Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಗಡ್ಕರಿ
ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು 2023 ರ ಅಂತ್ಯದ ವೇಳೆಗೆ ಅಥವಾ 2024ರ ಜನವರಿಯೊಳಗೆ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಗ್ರೀನ್ ಫೀಲ್ಡ್ ಯೋಜನೆಯನ್ನು ₹17,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2024ರ ಮಾರ್ಚ್ ವೇಳೆಗೆ ಸಿದ್ಧಗೊಳ್ಳುವಂತೆ ಈ ಹಿಂದೆ ನಿಗದಿ ಮಾಡಲಾಗಿತ್ತು. ಅವಧಿಗಿಂತ ಮುನ್ನವೇ ಕಾಮಗಾರಿ ಮುಗಿಯಲಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಗಳು ಎಂದು ಅಂದಾಜಿಸಲಾಗಿದೆ. ಇದು 285.3 ಕಿಲೋಮೀಟರ್ ಉದ್ದದ, ನಾಲ್ಕು ಲೇನ್ ಯೋಜನೆಯಾಗಿದೆ. ವಿಮಾನ ಪ್ರಯಾಣಕ್ಕಿಂತ ರಸ್ತೆ ಪ್ರಯಾಣವೇ ಕಡಿಮೆ ಸಮಯದ್ದಾಗಲಿದೆ ಎನ್ನುವುದು ಈ ಹೆದ್ದಾರಿಯ ಹೆಗ್ಗಳಿಕೆಯಾಗಿದೆ.
ಚೆನ್ನೈನಲ್ಲಿ ನಿತಿನ್ ಗಡ್ಕರಿ
ಗುರುವಾರ ಚೆನ್ನೈನಲ್ಲಿ ಅಶೋಕ್ ಲೇಲ್ಯಾಂಡ್‌ನ 75ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಗಡ್ಕರಿ ಮಾತನಾಡಿದರು. "ನಾನು ಇಂದು ಚೆನ್ನೈನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಈ ವರ್ಷಾಂತ್ಯ ಅಥವಾ ಜನವರಿ 2024 ರ ವೇಳೆಗೆ ಪ್ರಾರಂಭವಾಗಲಿದೆ. ಆದ್ದರಿಂದ, ನೀವು ಈ ವಲಯದಲ್ಲಿ ಐಷಾರಾಮಿ ಬಸ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಪ್ರಾರಂಭಿಸಬಹುದು" ಎಂದು ಸಚಿವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
"ನಾವು ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಪ್ರವೇಶ ನಿಯಂತ್ರಿತ ಹೆದ್ದಾರಿಗಳ ಯೋಜನೆಯ ಮೂಲಕ ನಾವು ದೆಹಲಿಯನ್ನು ಸೂರತ್, ನಾಸಿಕ್, ಅಹ್ಮದ್ ನಗರ, ಕರ್ನೂಲ್, ಚೆನ್ನೈ, ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಸಂಪರ್ಕಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಕಾಮಗಾರಿ ಬಗ್ಗೆ ಸಂತಸ
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವೇಗದ ಬಗ್ಗೆ ಅವರು ತೃಪ್ತಿ ಹೊಂದಿದ್ದಾರೆ ಮತ್ತು ಚೆನ್ನೈ ಬಂದರು-ಮಧುರವೊಯಲ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಯೋಜನೆಯ ಕಾಮಗಾರಿಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ಮೆಥನಾಲ್ ಮಿಶ್ರಿತ ಇಂಧನದಿಂದ ಚಲಿಸಬಲ್ಲ ಅಶೋಕ್ ಲೇಲ್ಯಾಂಡ್‌ನ ವಾಹನವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವುದಾಗಿ ಸಚಿವರು ಹೇಳಿದರು.
ಭಾರತಮಲಾ ಯೋಜನೆಯಡಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. 2011ರಲ್ಲಿಯೇ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ಆರಂಭ ತಡವಾಗಿತ್ತು, 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.












Click it and Unblock the Notifications