ಬೆಂಗಳೂರು ನಗರದ ಆಸ್ತಿದಾರರಿಗೆ ಈಗ ಆದಾಯ ತೆರಿಗೆಯ ಭೀತಿ!
ಬೆಂಗಳೂರು, ನವೆಂಬರ್ 12: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ). ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಳ್ಳುವ ಈ ಯೋಜನೆಗೆ ಸುಮಾರು 27,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಪ್ರಸ್ತುತ ಭೂ ಸ್ವಾಧೀನ ಹಂತದಲ್ಲಿದೆ. 73 ಕಿ. ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಈಗ ಬಿಬಿಸಿ ಎಂದು ಮರು ನಾಮಕರಣ ಮಾಡಿ ಜಾರಿಗೆ ತರಲಾಗುತ್ತಿದೆ.
ಈ ಯೋಜನೆಗೆ ಶೇ 100ರಷ್ಟು ಅನುದಾನವನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ನೀಡಲಿದೆ. ಭೂ ಸ್ವಾಧೀನ ಪೂರ್ಣಗೊಂಡು, ಅನುದಾನ ಹಂಚಿಕೆ ಪೂರ್ಣಗೊಂಡ ಬಳಿಕ ಯೋಜನೆಯ ಟೆಂಡರ್ ಕರೆಯಲು ಬಿಡಿಎ ತೀರ್ಮಾನಿಸಿದೆ. ಈ ಯೋಜನೆಗೆ ಸುಮಾರು 2,400 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.

ಈ ಯೋಜನೆ ಭೂ ಸ್ವಾಧೀನಕ್ಕೆ ಬಿಡಿಎ ಕೆಎಎಸ್ ಅಧಿಕಾರಿಗಳನ್ನು ಭೂ ಸ್ವಾಧೀನ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಆದರೆ ಈ ಯೋಜನೆಗೆ ಭೂಮಿ ನೀಡುವ ಮಾಲೀಕರಿಗೆ ಈಗ ಆದಾಯ ತೆರಿಗೆ ಕಟ್ಟುವ ಬಿಕ್ಕಟ್ಟು ಎದುರಾಗಿದೆ. ಇದಕ್ಕೆ ಕಾರಣ ಬಿಡಿಎ ಭೂ ಸ್ವಾಧೀನ ಮಾಡಿಕೊಳ್ಳುವ ನಿಯಮವಾಗಿದೆ.
ಸರ್ಕಾರದ ಆದೇಶ: ಕರ್ನಾಟಕ ಸರ್ಕಾರ ಸೆಪ್ಟೆಂಬರ್ 21ರಂದು ಆದೇಶವೊಂದನ್ನು ಹೊರಡಿಸಿದೆ. ಇದರಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿಯನ್ನು 1894ರ ಭೂ ಸ್ವಾಧೀನ ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದೆ. ಈಗಾಗಲೇ ಬಿಡಿಎ ಈ ಕಾಯ್ದೆಯಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.
ಈ ಯೋಜನೆಗೆ ಭೂಮಿ ನೀಡುವ ರೈತರಿಗೆ ಬಿಡಿಎ ಪರಿಹಾರ ನೀಡಬೇಕಿದೆ. ಆದರೆ ರೈತರು ತಾವು ಪಡೆಯುವ ಪರಿಹಾರದ ಮೊತ್ತಕ್ಕೆ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಿದೆ. ಆದ್ದರಿಂದ ಬಿಡಿಎ 2013ರ ಕಾಯ್ದೆಯ ಅಡಿಯಲ್ಲಿ ಬಿಬಿಸಿ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕು, ರೈತರ ಹಿತ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆ ಕಾಯ್ದೆ-2013ರ ಸೆಕ್ಷನ್ 96ರ ಅನ್ವಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿತರಿಸುವ ಪರಿಹಾರಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಆದರೆ 1894ರ ಭೂ ಸ್ವಾಧೀನ ಕಾಯ್ದೆಯಡಿ ಭೂಮಿ ಸ್ವಾಧೀನಪಡಿಸಿಕೊಂಡರೆ ವಿನಾಯಿತಿ ಇಲ್ಲ. ಆದ್ದರಿಂದ ರೈತರು ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಲಿದೆ.
ಸರ್ಕಾರ ಬಿಬಿಸಿ ಯೋಜನೆ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದಲೇ ಯೋಜನೆ ಹಾದುಹೋಗುವ ಮಾರ್ಗದಲ್ಲಿನ ಗ್ರಾಮಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಕಡಿಮೆ ಮಾಡಿದೆ. ಈಗ ಯೋಜನೆಗೆ ಭೂಮಿ ನೀಡುವ ರೈತರಿಗೆ ಆದಾಯ ತೆರಿಗೆ ಸಂಕಷ್ಟ ಎದುರಾಗಿದೆ. ಬಿಡಿಎ 2013ರ ಕಾಯ್ದೆಯಡಿ ಪರಿಹಾರ ನೀಡುತ್ತಿಲ್ಲ ಎಂಬ ಅಸಮಾಧಾನದ ಜೊತೆಗೆ ರೈತರು, ಬರುವ ಪರಿಹಾರದಲ್ಲೂ ಆದಾಯ ತೆರಿಗೆ ಪಾವತಿಸಬೇಕು ಎಂದು ಬೇಸರಗೊಂಡಿದ್ದಾರೆ.
ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಕ್ಟೋಬರ್ 29ರಂದು ನೀಡಿರುವ ತೀರ್ಪಿನಲ್ಲಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆ ಕಾಯ್ದೆ-2013ರ ಸೆಕ್ಷನ್ 96 ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿತರಿಸುವ ಪರಿಹಾರದ ಮೊತ್ತಕ್ಕೆ ಆದಾಯ ತೆರಿಗೆ ವಿಧಿಸುವುದರಿಂದ ವಿನಾಯ್ತಿ ನೀಡುತ್ತದೆ. ಆದರೆ 1894ರ ಕಾಯ್ದೆಯಲ್ಲಿ ಅಂತಹ ಯಾವುದೇ ಸೆಕ್ಷನ್ ಇಲ್ಲ ಎಂದು ಸಹ ಹೇಳಿದೆ.
ಭೂ ಸ್ವಾಧೀನದ ವಿಚಾರಕ್ಕಾಗಿಯೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಕರ್ನಾಟಕ ಸರ್ಕಾರವೇ ಸಂಪೂರ್ಣ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿತ್ತು. ಅದಕ್ಕಾಗಿಯೇ ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೆ ಈಗ ಮತ್ತೆ ಭೂ ಸ್ವಾಧೀನದ ವಿಚಾರವೇ ಬೆಂಗಳೂರಿನ ಆಸ್ತಿ ಮಾಲೀಕರ ಬೇಸರಕ್ಕೆ ಕಾರಣವಾಗಿವೆ.












Click it and Unblock the Notifications