ಬೆಂಗಳೂರು-ಚೆನ್ನೈ, ಬೆಂಗಳೂರು-ಪುಣೆ, ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇನಿಂದ ಕರ್ನಾಟಕಕ್ಕೆ ಏನೆಲ್ಲಾ ಪ್ರಯೋಜನೆ?
Expressways: ರಾಜ್ಯದಲ್ಲಿ ಇದೀಗ ಕೆಲವು ಎಕ್ಸ್‌ಪ್ರೆಸ್ ವೇಗಳ ಕಾಮಗಾರಿ ಪೂರ್ಣಗೊಂಡಿವೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಹಾಗಾದ್ರೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ, ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ, ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇಗಳ ಕಾಮಗಾರಿ ಎಲ್ಲಿಗೆ ಬಂದಿವೆ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದು ಹೋಗಲಿವೆ ಹಾಗೂ ಕರ್ನಾಟಕಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Bengaluru-Chennai Expressway: ಭಾರತದಲ್ಲಿ ಇದೇ ವರ್ಷ ಉದ್ಘಾಟನೆ ಆಗಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೂಡ ಒಂದಾಗಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಯವಾಗಿದೆ. ಸಂಚಾರಕ್ಕೂ ಕೂಡ ಮುಕ್ತವಾಗಿದೆ. ಆದ್ರೆ ಟೋಲ್ ಶುಲ್ಕ ಇನ್ನೂ ಜಾರಿ ಮಾಡಲಿಲ್ಲ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಈಗಾಗಲೇ ಕರ್ನಾಟಕದಲ್ಲಿ ಬಹುತೇಕ ಪೂರ್ಣವಾಗಿದ್ದು, 71 ಕಿಲೋ ಮೀಟರ್ ಸಂಚಾರಕ್ಕೆ ಮುಕ್ತವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾಮಗಾರಿ ಬಾಕಿಯೊದೆ. ಈ ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಯೋಜನೆಗೆ ಅಂದಾಜು 654 ಕೋಟಿ ರೂಪಾಯಿ ವೆಚ್ಚ. ಎರಡು ಪ್ರಮುಖ ಮೆಟ್ರೋಪಾಲಿಟನ್ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸಲಿವೆ.
ಪ್ರಯೋಜನೆಗಳು?: 260 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ಅನ್ನು ಗ್ರೀನ್‌ಫೀಲ್ಡ್ ಯೋಜನೆಯಡಿ ₹17,900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದು ಪೂರ್ಣಗೊಂದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ 7 ಗಂಟೆಗಳಿಂದ ಕೇವಲ 3 ಗಂಟೆಗೆ ಇಳಿಕೆಯಾಗಲಿದೆ.
ಅದರಲ್ಲೂ ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಈ ಹಿಂದೆ ಇದ್ದ ನಗರಗಳ ಅಂತರವನ್ನು 350-288 ಕಿಲೋ ಮೀಟರ್‌ಗೆ ಇಳಿಕೆ ಮಾಡುತಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಲೋ ಮೀಟರ್ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಮೊದಲು 6 ಗಂಟೆಗಳಿಗಿಂತ ಹೆಚ್ಚು ತೆಗೆದುಕೊಳ್ಳುತ್ತಿತ್ತು. ಇದೀಗ ಈ ಹೆದ್ದಾರಿಯಿಂದ 3 ಗಂಟೆ ಪ್ರಯಾಣದ ಸಮಯ ಕಡಿತವಾಗಲಿದೆ. ಕರ್ನಾಟಕದಲ್ಲಿ ಮೂರು ಪ್ಯಾಕೇಜ್‌ಗಳಾಗಿ ವಿಂಗಡನೆ ಮಾಡಲಾಗಿದೆ. ಮೊದಲ ಪ್ಯಾಕೇಜ್ ಹೊಸಕೋಟೆ-ಮಾಲೂರು ನಡುವೆ 27.1 ಕಿ.ಮೀ., ಎರಡನೇಯದು ಮಾಲೂರು-ಬಂಗಾರಪೇಟೆ 27.1 ಕಿ. ಮೀ. ಮತ್ತು ಮೂರನೇಯದಾಗಿ ಬಂಗಾರಪೇಟೆ-ಬೇತಮಂಗಲ ನಡುವೆ 17.5 ಕಿ.ಮೀ. ಇದೆ.
