ಶಿವಾಜಿನಗರದಲ್ಲಿ ಕುಸಿದ ಬಿದ್ದ 80 ಮಕ್ಕಳು ಓದುತ್ತಿದ್ದ ಬಿಬಿಎಂಪಿ ಇಂಗ್ಲಿಷ್ ನರ್ಸರಿ ಶಾಲೆ!
ಬೆಂಗಳೂರು ನವೆಂಬರ್ 27: ಬೆಂಗಳೂರಿನ ಶಿವಾಜಿನಗರದಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು ಶಾಲಾ ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ಮೂರು ಗಂಟೆ ಸುಮಾರಿಗೆ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ.
ಶಿವಾಜಿನಗರದಲ್ಲಿ 80 ಮಕ್ಕಳು ಓದುತ್ತಿದ್ದ ಬಿಬಿಎಂಪಿ ಇಂಗ್ಲಿಷ್ ನರ್ಸರಿ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. 75 ವರ್ಷ ಹಳೆಯದಾದ ಈ ಶಾಲೆಯಲ್ಲಿ 80 ಮಕ್ಕಳು ಓದುತ್ತಿದ್ದಾರೆ. ನಿತ್ಯ ಶಾಲೆಗೆ 75 ಮಕ್ಕಳು ಬರುತ್ತಾರೆ. ಇಂದು ಬೆಳಗಿನ ಜಾವ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಮಕ್ಕಳು ಶಾಲೆಯಲ್ಲಿ ಇರಲಿಲ್ಲ.

ಬೆಳಿಗಿನ ಜಾವ ಈ ಘಟನೆ ನಡೆದಿದ್ದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ. ಕಳೆದ ಶನಿವಾರ ಈ ಶಾಲೆಗೆ ಮಕ್ಕಳು ಆಗಮಿಸಿದ್ದರು. ಇಂದೂ ಕೂಡ ಮಕ್ಕಳು ಶಾಲೆಗೆ ಬರಬೇಕಾಗಿತ್ತು. ಅಷ್ಟರಲ್ಲಾಗಲೇ ಶಾಲೆಯ ಕಟ್ಟಡ ಕುಸಿದು ದೊಡ್ಡ ದುರಂತ ತಪ್ಪಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಸಿಬ್ಬಂದಿಗಳು ಯಾರೂ ಕೂಡ ಶಾಲೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಶಾಲೆ ಏಕಾಏಕಿ ಕುಸಿದು ಬಿದ್ದಿದ್ದರಿಂದ ಅಕ್ಕಪಕ್ಕದಲ್ಲಿ ನಿಲ್ಲಿಸಿದ ವಾಹನಗಳಿಗೆ ಹಾನಿಯಾಗಿದೆ. ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿದೆ. ಕೆಲವು ವಾಹನಗಳಿಗೆ ಭಾರೀ ಹಾನಿಯಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ತೊಂದರೆಯಾಗಿದೆ. ಅನಿರೀಕ್ಷಿತ ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಜೆಸಿಬಿಯಿಂದ ತೆರವು ಕಾರ್ಯಚರಣೆ ನಡೆದಿದೆ. ಈ ದುರಂತದಿಂದ 80 ಮಕ್ಕಳು ಪಾರಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೋಷಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications