ಶುಭ ಸುದ್ದಿ: ಶೇಷಾದ್ರಿ ರಸ್ತೆ ವೈಟ್‌ಟಾಪಿಂಗ್ ಕಾಮಗಾರಿ 60 ದಿನಗಳಲ್ಲಿ ಮುಕ್ತಾಯ!
ಬೆಂಗಳೂರು, ಜೂನ್ 13: ಬೆಂಗಳೂರು ನಗರದ ಅತಿ ಪ್ರಮುಖ ರಸ್ತೆಯಾದ ಶೇಷಾದ್ರಿ ರಸ್ತೆ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ[ಮೌರ್ಯ ವೃತ್ತ] 1.2 ಕಿ.ಮೀ ಉದ್ದಯಲ್ಲಿ ಕೈಗೆತ್ತಿಕೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಿಗದಿತ ಅವಧಿ ಅಂದರೆ 60 ಕೆಲಸದ ದಿನಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಶೇಷಾದ್ರಿ ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲು ಉಲ್ಲೇಖಿತ ಪತ್ರದಂತೆ 60 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸುವ ಷರತ್ತುಗೊಳಪಟ್ಟು ಸಂಚಾರಿ ಪೊಲೀಸರಿಂದ ಅನುಮತಿಯನ್ನು ಪಡೆಯಲಾಗಿತ್ತು.
ಅದರಂತೆ ಸ್ಥಳೀಯ ಸಂಚಾರಿ ಪೊಲೀಸ್ ರವರ ಸಹಕಾರದೊಂದಿಗೆ ಶೇಷಾದ್ರಿ ರಸ್ತೆಯಲ್ಲಿ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ) ದವರೆಗಿನ ಸಂಚಾರವನ್ನು ನಿರ್ಬಂಧಗೊಳಿಸಿ, ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ)ದಿಂದ ಕೆ.ಆರ್ ವೃತ್ತದ ಕಡೆಗಿನ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಏಪ್ರಿಲ್ 04,2022ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು.
ವೈಟ್ ಟಾಪಿಂಗ್ ಕಾಮಗಾರಿಯನ್ನು 60 ಕೆಲಸದ ದಿನಗಳನ್ನು ಪರಿಗಣಿಸಿ ದಿನಾಂಕ ಜೂನ್ 12, 2022 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿ ಮಹಾರಾಣಿ ಕಾಲೇಜು ಹತ್ತಿರವಿರುವ ಪಾದಚಾರಿ ಮೇಲುಸೇತುವೆಯ ಮೇಲೆ ಸಮಯ ಸೂಚಿಸುವ ಗಡಿಯಾರ(Countdown Clock)ಅನ್ನು ಕೂಡಾ ಅಳವಡಿಸಲಾಗಿತ್ತು.

ಸಂಚಾರ ಬದಲಾವಣೆಯೊಂದಿಗೆ ಕಾಮಗಾರಿ ಪೂರ್ಣ
ಮೂರು ಹಂತಗಳಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಉದ್ದೇಶಿಸಿ ಮೊದಲಿಗೆ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ) ದವರೆಗಿನ ಕಾಮಗಾರಿಯನ್ನು 20 ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಲಾಯಿತು. ಎರಡನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ಕಡೆಗಿನ ರಸ್ತೆಯ ಅರ್ಧಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿ ಉಳಿದರ್ಧ ಭಾಗದಲ್ಲಿ ಕಾಮಗಾರಿಯನ್ನು ನಿರ್ವಹಿಸಿ 20 ದಿನಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಮೂರನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ಕಡೆಗಿನ ರಸ್ತೆಯಲ್ಲಿ ಈಗಾಗಲೇ ಎರಡನೆಯ ಹಂತದಲ್ಲಿ ಪೂರ್ಣಗೊಳಿಸಲಾಗಿದ್ದ ರಸ್ತೆಯ ಭಾಗಕ್ಕೆ ಸಂಚಾರವನ್ನು ಬದಲಾವಣೆ ಮಾಡಿಕೊಂಡು ಉಳಿಕೆ ಭಾಗದಲ್ಲಿ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ.

ಮಾನವ ಸಂಪನ್ಮೂಲ ಹೆಚ್ಚಿಸಿ ಕಾಮಗಾರಿ ಪೂರ್ಣ
ಕಾಮಗಾರಿಯನ್ನು ನಿರ್ವಹಿಸುವ ವೇಳೆ ಮೇ ತಿಂಗಳಲ್ಲಿ ಸುಮಾರು 10ದಿನಗಳು ನಗರದಲ್ಲಿ ಮಳೆಯಾಗಿದ್ದರಿಂದ ಕಾಮಗಾರಿಯನ್ನು ನಿರ್ವಹಿಸಲು ತೊಡಕಾದರೂ ಸಹ ಯಂತ್ರೋಪಕರಣಗಳಿಗೂ ಹಾನಿ ಉಂಟಾಗಿತ್ತು. ಮಾನವ ಸಂಪನ್ಮೂಲಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಕೊಂಡು ಶೇಷಾದ್ರಿ ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸಿ ಕಾಮಗಾರಿಯನ್ನು ಯೋಜನೆ-ಕೇಂದ್ರ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್ ಹಾಗೂ ಅವರ ನೇತೃತ್ವದ ತಂಡದ ವತಿಯಿಂದ ನಿಗದಿತ 60 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗಿರುತ್ತದೆ.

ಸಂಚಾರಿ ಪೊಲೀಸ್ ಇಲಾಖೆಗೆ ಅಭಿನಂದನೆ
ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್‌ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ಕಾಮಗಾರಿಯ ಅನುಷ್ಠಾನ ವೇಳೆ ಸಹಕರಿಸಿದ ಸಾರ್ವಜನಿಕರಿಗೆ, ಸಂಚಾರಿ ಪೊಲೀಸ್ ಇಲಾಖೆಯವರಿಗೆ ಪಾಲಿಕೆ ವತಿಯಿಂದ ವಂದನೆಗಳನ್ನು ತಿಳಿಸಿರುತ್ತಾರೆ.

ಮಳೆಯಿಂದಾಗಿ ವಿಪರೀತ ಸಮಸ್ಯೆ- ಮುಖ್ಯ ಇಂಜಿನಿಯರ್ ಲೋಕೇಶ್
"ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಯೋಜನೆ ಕೈಗೊಳ್ಳಲಾಗಿತ್ತು. ಹತ್ತು ಹಲವು ಸಮಸ್ಯೆಯನ್ನು ಎದುರಿಸಬೇಕಾಯ್ತು. ಸಂಚಾರಿ ಪೊಲೀಸರು ನಮಗೆ ಸಹಕಾರವನ್ನು ನೀಡಿದರು. ಮಳೆಯಿಂದ ಸಮಸ್ಯೆ ಎದುರಾಯಿತು. ಚರಂಡಿಯ ನೀರು ಹೋಗದೆ ವಿಪರೀತ ತೊಂದರೆಯಾಗಿತ್ತು. ಆದರೂ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಹಗಲು ರಾತ್ರಿ ಕೆಲಸವನ್ನು ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಈ ಕಾಮಗಾರಿ ಪೂರ್ಣಗೊಂಡಿರುವುದು ಸಂತಸವನ್ನು ತಂದಿದೆ'' ಎಂದು ಯೋಜನ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.












Click it and Unblock the Notifications