ಬೆಂಗಳೂರು: ರಮೇಶ್ ಜಾರಕಿಹೊಳಿ ಮನೆಗೆ ಅಶ್ಲೀಲ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು- ಕಾರಣವೇನು ಗೊತ್ತೇ?
ಬೆಂಗಳೂರು, ಅಕ್ಟೋಬರ್ 31: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಮನೆಗೆ ಹತ್ತು ಜನರ ಕಿಡಿಗೇಡಿಗಳ ಗುಂಪೊಂದು ನಿಂದನಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿ ಪರಾರಿಯಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಜಾರಕಿಹೊಳಿ ಅವರು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವೇ ತಿಂಗಳುಗಳಲ್ಲಿ ಮಾಜಿ ಆಗಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರಬಂದ ಕೆಲವೇ ಗಂಟೆಗಳಲ್ಲಿ ಸುಮಾರು 10 ಜನರ ಗುಂಪು ಸದಾಶಿವನಗರದ ನಿವಾಸದ ಮುಂದೆ ನಿಂದನಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸಿ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ.
ಪೋಸ್ಟರ್‌ಗಳನ್ನು ಅಂಟಿಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವರು ಕಾಂಗ್ರೆಸ್ ಕಾರ್ಯಕರ್ತರು ಅಥವಾ ಡಿಕೆ ಶಿವಕುಮಾರ್ ಬೆಂಬಲಿಗರಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಶೇಷಾದ್ರಿಪುರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಪ್ರಕಾಶ್ ಭೇಟಿ ನೀಡಿ ರಮೇಶ್ ಜಾರಕಿಹೊಳಿ ನಿವಾಸದಲ್ಲಿರುವ ಸಿಬ್ಬಂದಿಯನ್ನು ವಿಚಾರಿಸಿದರು. ಘಟನೆ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
2019ರ ವರೆಗೆ ಕಾಂಗ್ರೆಸ್‌ನಲ್ಲಿದ್ದ ರಮೇಶ್ ಜಾಕಿಹೊಳಿ ಅವರು ಆಪರೇಷನ್ ಕಮಲ ನಡೆಸಿ 16 ಮಂದಿಯೊಂದಿಗೆ ಬಿಜೆಪಿಗೆ ಪಕ್ಷಾಂತರಗೊಂಡು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದರು.
ಶಿವಕುಮಾರ್ ಬಗ್ಗೆ ರಮೇಶ್ ಭವಿಷ್ಯ
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶೀಘ್ರದಲ್ಲೇ ಮಾಜಿ ಸಚಿವರಾಗಲಿದ್ದಾರೆ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಶೀಘ್ರವೇ ಮಾಜಿ ಸಚಿವರಾಗಲಿದ್ದು, ಸತೀಶ್ ಜಾರಕಿಹೊಳಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಮಾಹಿತಿ ನನಗಿದೆ. ಇದನ್ನು ನೀವು ನಿರೀಕ್ಷಿಸಿ ಮತ್ತು ವೀಕ್ಷಿಸಿ. ಈಗಾಗಲೇ ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಹಿನ್ನಡೆ ಎದುರಿಸಿದ್ದು, ಏಕಾಏಕಿ ಇಷ್ಟೊಂದು ಹಣ ಹೇಗೆ ಬಂತು ಎಂಬುದನ್ನು ತೋರಿಸಬೇಕು ಎಂದು ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಪತನವಾದರೆ ಅದಕ್ಕೆ ಶಿವಕುಮಾರ್ ಅವರೇ ಕಾರಣರಾಗಲಿದ್ದಾರೆ. ಬೆಳಗಾವಿ ರಾಜಕೀಯದಲ್ಲಿ ಅವರ ಹಸ್ತಕ್ಷೇಪವೇ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.
'ಸಿದ್ದರಾಮಯ್ಯ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ 2019 ರಲ್ಲಿ ಆದಂತೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಇದು ಡಿಕೆ ಶಿವಕುಮಾರ್ ಮತ್ತು ಬೆಳಗಾವಿ ರಾಜಕೀಯದಿಂದ ಮಾತ್ರ ಸಂಭವಿಸುತ್ತದೆ' ಎಂದು ರಮೇಶ್ ಎಚ್ಚರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂಲಕ ಬೆಳಗಾವಿ ರಾಜಕಾರಣದಲ್ಲಿ ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದಾರೆ. ಈ ಕಾರಣ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ನಿವಾಸದಲ್ಲಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುಮಾರು 3 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಈ ವೇಳೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications