ಬೆಂಗಳೂರು: ಮನುಷ್ಯನ ಉಸಿರಿನಿಂದಲೇ ಕ್ಯಾನ್ಸರ್ ಪತ್ತೆ ಹಚ್ಚಲಿವೆ ಈ ಶ್ವಾನಗಳು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಎರಡು ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್‌ನಲ್ಲಿ ಬಿಲ್ಲಿ, ಜೆಸ್ಸಿ ಮತ್ತು ಭಾನು ಎಂಬ ಶ್ವಾನಗಳು ಪ್ರತಿದಿನವೂ ಕ್ಯಾನ್ಸರ್ ಪತ್ತೆ ಹಚ್ಚುವ ಕೆಲಸದಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತವೆ. ಇವುಗಳ ಪ್ರಮುಖ ವೈದ್ಯಕೀಯ ಉಪಕರಣವೆಂದರೆ ಅವುಗಳ ಅದ್ಭುತ ಘ್ರಾಣಶಕ್ತಿ (ಮೂಸುವಿಕೆ).
ಹೌದು, 'ಡಾಗ್ನೋಸಿಸ್' ಎಂಬ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಬೀಗಲ್, ಲ್ಯಾಬ್ರಡಾರ್ ಮತ್ತು ಡಚ್ ಶೆಫರ್ಡ್ ತಳಿಯ ಶ್ವಾನಗಳಿಗೆ ಮನುಷ್ಯನ ಉಸಿರಿನಿಂದಲೇ ಕ್ಯಾನ್ಸರ್ ಕಣಗಳನ್ನ ಪತ್ತೆ ಹಚ್ಚಲು ವಿಶೇಷ ತರಬೇತಿ ನೀಡುತ್ತಿದೆ. ಇದು ವೈದ್ಯಕೀಯ ತಪಾಸಣಾ ವಲಯದಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ಉಸಿರಿನ ಮೂಲಕ ಕ್ಯಾನ್ಸರ್ ಪತ್ತೆ
ಸಾಮಾನ್ಯವಾಗಿ ಶ್ವಾನಗಳ ಘ್ರಾಣಶಕ್ತಿಯನ್ನ ಸ್ಫೋಟಕಗಳು ಅಥವಾ ಮಾದಕ ದ್ರವ್ಯಗಳನ್ನ ಪತ್ತೆ ಹಚ್ಚಲು ಬಳಸಲಾಗುತ್ತದೆ. ಆದರೆ, ಡಾಗ್ನೋಸಿಸ್ ಸಂಸ್ಥೆಯು ಈ ಶಕ್ತಿಯನ್ನ ಕಡಿಮೆ ವೆಚ್ಚದ ಆರೋಗ್ಯ ತಪಾಸಣೆಗೆ ಬಳಸಿಕೊಳ್ಳುತ್ತಿದೆ. ರೋಗಿಗಳು ಸಂಸ್ಥೆ ಕಳುಹಿಸಿದ ಮಾಸ್ಕ್‌ಗಳಲ್ಲಿ ಉಸಿರಾಡುತ್ತಾರೆ. ಬಳಿಕ ಆ ಮಾಸ್ಕ್‌ಗಳನ್ನ ಈ ವಿಶೇಷ ತರಬೇತಿ ಪಡೆದ ಶ್ವಾನಗಳಿಗೆ ಮೂಸಲು ನೀಡಲಾಗುತ್ತದೆ. ಶ್ವಾನಗಳ ಚಲನವಲನ, ಉಸಿರಾಟ, ಮೆದುಳಿನ ಚಟುವಟಿಕೆ ಹಾಗೂ ದೇಹದ ಭಾಷೆಯನ್ನು ಅರ್ಥೈಸಿಕೊಳ್ಳಲು ಸೆನ್ಸಾರ್‌ಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನ ಬಳಸಲಾಗುತ್ತದೆ.
ಯಾವುದೇ ರಕ್ತಪರೀಕ್ಷೆ, ಬಯಾಪ್ಸಿ ಅಥವಾ ಇಮೇಜಿಂಗ್ ಸ್ಕ್ಯಾನಿಂಗ್ ಇಲ್ಲದೆ ಕೇವಲ ಉಸಿರಿನ ಮೂಲಕ ಕ್ಯಾನ್ಸರ್ ಲಕ್ಷಣಗಳನ್ನ ಪತ್ತೆ ಹಚ್ಚುವುದೇ ಈ ತಂತ್ರಜ್ಞಾನದ ಬಹುದೊಡ್ಡ ಹೆಗ್ಗಳಿಕೆಯಾಗಿದೆ. ಡಾಗ್ನೋಸಿಸ್ ಸಂಸ್ಥಾಪಕರಾದ ಆಕಾಶ್ ಕುಲಗೋಡ್ ಅವರ ಪ್ರಕಾರ, "ಇದು ಜನಸಂದಣಿಯಲ್ಲಿ ಯಾರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬುದನ್ನು ಹುಡುಕುವ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದೆ."
