Bengaluru: ಮೈಕ್ರೋ ಪ್ಲಾನ್ ಮೂಲಕ ಕಸ ನಿರ್ವಹಣೆಗೆ ಚುರುಕು; ವಾರ್ಡ್ ಒನ್ ಅಭಿಯಾನಕ್ಕೂ ಚಾಲನೆ
ಬೆಂಗಳೂರು: ಬೆಂಗಳೂರು ನಗರದ ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೈಕ್ರೋ ಪ್ಲ್ಯಾನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ, ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ನವೆಂಬರ್ 7ರ ಬೆಳಿಗ್ಗೆ ವಿದ್ಯಾರಣ್ಯಪುರದ ವಾರ್ಡ್ ಸಂಖ್ಯೆ 9ರ 1ನೇ ಬ್ಲಾಕ್, ಬಿ.ಇ.ಎಲ್. ಲೇಔಟ್‌ನಲ್ಲಿ ಮೈಕ್ರೋ ಪ್ಲಾನ್ ಅನುಷ್ಠಾನ ಹಾಗೂ ಸ್ವಚ್ಛತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರಸ್ತೆ ಗುಡಿಸುವಿಕೆ, ಮನೆ- ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು. ಕಸ ಸಂಗ್ರಹಣಾ ಆಟೋಗಳ ಕಾರ್ಯನಿರ್ವಹಣೆ, ಚಾಲಕರು, ಸಹಾಯಕರು ಹಾಗೂ ನಿಗದಿತ ಸ್ವಚ್ಛತಾ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಪಡೆದರು. 1ನೇ ಬ್ಲಾಕ್‌ನ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ, ಸ್ಥಳೀಯ ನಿವಾಸಿಗಳಿಂದ ಸಾರ್ವಜನಿಕ ಸಮಸ್ಯೆಗಳು ಹಾಗೂ ಸ್ವಚ್ಛತಾ ವ್ಯವಸ್ಥೆಯ ಕುರಿತು ಅಹವಾಲುಗಳನ್ನು ಆಲಿಸಿದರು.

ಕಿರಿದಾದ ರಸ್ತೆಗಳಲ್ಲಿ ಕಸ ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಕಸ ಸಂಗ್ರಹಣಾ ವಾಹನಗಳ ಸಂಚಾರ ಸವಾಲಾಗಿದೆ ಎಂದು ತಿಳಿಸಿದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಟ್ಟದಲ್ಲಿ ನೀತಿ ರೂಪಿಸಲಾಗಿದೆ.
ಕಿರಿದಾದ ರಸ್ತೆಗಳ ಪ್ರವೇಶದ್ವಾರದ ಬಳಿ ಕಸ ಸಂಗ್ರಹಣಾ ವಾಹನಗಳನ್ನು ನಿಲ್ಲಿಸುವ ಮೂಲಕ ಸಾರ್ವಜನಿಕರು ಅಲ್ಲಿಗೆ ಬಂದು ಕಸವನ್ನು ಹಸ್ತಾಂತರಿಸುವಂತೆ ಮನವಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಅಲ್ಲಿಯವರೆಗೆ ಸಾರ್ವಜನಿಕರು ಸ್ವಲ್ಪ ದೂರ ನಡೆದು ಬಂದು ಕಸವನ್ನು ವಾಹನಗಳಿಗೆ ಹಸ್ತಾಂತರಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದವರಾಗಿರಲಿ ಅಥವಾ ಉದ್ಯೋಗ ಹಾಗೂ ಇತರೆ ಕಾರಣಗಳಿಗಾಗಿ ನಗರಕ್ಕೆ ವಲಸೆ ಬಂದು ನೆಲೆಸಿರುವವರಾಗಿರಲಿ, ನಗರದ ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ನಾಗರಿಕರು ಪಾಲಿಕೆಯೊಂದಿಗೆ ಕೈಜೋಡಿಸಿ ಸ್ವಚ್ಛತಾ ಕಾರ್ಯಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮೈಕ್ರೋ ಪ್ಲಾನ್ ಮೂಲಕ ಸಿಬ್ಬಂದಿಯ ಹೊಣೆಗಾರಿಕೆ ಮತ್ತು ಪಾರದರ್ಶಕತೆ
ಮೈಕ್ರೋ ಪ್ಲಾನ್‌ನ ವಿವರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಹಂಚಿಕೊಳ್ಳಲಾಗುತ್ತಿದೆ. ಪ್ರತಿ ರಸ್ತೆಗೆ ನಿಯೋಜಿಸಿರುವ ಪೌರಕಾರ್ಮಿಕರು, ಚಾಲಕರು, ಸಹಾಯಕರು, ವಾಹನಗಳ ವಿವರಗಳು ಹಾಗೂ ಕಸ ಸಂಗ್ರಹಣೆಗೆ ಬರುವ ಸಮಯದ ಮಾಹಿತಿಯನ್ನು ಇದರಲ್ಲಿ ಒದಗಿಸಲಾಗುತ್ತಿದೆ. ನಾಗರಿಕರು ತಮ್ಮ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ಸಂಬಂಧಪಟ್ಟ ಜವಾಬ್ದಾರಿಯುತ ಸಿಬ್ಬಂದಿಯನ್ನು ಸಂಪರ್ಕಿಸಿ ತಿಳಿಸಬಹುದು ಎಂದು ಆಯುಕ್ತರು ಹೇಳಿದ್ದಾರೆ. ಸಿಬ್ಬಂದಿಯನ್ನು ಕ್ಷೇತ್ರಮಟ್ಟದಲ್ಲಿ ಹೊಣೆಗಾರರನ್ನಾಗಿಸುವುದರ ಜೊತೆಗೆ, ನಾಗರಿಕರು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಹಬ್ಬದ ಸಂದರ್ಭಗಳಲ್ಲಿ ಕಸದ ಉತ್ಪಾದನೆ ಹೆಚ್ಚಾಗುವುದರಿಂದ, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಈ ಅವಧಿಯಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಅಡ್ಡಿಯಾಗದಂತೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿಲಾಗಿದೆ. ಕೆಲವು ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಯೋಜಿಸಲಾಗಿದೆ. ಈ ಬಾರಿ ಮೈಕ್ರೋ ಪ್ಲಾನ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಪರಿಶೀಲನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಆಯುಕ್ತರು, ಕಸ ವಿಂಗಡಣೆ, ಮೈಕ್ರೋ ಪ್ಲಾನ್ ಅನುಷ್ಠಾನ ಹಾಗೂ ಸ್ವಚ್ಛತಾ ವ್ಯವಸ್ಥೆಯ ಕುರಿತು ಅರಿವು ಮೂಡಿಸಿದರು. ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Bengaluru Cleanliness: ವಾರ್ಡ್ 10ರಲ್ಲಿ 'ವಾರ್ಡ್ ಒನ್' ಅಭಿಯಾನಕ್ಕೆ ಚಾಲನೆ
ನಂತರ ಆಯುಕ್ತರು ವಾರ್ಡ್ ಸಂಖ್ಯೆ 10ರಲ್ಲಿ ನಡೆಯುತ್ತಿರುವ 'ವಾರ್ಡ್ ಒನ್' ಅಭಿಯಾನದ ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಸ್ವಚ್ಛತಾ ಹಾಗೂ ನಾಗರಿಕ ಸೌಲಭ್ಯಗಳ ಸುಧಾರಣಾ ಕಾರ್ಯಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏಳು ವಾರ್ಡ್‌ಗಳಲ್ಲಿ 'ವಾರ್ಡ್ ಒನ್' ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು. ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ನವೆಂಬರ್ ತಿಂಗಳೊಳಗೆ ಎಲ್ಲಾ ವಾರ್ಡ್‌ಗಳನ್ನು ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ. ಆದರೆ, ಅಗತ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ಎದುರಾಗಿರುವ ಸವಾಲುಗಳ ಹಿನ್ನೆಲೆಯಲ್ಲಿ ಅಭಿಯಾನವು ಡಿಸೆಂಬರ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆಯಿದೆ ಎಂದರು.
ಮುಂದಿನ ವಾರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಎರಡು ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಸಮಗ್ರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಯೋಜನೆಯಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನೇರವಾಗಿ ಕ್ಷೇತ್ರಕ್ಕಿಳಿದು, ಪರಸ್ಪರ ಸಮನ್ವಯದೊಂದಿಗೆ ಒಂದೇ ದಿನದಲ್ಲಿ ಸಾಧ್ಯವಾದಷ್ಟು ಎಲ್ಲಾ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಸ್ವಚ್ಛತಾ ಕಾರ್ಯ: ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ಒಂದೇ ದಿನದಲ್ಲಿ ಕೈಗೊಂಡ ಕಾಮಗಾರಿಗಳು ಹಾಗೂ ಪರಿಹರಿಸಲಾದ ಸಮಸ್ಯೆಗಳ ಪ್ರಗತಿಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ.
ಅಭಿಯಾನದಡಿ ಕೈಗೊಳ್ಳಲಾಗುವ ಪ್ರತಿಯೊಂದು ಕಾರ್ಯದ ಪ್ರಗತಿಯನ್ನು 30 ಅಂಶಗಳ ಪರಿಶೀಲನಾ ಪಟ್ಟಿಯ ಆಧಾರದ ಮೇಲೆ ದಾಖಲಿಸಿ, ಸಚಿವರ ಕಚೇರಿಗೆ ವರದಿ ಸಲ್ಲಿಸಲಾಗುತ್ತಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಾರ್ಡ್‌ವಾರು ಸಮಗ್ರ ಸ್ವಚ್ಛತೆ ಮತ್ತು ನಾಗರಿಕ ಸೌಲಭ್ಯಗಳ ಸುಧಾರಣೆ ಸಾಧಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಸಾರ್ವಜನಿಕರು ಕೂಡ ಅಭಿಯಾನಕ್ಕೆ ಸಹಕರಿಸಬೇಕು. ತಮ್ಮ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ, ಅವುಗಳನ್ನು ಪರಿಹರಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.




Click it and Unblock the Notifications
