ಬೆಂಗಳೂರು: ಪಶ್ಚಿಮ-ದಕ್ಷಿಣ ವಲಯದಲ್ಲಿ ಬಿರುಸಿನ ಮತದಾನ ಜಾಗೃತಿ, ದೂರುಗಳಿಗೆ ಕಂಟ್ರೋಲ್ ರೂಂ ಸ್ಥಾಪಿಸಿದ ಪಾಲಿಕೆ
ಬೆಂಗಳೂರು, ಏಪ್ರಿಲ್ 07: ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ. ಮತದಾನದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದ್ದು, ಮತದಾನ ಹೆಚ್ಚಳಕ್ಕೆ ನೀವೆಲ್ಲರು ಕೈ ಜೋಡಿಸಬೇಕು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಪಶ್ಚಿಮ ಹಾಗೂ ದಕ್ಷಿಣ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ(RWAs) ಪದಾಧಿಕಾರಿಗಳ ಜೊತೆಗೆ ಅವರು ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಹೆಚ್ಚು ಮತದಾನವಾಗಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ನಗರದಲ್ಲಿ ಮತದಾನ ಮಾಡುವ ಪ್ರತಿಯೊಬ್ಬರೂ ಮತಚಲಾಯಿಸುಂತೆ ಮಾಡಿ ಮತದಾನದ ಶೇಖಡಾವಾರು ಪ್ರಮಾಣವನ್ನು ಹೆಚ್ವಿಸಬೇಕಿದೆ. ಅದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯವು ನಡೆಯುತ್ತಿದೆ. ನಗರದಲ್ಲಿ 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಅರ್ಹರು ಅದರ ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲಾ ಹಿರಿಯ ನಾಗರಿಕರು ಪಡೆದುಕೊಂಡು ಮತ ಚಲಾಯಿಸಬೇಕು. ಯುವ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಟಿಪ್ಪರ್‌ಗಳಲ್ಲಿ ಧ್ವನಿ ವರ್ಧಕ: ಜಾಗೃತಿ
ಮತದಾನ ಮಾಡುವ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಸಲುವಾಗಿ ಪಾಲಿಕೆ ಘನತ್ಯಾಜ್ಯ ವಿಭಾಗದ ಆಟೋ ಟಿಪ್ಪರ್ ಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಮತದಾನದ ಪ್ರಾಮುಖ್ಯತೆಗ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಮತದಾನ ಸಂಕಲ್ಪ: ಜಾಗೃತಿ ನಾಟಕ ಪ್ರದರ್ಶನ
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ನಡೆದ ಸಭೆಯಲ್ಲಿ 'ಮತದಾನ ಸಂಕಲ್ಪ' ಎಂಬ ಜಾಗೃತಿ ನಾಟಕವನ್ನು ಪ್ರದರ್ಶಿಸಿಸಲಾಯಿತು. ನಾಟಕ ನಿರ್ದೇಶಕರಾದ ಟಿ.ಎನ್.ಬಾಲಕೃಷ್ಣ ಅವರ ನೇತೃತ್ವದಲ್ಲಿ ಬಿಎಂಟಿಸಿ-ಕೆಎಸ್ಆರ್‌ಟಿಸಿಯ ನಾಟಕ ತಂಡದ ಕಲಾವಿದರು ನಾಟಕದಲ್ಲಿ ಪಾತ್ರಧಾರಿಗಳಾಗಿ ಮತದಾನದ ಅಗತ್ಯತೆ, ಮಹತ್ವ, ಮತದಾರರ ಕರ್ತವ್ಯವನ್ನು ವಿವರಿಸಿದರು.
ಸಭೆಯಲ್ಲಿ ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್,ಜಯರಾಮ್ ರಾಯ್‌ಪುರ, ರೆಡ್ಡಿ ಶಂಕರಬಾಬು, ಪ್ರೀತಿ ಗೆಹ್ಲೋಟ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ, ವಲಯ ಜಂಟಿ ಆಯುಕ್ತರಾದ ಲೋಕನಾಥ್, ಜಗದೀಶ್ ನಾಯ್ಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾನ ಹೆಚ್ಚಳದ ಜೊತೆಗೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಇನ್ನಿತರ ಚುನಾವಣೆ ದೂರುಗಳಿಗೆ ಸಹಾಯವಾಣಿ ವ್ಯವಸ್ಥೆ ಮಾಡಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ
ಈ ಸಂಬಂಧ ಬಿಬಿಎಂಪಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿ ಕಛೇರಿ ಹಾಗೂ ಸಹಾಯವಾಣಿ ಸ್ಥಾಪಿಸಿದೆ. ಇಲ್ಲಿ ಸಾರ್ವಜನಿಕರು ಸೇರಿದಂತೆ ಮತದಾರರು, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ
ಸಂಬಂಧಿಸಿದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಇನ್ನಿತರೆ ಚುನಾವಣಾ ದೂರುಗಳನ್ನು ಸ್ವೀಕರಿಸುತ್ತಿದೆ.
ಆದ್ದರಿಂದ ಸಾರ್ವಜನಿಕರು ಈ ಕೆಳಕಂಡ ಕಛೇರಿ ವಿಳಾಸ 158-ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಮೊದಲನೇ ಮಹಡಿ, ಬಿಬಿಎಂಪಿ ಕಟ್ಟಡ, ಮುನಿರೆಡ್ಡಿ ಪಾಳ್ಯ ವೃತ್ತ, ಜೆ.ಸಿ ನಗರ, ಬೆಂಗಳೂರು-560006 ಇಲ್ಲಿಗೆ ಬಂದು ದೂರು ನೀಡಬಹುದು.
ಇಲ್ಲವೇ ಚುನಾವಣಾಧಿಕಾರಿ ಕಛೇರಿಯ ದೂರವಾಣಿ ಸಂಖ್ಯೆ: 080-23900965, ಕಂಟ್ರೋಲ್ ರೂಂ ಸಂಖ್ಯೆ 080-22975846 ಗೆ ಕರೆ ಮಾಡಿ ದೂರು ನೀಡಬಹುದು ಎಂದು ಬಿಬಿಎಂಪಿ ಹೇಳಿದೆ.












Click it and Unblock the Notifications