Bengaluru Bandh; ಹೈಕೋರ್ಟ್‌ಗೆ ಸರ್ಕಾರ ಕೊಟ್ಟ ಭರವಸೆ ಏನು?
ಬೆಂಗಳೂರು, ಸೆಪ್ಟೆಂಬರ್ 26; ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮತ್ತು ರೈತರ ಪರ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮರವಣಿಗೆ, ಧರಣಿಗೆ ಅವಕಾಶವಿಲ್ಲ.
ಬೆಂಗಳೂರು ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬಹುದು, ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ. ಬಂದ್ ಕರೆ ಇದ್ದರೂ ಬಸ್‌ಗಳು ಸಂಚಾರ ನಡೆಸುತ್ತಿವೆ. ಆದರೆ ಪ್ರಯಾಣಿಕರ ಸಂಖ್ಯೆಯೇ ಕಡಿಮೆ ಇದೆ.

ಬಂದ್ ಸಮಯದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಸರ್ಕಾರಿ-ಖಾಸಗಿ ಸ್ವತ್ತುಗಳಿಗೆ ಹಾನಿಯಾಗಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ, ಬೆಂಗಳೂರು ಹಾಗೂ ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಸೋಮವಾರ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ರಾಜ್ಯ ಸರ್ಕಾರದ ಭರವಸೆ; ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ, ರ್ಯಾಲಿ ನಡೆಸಲು ಅನುಮತಿ ನೀಡಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಅರ್ಜಿದಾರರ ಪರ ವಕೀಲರು, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ರಸ್ತೆ ಮೂಲಕ ಮೆರವಣಿಗೆ ನಡೆಸಲಿವೆ ಇದರಿಂದ ಜನಸಾಮಾನ್ಯರ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಬಂದ್ ನಡೆದಾಗ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಜನ ಜೀವನ ಅಸ್ತವ್ಯಸ್ಥವಾಗಿತ್ತು. ಅಹಿತಕರ ಘಟನೆಗಳು ನಡೆದು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿತ್ತು ಎಂದರು.
ಜತೆಗೆ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ 2020ರ ಫೆ.20ರಂದು ಆದೇಶಿಸಿತ್ತು. ಸರ್ಕಾರಿ-ಖಾಸಗಿ ಆಸ್ತಿಗೆ ಉಂಟಾದ ನಷ್ಟ ಅಂದಾಜಿಸಿ, ವಸೂಲಿ ಮಾಡಲು ಕ್ಲೇಮು ಕಮೀಷನರ್ ನೇಮಕಕ್ಕೂ ಆದೇಶಿಸಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ನಿರ್ದೇಶನ ಅಗತ್ಯವಿಲ್ಲ: ಅದಕ್ಕೆ ನ್ಯಾಯಪೀಠ, ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಆ ಬಗ್ಗೆ ನ್ಯಾಯಾಲಯವು ಪ್ರತ್ಯೇಕವಾಗಿ ಯಾವುದೇ ನಿರ್ದೇಶನ ನೀಡುವ ಅಗತ್ಯತೆ ಇಲ್ಲ ಎಂದು ಮೌಖಿಕವಾಗಿ ಹೇಳಿತು.
ನಂತರ ಅಡ್ವೋಕೇಟ್ ಜನರಲ್ ಮತ್ತು ಅರ್ಜಿದಾರರ ಪರ ವಕೀಲರ ಹೇಳೀಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಬಂದ್ ವಿಚಾರದಲ್ಲಿ ಹೈಕೋರ್ಟ್ ಈ ಹಿಂದೆಯೇ ಸಮಗ್ರವಾದ ನಿರ್ದೇಶನಗಳನ್ನು ನೀಡಿದೆ. ಅವು ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಆ ಆದೇಶಕ್ಕೆ ಹೆಚ್ಚಿನದೇನೂ ಸೇರಿಸುವ ಅಗತ್ಯವೇನು ಕಂಡುಬರುತ್ತಿಲ್ಲ. ಹಾಗಾಗಿ, ಅರ್ಜಿ ಸಂಬಂಧ ಯಾವುದೇ ನಿರ್ದೇಶನ ನೀಡುವ ಅಗತ್ಯವು ಕಂಡುಬರುತ್ತಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ.












Click it and Unblock the Notifications