ಬೆಂಗಳೂರು ನಗರದಲ್ಲಿ ರೈಲು ಸಂಚಾರಕ್ಕೆ ಬೋಗಿಗಳ ಕೊರತೆ
ಬೆಂಗಳೂರು, ಸೆಪ್ಟೆಂಬರ್ 14: ಉದ್ಯಾನ ನಗರಿ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ನಮ್ಮ ಮೆಟ್ರೋ ಮತ್ತು ಸಬ್ ಅರ್ಬನ್ ರೈಲುಗಳು ಪರಿಹಾರ ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಗಳು ರೈಲುಗಳ ಕೊರತೆಯನ್ನು ಎದುರಿಸುತ್ತಿವೆ. ನಮ್ಮ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬೋಗಿಗಳ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಸದ್ಯದ ಮಾಹಿತಿ ಪ್ರಕಾರ ಹೊಸ ಬೋಗಿಗಳು ಬರುವ ತನಕ ಹೊಸ ಮಾರ್ಗದಲ್ಲಿ ರೈಲುಗಳ ಸಂಚಾರ ನಡೆಸುವುದಿಲ್ಲ.
ಬೆಂಗಳೂರು ನಗರದ ನಿರೀಕ್ಷಿತ ಮತ್ತು ಮಹತ್ವದ ಮೆಟ್ರೋ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ. ಟೆಕ್ ಹಬ್ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಹಳದಿ ಮಾರ್ಗದ ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಈಗ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಆದರೆ ರೈಲು ಸಂಚಾರ ಆರಂಭಿಸಲು ಬೋಗಿಗಳ ಕೊರತೆ ಇದೆ.

ಇಷ್ಟು ಮಾತ್ರವಲ್ಲ ಈಗ ಕಾಮಗಾರಿ ನಡೆಯುತ್ತಿರುವ ನಮ್ಮ ಮೆಟ್ರೋ ಮಾರ್ಗದ ಮೇಲೆಯೂ ರೈಲುಗಳು ಕೊರತೆ ಪ್ರಭಾವ ಬೀರಲಿದೆ. ಇವುಗಳಲ್ಲಿ ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ-ನಾಗವಾರ) ಮತ್ತು ಹೊರ ವರ್ತುಲ ರಸ್ತೆಯ ನೀಲಿ ಮಾರ್ಗ (ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆಆರ್ ಪುರ) ದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ ಸೇರಿದೆ.
ರೈಲು ಬೋಗಿಯ ಕೊರತೆ: ಈ ಮಾರ್ಗದಲ್ಲಿ 2025ರಲ್ಲಿ ಭಾಯಶಃ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಬಯಸಿದೆ. ಆದರೆ ಬೋಗಿಯನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿರುವ ಬಿಇಎಂಎಲ್ 2026ರಲ್ಲಿ ಬೋಗಿಯನ್ನು ಪೂರೈಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಈಗಿರುವ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಹೆಚ್ಚಿನ ರೈಲುಗಳ ಅಗತ್ಯವಿದೆ. 2025ರ ಮಧ್ಯಭಾಗದಲ್ಲಿ ಹೆಚ್ಚುವರಿ ರೈಲುಗಳನ್ನು ಈ ಮಾರ್ಗದಲ್ಲಿ ನಿರೀಕ್ಷೆ ಮಾಡಬಹುದು. ಹಳದಿ, ನೇರಳೆ ಮತ್ತು ಹಸಿರು ಮಾರ್ಗಕ್ಕೆ ಬೋಗಿಯನ್ನು ಚೀನಾದ ಸಿಆರ್‌ಆರ್‌ಸಿ ಮತ್ತು ಕೊಲ್ಕತ್ತಾ ಮೂಲದ ಟಿಆರ್‌ಎಸ್‌ಎಲ್ ಪೂರೈಕೆಯನ್ನು ಮಾಡಬೇಕಿದೆ.
ಬಿಎಂಆರ್‌ಸಿಎಲ್ ಮಾಹಿತಿಗಳ ಪ್ರಕಾರ 2020ರ ಫೆಬ್ರವರಿಯಲ್ಲಿಯೇ ಸಿಆರ್‌ಆರ್‌ಸಿಗೆ 216 ಬೋಗಿಯನ್ನು ಪೂರೈಕೆ ಮಾಡಲು ಟೆಂಡರ್ ನೀಡಲಾಗಿದೆ. 173 ವಾರದಲ್ಲಿ ಪೂರೈಕೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು. 206ರ ಪೈಕಿ 204 ಬೋಗಿಯನ್ನು ಆಂಧ್ರ ಪ್ರದೇಶದಲ್ಲಿ ಉತ್ಪಾದಿಸಲು ಕಂಪನಿ ಮುಂದಾಗಿತ್ತು. ಆದರೆ ಭಾರತ ಮತ್ತು ಚೀನಾ ನಡುವಿನ ವಾಣಿಜ್ಯ ವಹಿವಾಟು ಮತ್ತು ಇತರ ವಿವಾದದ ಕಾರಣ ಕೋಲ್ಕತ್ತಾ ಮೂಲದ ಟಿಆರ್‌ಎಸ್‌ಎಲ್ ಜೊತೆ ಕಂಪನಿ ಒಪ್ಪಂದವನ್ನು ಮಾಡಿಕೊಂಡಿತು.
ಕೋವಿಡ್ ಪರಿಸ್ಥಿತಿ, ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ, ವಾಪಾರದ ಮೇಲಿನ ನಿರ್ಬಂಧ, ಸಿಆರ್‌ಆರ್‌ಸಿ ಇಂಜನಿಯರ್‌ಗಳಿಗೆ ವೀಸಾ ನೀಡುವಲ್ಲಿ ಆದ ವಿಳಂಬದ ಕಾರಣ ಬೋಗಿಗಳ ಉತ್ಪಾದನೆ ನಿಧಾನಗತಿಯಲ್ಲಿ ಸಾಗಿದೆ. ಹಳದಿ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ರೈಲು ಸಂಚಾರ ಆರಂಭಿಸಲು ಬೋಗಿಗಳ ಕೊರತೆ ಇದೆ.
ಬಿಎಂಆರ್‌ಸಿಎಲ್ ಸದ್ಯ 2024ರ ಫೆಬ್ರವರಿಯಲ್ಲಿ ಸಿಆರ್‌ಆರ್‌ಸಿ ಪೂರೈಕೆ ಮಾಡಿದ 6 ಬೋಗಿಯ ಮಾದರಿಯನ್ನು ಮಾತ್ರ ಒಳಗೊಂಡಿದೆ. ಸದ್ಯ ಈ ಬೋಗಿಯ ಮೂಲಕ ಲಕ್ನೋ ಮೂಲದ ಆರ್‌ಡಿಎಸ್‌ಒ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿ, ಪರೀಕ್ಷೆಯನ್ನು ನಡೆಸುತ್ತಿದೆ. 20 ನಿಮಿಷಗಳ ಅಂತರದಲ್ಲಿ ಈ ಮಾರ್ಗದಲ್ಲಿ ರೈಲು ಓಡಿಸಲು ಬಿಎಂಆರ್‌ಸಿಎಲ್‌ಗೆ ಕನಿಷ್ಠ 5 ಸೆಟ್ ಬೋಗಿಗಳ ಅವಶ್ಯಕತೆ ಇದೆ.
ಆರ್‌ಡಿಎಸ್‌ಒ ಪರೀಕ್ಷೆ ನವೆಂಬರ್ 15ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್‌ನಲ್ಲಿ ಬೋಗಿಗಳು ಬರಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಮಾರ್ಗದಲ್ಲಿ ಎರಡು ಹಂತದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಜನವರಿ 2025 ಮತ್ತು ವರ್ಷದ ಮಧ್ಯದಲ್ಲಿ ಮತ್ತೊಂದು ಹಂತದಲ್ಲಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications