Bengaluru Census 2027: ಜನಗಣತಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿದ್ಧತೆ, ಜಿಬಿಎ ಹೇಳಿದ್ದೇನು
ಬೆಂಗಳೂರು: ಜನಗಣತಿ 2027ಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಭಾರತದ ಜನಗಣತಿ-2027ರ ಎರಡನೇ ಹಂತವಾದ ಜನಸಂಖ್ಯಾ ಗಣತಿ (Population Enumuration) ಕಾರ್ಯಾಚರಣೆಯನ್ನು ಯಾವುದೇ ಲೋಪದೋಷವಿಲ್ಲದ ರೀತಿಯಲ್ಲಿ ಆದ್ಯತೆ ಮೇರೆಗೆ ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಸಿ.ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜನಗಣತಿ-2027ರ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ, ಚಾರ್ಜ್ ಅಧಿಕಾರಿಗಳು, ಹೆಚ್ಚುವರಿ ಚಾರ್ಜ್ ಅಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ತಾಂತ್ರಿಕ ಸಹಾಯಕರಿಗೆ ಪಾಲಿಕೆಯ ಗೋವಿಂದರಾಜನಗರ ವಿಭಾಗದ ಜ್ಞಾನಸೌಧದಲ್ಲಿ ಆಯೋಜಿಸಿದ ಎರಡು ದಿನಗಳ (ನವೆಂಬರ್ 5, 6) ತರಬೇತಿ ಕಾರ್ಯಾಗಾರವನ್ನು ಇಂದು ಅವರು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದರು.

ಜನಗಣತಿ-2027ರ ಮೊದಲನೆ ಹಂತವು ಯಶಸ್ವಿಯಾಗಿ ನಡೆದಿದ್ದು, ಎರಡನೇ ಹಂತದ ಜನಗಣತಿಗೆ ಸಿದ್ಧತೆಗಳು ನಡೆಯುತ್ತಿವೆ. ಎರಡನೇ ಹಂತದ ಜನಗಣತಿ ಕೂಡ ಯಶಸ್ವಿಯಾಗಿ ನಡೆಯಬೇಕು ಎಂಬ ಉದ್ದೇಶದಿಂದ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ಈ ಸದವಕಾಶವನ್ನು ಸದುಪಯೋಗಪಡಿಸಿಕೊಂಡು, ಜನಸಂಖ್ಯಾ ಗಣತಿ ಕಾರ್ಯಾಚರಣೆಯನ್ನು ಯಾವುದೇ ಲೋಪದೋಷವಿಲ್ಲದ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಪಾಲಿಕೆಯ ಅಪರ ಆಯುಕ್ತೆ (ಅಭಿವೃದ್ಧಿ) ಕವಿತಾ ರಾಜಾರಾಂ ರವರು ಮಾತನಾಡಿ, ಚುನಾವಣೆ, ಜನಗಣತಿಯಂತಹ ಕೆಲಸಗಳು ರಾಷ್ಟ್ರನಿರ್ಮಾಣದ ಕಾರ್ಯವಾಗಿದ್ದು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ, ಯಾವುದೇ ಲೋಪಕ್ಕೆ ಎಡೆಮಾಡಿಕೊಡದೆ ಸಮರ್ಪಕ ರೀತಿಯಲ್ಲಿ ಕೆಲಸ ಮಾಡುವಂತಾಗಲು ಸಂಬಂಧಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜನಗಣತಿ ಕಾರ್ಯವಿಧಾನ, ದತ್ತಾಂಶ ನಿರ್ವಹಣೆ, ತಾಂತ್ರಿಕ ಪ್ರಕ್ರಿಯೆಗಳು, ಆನ್‌ಲೈನ್ ವ್ಯವಸ್ಥೆಯ ಬಳಕೆ ಹಾಗೂ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಜನಗಣತಿ ಇಲಾಖೆಯ ತರಬೇತುದಾರರಾದ ಭವ್ಯಾ ಮತ್ತು ಶ್ರೀರಾಮುಲು ರವರು ತರಬೇತಿ ನೀಡಿದರು.
ಪಾಲಿಕೆಯ ಉತ್ತರಹಳ್ಳಿ ಪಿಯು ಕಾಲೇಜಿನ 6 ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾದ 6 ಜನ ವಿದ್ಯಾರ್ಥಿಗಳಿಗೆ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವಿದ್ಯಾರ್ಥಿಗಳಿಗೆ 35000 ರೂಪಾಯಿ ಪ್ರೋತ್ಸಾಧನ ರೂಪದಲ್ಲಿ ಚೆಕ್ ವಿತರಣೆ
2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪುನೀತ್ ಆರ್. (94%), ಸಂಜನಾ ಎಸ್ (93.5%), ಅಪೂರ್ವ ಪಿ (90.6%), ಮೈತ್ರಿ ಎನ್ (89.8%), ವಿನಯ್ ಕುಮಾರ್ ಹೆಚ್. ಎಂ (88.5%) ಹಾಗೂ ವಿಜ್ಞಾನ ವಿಭಾಗದಲ್ಲಿ ಆರ್. ಶೃತಿ (86.6%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಪಾಲಿಕೆಯ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯದ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ತಲಾ 35,000 ರೂಪಾಯಿ ಮೊತ್ತದ ಪ್ರೋತ್ಸಾಹ ಧನದ ಚೆಕ್ ನೀಡಿ ಗೌರವಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಯಾವುದೇ ಕೀಳರಿಮೆ ಮೂಡದಂತೆ ಸದಾ ಪ್ರೇರೇಪಿಸಬೇಕು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ವಿದ್ಯಾದಾನ ಮಾಡಿದ ಶಿಕ್ಷಕರನ್ನು ಎಂದಿಗೂ ಮರೆಯುದಿಲ್ಲ. ಪ್ರತಿ ವರ್ಷವೂ ಇಂತಹ ಗುಣಮಟ್ಟದ ಫಲಿತಾಂಶ ಮುಂದುವರಿಯಬೇಕು ಎಂದು ಆಯುಕ್ತರು ತಿಳಿಸಿದರು.


Click it and Unblock the Notifications