ಯಾವೆಲ್ಲಾ ಮಾರ್ಗಗಳಲ್ಲಿ ಹಾದು ಹೋಗಲಿದೆ?: ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ.
Bengaluru Pune Expressway: ಈ ಹೊಸ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದರೆ, ಬೆಂಗಳೂರು, ಪುಣೆ ಮತ್ತು ಮುಂಬೈ ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗಲಿದ್ದು, ಕೇವಲ 7 ಗಂಟೆ ಆಗುತ್ತದೆ. ಈ ಮೂಲಕ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವವರಿಗೆ ಇದು ತುಂಬಾ ಸಹಕಾರಿಯಾಗಲಿದೆ.
700 ಕಿಲೋಮೀಟರ್ ಉದ್ದದ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ವೇ 3 ನಗರಗಳ ನಡುವಿನ ಪ್ರಯಾಣದ ದೂರವನ್ನು 95 ಕಿಲೋ ಮೀಟರ್‌ಗಳಷ್ಟು ಕಡಿಮೆ ಮಾಡಲಿದ್ದು, ಈ ನಗರಗಳ ನಡುವಿನ ಪ್ರಯಾಣದ ಸಮಯ 7 ಗಂಟೆ ಆಗಲಿದೆ. ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ 699 ಕಿಲೋ ಮೀಟರ್‌ಗಳಷ್ಟು ವಿಸ್ತರಿಸಲಿದ್ದು, ಇದರ ನಿರ್ಮಾಣಕ್ಕೆ ಸುಮಾರು ₹50,000 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.
ಇನ್ನೂ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಅಧಿಕಾರಿಗಳು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಅಂತಿಮ ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಪ್ರಸ್ತಾವನೆ ಸಲ್ಲಿಕೆ ಬಳಿಕ ಭೂಸ್ವಾಧೀನ ಮತ್ತು ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಇವೆಲ್ಲ ಪೂರ್ಣಗೊಂಡರೆ, ಎಕ್ಸ್‌ಪ್ರೆಸ್‌ವೇ 2028ರಲ್ಲಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೆರೆಯುವ ನಿರೀಕ್ಷೆಯಿದೆ.
ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗಲಿದೆ?: ಈ ಎಕ್ಸ್‌ಪ್ರೆಸ್‌ವೇ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಈ ಪೈಕಿ 9 ಕರ್ನಾಟಕದಲ್ಲಿ ಮತ್ತು ಮೂರು ಮಹಾರಾಷ್ಟ್ರದ ಜಿಲ್ಲೆಗಳಾಗಿವೆ. ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು, ಮಹಾರಾಷ್ಟ್ರದ ಸಾಂಗ್ಲಿ, ಸತಾರ, ಪುಣೆ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಪ್ರಯೋಜನೆಗಳೇನು?: ಈ ಕಾರಿಡಾರ್ ಪುಣೆ ರಿಂಗ್ ರಸ್ತೆಯ ಕಂಜಾಲೆಯಿಂದ ಪ್ರಾರಂಭವಾಗಿ ಬೆಂಗಳೂರು ಮಹಾನಗರ ವ್ಯಾಪ್ತಿಯ ಸ್ಯಾಟಲೈಟ್ ರಿಂಗ್ ರಸ್ತೆಯ ಮುತಗಡಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಈ ಹೆದ್ದಾರಿ ನಿರ್ಮಾಣವಾದರೆ ದಟ್ಟಣೆ ಕಡಿಮೆಯಾದಂತಾಗಲಿದೆ. ಅಲ್ಲದೆ, ಹಲವು ಯೋಜನೆಗಳ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿದಂತಾಗಲಿದೆ.
