನಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಅವರು, "ಈ ಹುದ್ದೆಗೆ ಕೇವಲ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಬೇರೆ ರಾಜ್ಯದ ಅಭ್ಯರ್ಥಿಗಳು ದಯವಿಟ್ಟು ಅರ್ಜಿ ಸಲ್ಲಿಸಬಾರದು" ಎಂಬ ಕಟ್ಟುನಿಟ್ಟಿನ ಷರತ್ತನ್ನ ಹಾಕಿದ್ದರು. ನಮ್ಮದೇ ನೆಲದಲ್ಲಿ ನಿಂತು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದ ಈ ಪೋಸ್ಟ್ ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಎಕ್ಸ್ ಜಾಲತಾಣದಲ್ಲಿ ಕನ್ನಡಿಗರ ಆಕ್ರೋಶ

ಎಚ್‌ಆರ್ ಮ್ಯಾನೇಜರ್ ಹಾಕಿದ್ದ ಈ ತಾರತಮ್ಯದ ಪೋಸ್ಟ್ ಅನ್ನು ಕರಣ್ ಗೌಡ ಎಂಬುವರು 'ಎಕ್ಸ್' ಜಾಲತಾಣದಲ್ಲಿ ಸ್ಕ್ರೀನ್‌ಶಾಟ್ ಸಮೇತ ಹಂಚಿಕೊಂಡಿದ್ದರು. "ಬೆಂಗಳೂರಿನಲ್ಲಿ ಕಚೇರಿ ಇಟ್ಟುಕೊಂಡು, ನಮ್ಮದೇ ನಾಡಿನ ನೀರು, ವಿದ್ಯುತ್, ಮೂಲಸೌಕರ್ಯಗಳನ್ನ ಬಳಸಿಕೊಳ್ಳುವ ಕಂಪನಿಯೊಂದು ಕನ್ನಡಿಗರಿಗೆ ಉದ್ಯೋಗ ನೀಡದೆ ಈ ರೀತಿ ತಾರತಮ್ಯ ಮಾಡಲು ಹೇಗೆ ಸಾಧ್ಯ?" ಎಂದು ಕರಣ್ ಗೌಡ ಪ್ರಶ್ನಿಸಿದ್ದರು.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸಾವಿರಾರು ಕನ್ನಡಿಗರು ಕಂಪನಿಯ ಈ ನೀತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡು ಇಂತಹ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತೀವ್ರ ವಿರೋಧದ ಬಳಿಕ ಷರತ್ತು ಹಿಂಪಡೆದ ಎಚ್‌ಆರ್

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ವಿರೋಧದ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕಂಪನಿಯ ಎಚ್‌ಆರ್ ಮ್ಯಾನೇಜರ್ ಬಾಲ ಎಂ. ಅವರು ಆ ವಿವಾದಾತ್ಮಕ ಪೋಸ್ಟ್ ತೆಗೆದು ಹಾಕಿದ್ದಾರೆ. ತಮಿಳುನಾಡು ಮೂಲದವರಿಗೆ ಮಾತ್ರ ಅವಕಾಶ ಎಂಬ ಷರತ್ತನ್ನ ಹಿಂಪಡೆದಿದ್ದಾರೆ. ಆದರೆ, ಈ ಒಂದು ಘಟನೆ ಐಟಿ-ಬಿಟಿ ವಲಯದಲ್ಲಿ ನಡೆಯುತ್ತಿರುವ ಒಳ ರಾಜಕೀಯವನ್ನು ಬಟಾಬಯಲು ಮಾಡಿದೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ತಾರತಮ್ಯ

ಬೆಂಗಳೂರಿನಲ್ಲಿರುವ ಅನೇಕ ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳಲ್ಲಿ ಪ್ರತಿಭೆ ಮತ್ತು ಅರ್ಹತೆ ಇದ್ದರೂ ಕನ್ನಡಿಗರನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಇದೆ. ನೇಮಕಾತಿ ವಿಭಾಗದಲ್ಲಿರುವ ಬೇರೆ ರಾಜ್ಯದ ಅಧಿಕಾರಿಗಳು, ಸ್ಥಳೀಯ ಪ್ರತಿಭಾವಂತ ಕನ್ನಡಿಗರನ್ನು ಬಿಟ್ಟು ತಮ್ಮದೇ ರಾಜ್ಯದ ಅಭ್ಯರ್ಥಿಗಳಿಗೆ, ಅದರಲ್ಲೂ ವಿಶೇಷವಾಗಿ ತಮಿಳುನಾಡು, ಆಂಧ್ರಪ್ರದೇಶ ಮೂಲದವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಾಜ್ಯ ಸರ್ಕಾರವು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ತರುವ ನಿಟ್ಟಿನಲ್ಲಿ ಕಠಿಣ ಹೆಜ್ಜೆ ಇಡದಿದ್ದರೆ ಮುಂದೊಂದು ದಿನ ಕನ್ನಡಿಗರು ತಮ್ಮದೇ ರಾಜಧಾನಿಯಲ್ಲಿ ನಿರುದ್ಯೋಗಿಗಳಾಗಿ ಬೀದಿಪಾಲಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ಕನ್ನಡಿಗರು ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+