ಮಂಡ್ಯದಿಂದ ಸ್ಪರ್ಧೆ: ಸುಮಲತಾ ಅಂಬರೀಷ್‌ಗೆ ಪ್ರಕಾಶ್ ರೈ ಬೆಂಬಲ
ಬೆಂಗಳೂರು, ಮಾರ್ಚ್ 18: ಸುಮಲತಾ ಅವರು ಅಂಬರೀಷ್ ಜೊತೆ ಇದ್ದವರು. ಅವರು ಮಂಡ್ಯದ ಸೊಸೆ. ಅವರು ರಾಜಕೀಯದ ಕುರಿತು ಅನುಭವಿಯಂತೆ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಎಂದು ಹೇಳಲಾಗದು. ನಾನು ಅವರಿಗೆ ಬೆಂಬಲವಾಗಿದ್ದೇನೆ ಎಂದು ನಟ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಚುನಾವಣಾ ಆಕಾಂಕ್ಷಿ ಪ್ರಕಾಶ್ ರೈ ಹೇಳಿದ್ದಾರೆ.
ಮಾಗಡಿ ರಸ್ತೆಯ ಅಂಜನ್ ಚಿತ್ರಮಂದಿರದ ಸಮೀಪ ನಿರ್ಮಾಣ ಮಾಡಿರುವ ತಮ್ಮ ನೂತನ ರಾಜಕೀಯ ಕಚೇರಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಮಂಡ್ಯದ ಜನತೆ ಭಾರತೀಯ ಪ್ರಜೆಗಳಾಗಿ ಆಲೋಚನೆ ಮಾಡಬೇಕು. ಸುಮಲತಾ ಸರಿಯಾದ ರೀತಿಯಲ್ಲಿ ಅನುಭವಿಯಂತೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಸ್ಪರ್ಧಿಸುವ ಹಕ್ಕು ಅವರಿಗೆ ಇದೆ. ನನಗೆ ಅವರು ಹಲವು ವರ್ಷಗಳಿಂದ ಪರಿಚಯ. ಅವರಿಗೆ ಬೆಂಬಲ ನೀಡುತ್ತೇನೆ ಎಂದು ರೈ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರದು ರಾಜಕೀಯಕ್ಕೆ ಬರುವ ವಯಸ್ಸಲ್ಲ. ಅವರು ಇಷ್ಟು ಬೇಗ ರಾಜಕೀಯ ಪ್ರವೇಶಿಸಬಾರದಿತ್ತು. ಅವರಿನ್ನೂ ಯುವಕ. ಈಗಷ್ಟೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಇನ್ನಷ್ಟು ಅನುಭವದ ಅಗತ್ಯವಿದೆ. ಇದನ್ನು ನಿಖಿಲ್ ಕುರಿತು ಪ್ರೀತಿಯಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.
ಕುಟುಂಬದವರು ರಾಜಕೀಯದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಅದು ಕುಟುಂಬ ರಾಜಕಾರಣ ಆಗುತ್ತದೆ. ಅರ್ಹತೆ ಇದ್ದು ರಾಜಕೀಯಕ್ಕೆ ಬಂದರೆ ಅದು ಕುಟುಂಬ ರಾಜಕಾರಣವಾಗುವುದಿಲ್ಲ. ಅದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ನನಗೆ ವೈಯಕ್ತಿಕವಾಗಿ ಬಿಜೆಪಿ, ಅದರ ಆಡಳಿತ ವೈಖರಿ ಇಷ್ಟವಿಲ್ಲ. ಎಎಪಿ, ಸಿಪಿಎಂ, ಸಿಪಿಐ ಮತ್ತು ದಲಿತ ಸಂಘರ್ಷ ಸಮಿತಿಗಳಿಂದ ನನಗೆ ಬೆಂಬಲ ದೊರಕಿದೆ. ದೇವೇಗೌಡರನ್ನೂ ಭೇಟಿ ಮಾಡಿ ಬೆಂಬಲ ಕೇಳಿದ್ದೆ. ಮೈತ್ರಿ ಸರ್ಕಾರ ಇರುವುದರಿಂದ ನೋಡೋಣ ಎಂದಿದ್ದಾರೆ. ಕಾಂಗ್ರೆಸ್ ನಾಯಕರನ್ನೂ ಸಹ ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ಹತ್ತು ವರ್ಷದಿಂದ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಹೀಗಾಗಿ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾನೆ ಎಂಬುದಾಗಿ ರೈ ತಿಳಿಸಿದ್ದಾರೆ.












Click it and Unblock the Notifications