ಎಕ್ಸ್‌ಪ್ರೆಸ್‌ವೇ ಪುಣೆ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು 15 ಗಂಟೆಗಳಿಂದ ಕೇವಲ 7 ಗಂಟೆಗಳವರೆಗೆ ಕಡಿತಗೊಳಿಸುತ್ತದೆ. ಭಾರತ್‌ಮಾಲಾ ಪರಿಯೋಜನ ಹಂತ 2 ಉಪಕ್ರಮದ ಭಾಗವಾಗಿರುವ ಈ ಎಕ್ಸ್‌ಪ್ರೆಸ್ ವೇನಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 120 ಕೀಲೋ ಮೀಟರ್ ಆಗಿದೆ. ಈ ಮೂಲಕ ಎರಡು ನಗರಗಳ ನಡುವೆ ಅತೀ ಕಡಿಮೆ ಸಮಯದ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ.
Bengaluru-Mangaluru Expressway: ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದೆ. ಇದು 6 ಪಥಗಳೊಂದಿಗೆ 335 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿರಲಿದೆ. ಈ ಯೋಜನೆಯ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-ಲೋಕೋಪಯೋಗಿ ಇಲಾಖೆಯಿಂದ ನಡೆಯಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬೆಂಗಳೂರು ಮತ್ತು ಮಂಗಳೂರನ್ನು ಹಾಸನ ಮೂಲಕ ಸಂಪರ್ಕಿಸುವ ಹೊಸ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ, ಎರಡೂ ನಗರಗಳ ನಡುವಿನ ಪ್ರಯಾಣದ ಸಮಯ 7ರಿಂದ 8 ಗಂಟೆಗಳಷ್ಟು ಕಡಿಮೆಯಾಗಲಿದೆ. ಇದರಿಂದ ಸಮಯ ಉಳಿತಾಯ ಆದಂತಾಗಲಿದ್ದು, ವಾಹನ ಸವಾರರಿಗೆ ತುಂಬಾ ಸಹಕಾರಿಯಾಗಲಿದೆ.
ಬೆಂಗಳೂರು-ಮಂಗಳೂರು ನಡುವಿನ ಸಂಪರ್ಕವನ್ನು ಸುಧಾರಿಸುವ ಹಿನ್ನೆಲೆ ಈ ಹೆದ್ದಾರಿ ನಿರ್ಮಾಣ ಕಾಮಗಾರಿ 2028ರ ವೇಳೆಗೆ ಪ್ರಾರಂಭ ಆಗಲಿವೆ. ಡಿಪಿಆರ್ ಪ್ರಕ್ರಿಯೆ ಮುಗಿದ ಬಳಿಕ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ಆರಂಭ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸುಮಾರು 335 ಕಿಲೋ ಮೀಟರ್ ಉದ್ದದ ಪ್ರಸ್ತಾವಿತ ಎಕ್ಸ್‌ಪ್ರೆಸ್‌ವೇ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ಸಮಯವನ್ನು 7-8 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಇದು ನಿರ್ಮಾಣವಾದರೆ, ರಾಜ್ಯದ ಸಾರಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ.
ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹಾದುಹೋಗಲಿದೆ. ಎಕ್ಸ್‌ಪ್ರೆಸ್‌ವೇ ಹಾಸನದ ಮೂಲಕ ಹಾದುಹೋಗಲಿರುವ ಹಿನ್ನೆಲೆ ಈ ಭಾಗದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಿದಂತಾಗಲಿದೆ. ದಟ್ಟಣೆ ಕಡಿಮೆ ಮಾಡಲಿದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೊತೆಗೆ ಪ್ರವಾಸೋದ್ಯ, ಉದ್ಯಮ, ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿಗೆ ತುಂಬಾ ಸಹಕಾರಿಯಾಗಲಿದೆ.












Click it and Unblock the Notifications