Bengaluru Rail Project: 3 ಹಂತಗಳಲ್ಲಿ ವರ್ತುಲ ರೈಲ್ವೆ ನಿರ್ಮಾಣ, 2500 ಎಕರೆ ಜಾಗ ಬೇಕು: ವಿ.ಸೋಮಣ್ಣ
ಬೆಂಗಳೂರು, ಜೂನ್ 08: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಬೆಂಗಳೂರು ವರ್ತುಲ ರೈಲ್ವೆ ಯೋಜನೆಯು ಹಳ್ಳಿಗಳ ಮಧ್ಯ ಹಾದು ಹೋಗಬಾರದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಕುರಿತು ಡಿಪಿಆರ್ ತಯಾರಿಸಲಾಗುವುದು. ಅಂದ ಹಾಗೇ ಯೋಜನೆ ಸಾಕಾರಕ್ಕೆ ಸಂಪೂರ್ಣ ಅನುದಾನ ರೈಲ್ವೆ ಇಲಾಖೆ ನೀಡಲಿದೆ ಎಂದು ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ಬೆಂಗಳೂರಿನ ಕುಮಾರ ಕೃಪಾದಲ್ಲಿ ಶನಿವಾರ 'ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆ' (Benglauru Circular Railway Project) ಬಗ್ಗೆ ಪೂರ್ವಭಾವಿ ಪರಿಶೀಲನಾ ಸಭೆ ನಡೆಸಿದರು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳ ಬಗ್ಗೆ ಚರ್ಚಿಸಿ ಬಳಿಕ ಸುದ್ದಿಗಾರರಿಗೆ ಮಹತ್ವದ ಮಾಹಿತಿ ನೀಡಿದರು.

ಈ ಯೋಜನೆಗೆ 2500 ಎಕರೆ ಜಾಗ ಬೇಕಾಗಿದೆ. ಹಳ್ಳಿಗಳ ಮೇಲೆ ರೈಲು ಹೋಗಾಬರದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ಪ್ಲಾನ್ ಮಾಡಲಾಗುವುದು. ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಮುಂದಿನ 05 ದಶಕವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗೆ ಕೈ ಹಾಕಲಾಗಿದೆ. ಹೀಗಾಗಿ ಮುಂದಿನ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ. ಅದೆಲ್ಲ ಪರಿಗಣಿಸಿಯೇ ಸಮಗ್ರ ಯೋಜನಾ ವರದಿ ತಯಾರಾಗಲಿದೆ ಎಂದು ಹೇಳಿದರು..
3 ಹಂತದಲ್ಲಿ ಯೋಜನೆ ನಿರ್ಮಾಣ
ಒಟ್ಟು 271 ಕಿಲೋ ಮೀಟರ್ ಉದ್ದದ ಯೋಜನೆ ಇದಾಗಿದೆ. ಸಾಧ್ಯವಿರುವ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಉಪನಗರ ರೈಲ್ವೆ ಮಾರ್ಗ ಸಂಪರ್ಕಿಸುಂತೆ ನಿರ್ಮಿಸಲಾಗುವುದು. ಮುಖ್ಯವಾಗಿ ''ನಿಡವಂದ-ದೊಡ್ಡಬಳ್ಳಾಪುರ-ದೇವನಹಳ್ಳಿ-ಮಾಲೂರು, ಮಾಲೂರಿನಿಂದ ಆನೇಕಲ್-ಹೆಜ್ಜಾಲ ಮತ್ತು ಹೆಜ್ಜಾಲದಿಂದ-ಸೋಲೂರು-ನಿಡವಂದ'' ಹೀಗೆ ಮೂರು ಹಂತಗಳಲ್ಲಿ ವರ್ತುಲ ರೈಲ್ವೆ ಯೋಜನೆಯನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು. ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲು ಎರಡು ರೈಲುಗಳು ಇರಲಿವೆ ಎಂದು ಅವರು ವಿವರಿಸಿದರು.