ಶೇ. 90ರಷ್ಟು ನಿಖರತೆ
ಡಾಗ್ನೋಸಿಸ್ ಫಾರ್ಮ್‌ನಲ್ಲಿ ವಾಸಿಸುವ ಈ ಶ್ವಾನಗಳಿಗೆ ಪ್ರತಿದಿನ ಆಟ, ವಾಕಿಂಗ್ ಜೊತೆಗೆ 30 ನಿಮಿಷದಿಂದ 1 ಗಂಟೆಯವರೆಗೆ ಕ್ಯಾನ್ಸರ್ ಪತ್ತೆ ಹಚ್ಚುವ ತರಬೇತಿ ನೀಡಲಾಗುತ್ತದೆ. ಇದೊಂದು ಆಟದ ರೀತಿಯಲ್ಲಿರುತ್ತದೆ ಮತ್ತು ಸರಿಯಾಗಿ ಪತ್ತೆ ಹಚ್ಚಿದ ಶ್ವಾನಗಳಿಗೆ ತಿಂಡಿಗಳನ್ನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಇತ್ತೀಚಿನ ತರಬೇತಿಯೊಂದರಲ್ಲಿ ವಿಸ್ಕಿ ಎಂಬ ಹೆಸರಿನ ಬೀಗಲ್ ಶ್ವಾನವು 10 ಮಾದರಿಗಳನ್ನ ಪರೀಕ್ಷಿಸುತ್ತಾ, ಆರನೇ ಮಾದರಿಯ ಬಳಿ ನಿಂತು ಸುತ್ತುಹಾಕುವ ಮೂಲಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯು ಅದನ್ನು 'ಪಾಸಿಟಿವ್' ಎಂದು ಗುರುತಿಸುವಂತೆ ಮಾಡಿತು.
'ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿ'ಯಲ್ಲಿ ಪ್ರಕಟವಾದ 2ನೇ ಹಂತದ ಅಧ್ಯಯನದ ಪ್ರಕಾರ, ಡಾಗ್ನೋಸಿಸ್ ಶ್ವಾನಗಳು ಸ್ತನ ಕ್ಯಾನ್ಸರ್ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್‌ಗಳನ್ನ ಆರಂಭಿಕ ಹಂತದಲ್ಲಿ ಶೇ. 90ರಷ್ಟು ನಿಖರತೆಯೊಂದಿಗೆ ಪತ್ತೆ ಹಚ್ಚಿವೆ. ಅಚ್ಚರಿಯೆಂದರೆ, ಕೇವಲ 10 ವಿಧದ ಕ್ಯಾನ್ಸರ್‌ಗಳನ್ನ ಪತ್ತೆ ಹಚ್ಚಲು ತರಬೇತಿ ಪಡೆದಿದ್ದ ಶ್ವಾನಗಳು, ತಾವು ಹಿಂದೆಂದೂ ಎದುರಿಸದ 11ನೇ ವಿಧದ ಕ್ಯಾನ್ಸರ್ ಅನ್ನು ಸಹ ಗುರುತಿಸುವಲ್ಲಿ ಯಶಸ್ವಿಯಾಗಿವೆ.
ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣ
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ವರದಿಯ ಪ್ರಕಾರ, ವಿಶ್ವದಲ್ಲಿಯೇ ಅತಿ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳಿರುವ ಮೂರನೇ ದೇಶ ಭಾರತ. 2024ರಲ್ಲಿ ಭಾರತದಲ್ಲಿ 1.5 ದಶಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 9 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಆದರೆ, ರೋಗದ ಮುನ್ನೆಚ್ಚರಿಕಾ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಶೇ. 2ಕ್ಕಿಂತಲೂ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ, ಡಾಗ್ನೋಸಿಸ್ ಮುಂದಿನ ವರ್ಷ ಕೇವಲ ಕೆಲವೇ ಸಾವಿರ ರೂಪಾಯಿಗಳಲ್ಲಿ ಮನೆಯಲ್ಲಿಯೇ ಮಾಡಬಹುದಾದ ಮಲ್ಟಿ-ಕ್ಯಾನ್ಸರ್ ಪ್ರಿ-ಸ್ಕ್ರೀನಿಂಗ್ ಪರೀಕ್ಷೆಯನ್ನ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ವರ್ಷಕ್ಕೆ 1 ಮಿಲಿಯನ್ ಪರೀಕ್ಷೆಗಳನ್ನ ನಡೆಸುವ ಗುರಿ ಹೊಂದಿರುವ ಸಂಸ್ಥೆ, ತನ್ನ ಶ್ವಾನಗಳ ಪಡೆಯನ್ನು 30ಕ್ಕೆ ಏರಿಸಲು ನಿರ್ಧರಿಸಿದೆ.
ಆಕ್ಸೆಲ್ ಇಂಡಿಯಾ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕೆಫಿನೇಟೆಡ್ ಕ್ಯಾಪಿಟಲ್ ನಂತಹ ಪ್ರಮುಖ ಹೂಡಿಕೆದಾರರ ಬೆಂಬಲ ಹೊಂದಿರುವ ಡಾಗ್ನೋಸಿಸ್, ಈಗಾಗಲೇ ಏಪ್ರಿಲ್‌ನಲ್ಲಿ ಭಾರತದ 10 ಆಸ್ಪತ್ರೆಗಳೊಂದಿಗೆ 3ನೇ ಹಂತದ ಪ್ರಯೋಗಗಳನ್ನ ಆರಂಭಿಸಿದೆ. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಕ್ಯಾನ್ಸರ್ ಸಾಂಕ್ರಾಮಿಕ ರೋಗಶಾಸ್ತ್ರ ಕೇಂದ್ರದ ಉಪ ನಿರ್ದೇಶಕ ಪಂಕಜ್ ಚತುರ್ವೇದಿ ಹೇಳುವಂತೆ, "ಹೊಸ ತಂತ್ರಜ್ಞಾನಗಳು ಅತ್ಯುತ್ತಮ ಅವಕಾಶಗಳನ್ನ ಒದಗಿಸುತ್ತವೆ, ಆದರೆ ಅವು ಅಸ್ತಿತ್ವದಲ್ಲಿರುವ ತಪಾಸಣಾ ವ್ಯವಸ್ಥೆಗಳನ್ನ ಬಲಪಡಿಸಬೇಕೇ ಹೊರತು ಬದಲಾಯಿಸಬಾರದು."


Click it and Unblock the Notifications