ಮೇಗಾ ಕೋಚಿಂಗ್ ಟರ್ಮಿನಲ್ : ಡಿಪಿಆರ್..
ಬೆಂಗಳೂರು, ದೇವನಹಳ್ಳಿ, ಯಲಹಂಕ ಮಧ್ಯೆ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಪ್ರಸ್ತಾಪಿಸಲಾಗಿದೆ. ಶೀಘ್ರವೇ ಇದರ ಡಿಪಿಆರ್ ಆಗಿದೆ. ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಟರ್ಮಿನಲ್ ನಿರ್ಮಾಣವಾಗುತ್ತಿರುವುದರಿಂದ ಹಲವು ಅನುಕೂಲ ಇವೆ ಎಂದರು. ಇತ್ತೀಚೆಗಷ್ಟೇ ಈ ಟರ್ಮಿನಲ್ ಯೋಜನೆಗೆ ಸಮೀಕ್ಷೆಗೆ ಅನುಮೋದನೆ ನೀಡಲಾಗಿತ್ತು. ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆ ಪೂರೈಕೆ ಉದ್ದೇಶದಿಂದ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿತ್ತು.
ಸಭೆಯಲ್ಲಿದ್ದ ಕೇಂದ್ರದ ರಾಜ್ಯ ಖಾತೆ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪ, ಸಂಸದರಾದ ಪಿ.ಸಿ ಮೋಹನ್, ಡಾ. ಸಿ.ಎನ್ ಮಂಜುನಾಥ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಯೋಜನೆ ಬಗ್ಗೆ ಸವಿವರವಾಗಿ ಚರ್ಚಿಸಿದರು.
ಬೆಂಗಳೂರಿನ ಕುಮಾರ ಕೃಪಾದಲ್ಲಿಂದು ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಕುರಿತು ಪೂರ್ವಭಾವಿ ಪರಿಶೀಲನಾ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
— V. Somanna (@VSOMANNA_BJP) June 7, 2025
ಈ ಸಭೆಯಲ್ಲಿ, ಕೇಂದ್ರದ ರಾಜ್ಯಖಾತೆ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಕು. ಶೋಭಾ ಕರಂದ್ಲಾಜೆಯವರು, ರಾಜ್ಯದ… pic.twitter.com/rDIy128EIV
ಇದು ಲಜ್ಜಗೇಡಿ ಸರ್ಕಾರ ಎಂದ ಸೋಮಣ್ಣ
ಆರ್‌ಸಿಬಿ ಕಪ್ ಗೆದ್ದ ತಕ್ಷಣ ಹೆಸರು ಬರುತ್ತೆ ಎಂದುಕೊಂಡು ಪೂರ್ವ ಪ್ಲಾನ್ ಇಲ್ಲದೇ ಆತುರಾತುರವಾಗಿ ವಿಜಯೋತ್ಸವ ಕಾರ್ಯಕ್ರಮ ಮಾಡಿದರು. ಪರಿಣಾಮ 11 ಮಂದಿ ಯುವ ಅಭಿಮಾನಿಗಳು ಮೃತಪಟ್ಟರು. ಇದೊಂದು ಲಜ್ಜಗೇಡಿ ರಾಜ್ಯ ಸರ್ಕಾರ. ಇಂದಿನ ಬೆಳವಣಿಗೆಯಿಂದ ನೀವು ಪಾಪಕ್ಕೆ ಗುರಿಯಾಗುತ್ತೀರಿ. ಪ್ರಯಾಣಿಕ ಅಧಿಕಾರಿ ಪೊಲೀಸ್ ಕಮಿಷನರ್ ಅನ್ನು ಅಮಾನತು ಮಾಡಿದ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲಿ ಎಂದು ರೈಲ್ವೆ ರಾಜ್ಯ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು.












Click it and Unblock the Notifications