Bengaluru Bandh: ಯಾವ್ಯಾವ ಜಿಲ್ಲೆಗಳಿಂದ ಖಾಸಗಿ ಸಾರಿಗೆ ಸಂಘಟನೆಗಳ ಆಗಮನ ಮತ್ತು ಇವರ ಬೇಡಿಕೆಗಳೇನು?, ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್, 11: ಬೇಡಿಕೆಯ ಚೆಂಡನ್ನು ಈಡೇರಿಸದೇ ಆಟ ಆಡುತ್ತಿರುವ ಸಾರಿಗೆ ಇಲಾಖೆ ವಿರುದ್ಧ ಖಾಸಗಿ ಸಾರಿಗೆ ಸಂಘಟನೆ ಸಿಡಿಮಿಡಿಗೊಂಡಿದ್ದು, ಇವತ್ತು ನಗರದಲ್ಲಿ ಬಂದ್ ಮಾಡುತ್ತಿವೆ. ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ, ಹೀಗಾಗಿ ಇವತ್ತು ಬಂದ್ ಮಾಡಿದ್ದೀವಿ ಅಂತಾ ಹಲವು ಖಾಸಗಿ ವಾನಗಳ ಚಾಲಕರ ಒಕ್ಕೂಟ ಆಕ್ರೋಶ ಹೊರಹಾಕಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಿಂದ ಚಾಲಕರ ಒಕ್ಕೂಟ ಬರುತ್ತಿದೆ ಹಾಗೂ ಇವರ ಬೇಡಿಕೆಗಳೇನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಸರ್ಕಾರಕ್ಕೆ ಸೆಡ್ಡು ಹೊಡೆದು ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿರುವ ಖಾಸಗಿ ಸಾರಿಗೆ ಸಂಘಟನೆ ನಗರ ಸಂಪೂರ್ಣ ಸ್ಥಬ್ಧ ಮಾಡಲು ರೂಪುರೇಷೆ ಸಿದ್ಧಪಡಿಸಿದೆ. 36ಕ್ಕೂ ಅಧಿಕ ಖಾಸಗಿ ಸಾರಿಗೆ ಸಂಘಟನೆಗಳು ಸೇರಿ ಮಾಡುತ್ತಿರುವ ಬೆಂಗಳೂರು ಬಂದ್ ಯಾವ ಭಾಗದಿಂದ ನಗರವನ್ನು ಸೇರಬೇಕು ಅಂತಾ ಪ್ಲಾನ್ ರೂಪಿಸಿದೆ.

ಇನ್ನೂ ಬೆಂಗಳೂರಿಗೆ ಹಲವು ಜಿಲ್ಲೆಗಳ ಚಾಲಕರ ಒಕ್ಕೂಟ ಕೂಡ ಸಾತ್ ಕೊಟ್ಟಿದ್ದು, ರಾಜ್ಯದಿಂದ ಯಾವ್ಯಾವ ಜಿಲ್ಲೆ ಸಿಟಿಗೆ ಎಂಟ್ರಿ ಆಗುತ್ತಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..
1. ರಾಮನಗರ
2. ಮೈಸೂರು
3. ಕನಕಪುರ
4. ಕೋಲಾರ
5. ತುಮಕೂರು
6. ಚಿಕ್ಕಬಳ್ಳಾಪುರ
7. ಹುಬ್ಬಳ್ಳಿ- ಧಾರವಾಡ,
8. ಬಾಗಲಕೋಟೆಯಿಂದ ಖಾಸಗಿ ಬಸ್ ಮಾಲೀಕರು ತಮ್ಮ ತಮ್ಮ ಬಸ್ಸುಗಳ ಮೂಲಕ ಸಿಟಿಗೆ ಎಂಟ್ರಿ ಆಗುತ್ತಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಯುತ್ತದೆ. ಈ ರ‍್ಯಾಲಿಯಲ್ಲಿ 8 ರಿಂದ 10 ಸಾವಿರ ಚಾಲಕರು ಮಾಲೀಕರು ಭಾಗಿ ಆಗುವ ಸಾಧ್ಯತೆ ಇದೆ. ಸುಮಾರು 7 ರಿಂದ 10 ಲಕ್ಷ ವಾಹನಗಳು ಇಂದು ಸಂಚಾರ ಮಾಡುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯಾದ್ಯಂತ ಈ ಬಂದ್‌ಗೆ ಚಾಲಕರ ಒಕ್ಕೂಟದ ಬೆಂಬಲ ಇದ್ದು, ಬೇರೆ ಬೇರೆ ಜಿಲ್ಲೆಯಿಂದ ಸಿಟಿಗೆ ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಹೇಗಾದರೂ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಲೇಬೇಕು ಅಂತಾ ಪಣ ತೊಟ್ಟು ಈ ಬಾರಿ ಬಂದ್ ನಡೆಸಲು ಚಾಲಕರು ಸಜ್ಜಾಗಿದ್ದಾರೆ.
ಚಾಲಕರ ಒಕ್ಕೂಟದ ಬೇಡಿಕೆ ಏನು ಅಂತಾ ನೋಡೋದಾದ್ರೆ ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು.
ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು. ಏಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು ಎನ್ನುವ ಬೇಡಿಕೆಗಳು ಇವೆ.
ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು
1. ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು.
2. ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು.
3. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು.
4. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು.
ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು
1. ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
2. ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
3. ಖಾಸಗಿ ಬಸ್‌ಗಳನ್ನ ಕಿಲೋ ಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು
ಗೂಡ್ಸ್ ವಾಹನಗಳಿಗೆ ಸಂಬಂಧಿಸಿದ ಬೇಡಿಕೆಗಳು
1. ಪೋರ್ಟರ್ ಸಂಸ್ಥೆಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು
2. ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಬದಲು ಪೋರ್ಟಲ್ ಮೇಲೆ ದಾಖಲಿಸಬೇಕು
3. ಅಕ್ರಮವಾಗಿ ಚಾಲಕರ ಡಿಎಲ್ ರದ್ದು ಮಾಡಲಾಗುತ್ತಿರುವುದಕ್ಕೆ ಪೂರ್ಣ ವಿರಾಮ ಹಾಕಬೇಕು
ಸ್ಕೂಲ್ ವ್ಯಾನ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು
1. ಶಾಲಾ ವ್ಯಾನ್‌ಗಳನ್ನು ಚಲಾಯಿಸಲು ಪರ್ಮಿಟ್ ನೀಡಬೇಕು
2. ಸೀಝ್ ಆದ ವ್ಯಾನ್‌ಗಳ ಮೇಲೆ ವಿಧಿಸುತ್ತಿರುವ ದಂಡದ ಮೊತ್ತವನ್ನು ಇಳಿಸಬೇಕು
3. ತೆರಿಗೆ ಕಟ್ಟಿದರೂ ವಯೋಲೇಶನ್ ಅಂತಾ ನಕಲಿ ಕೇಸ್‌ಗಳನ್ನು ಹಾಕುವುದು ನಿಲ್ಲಿಸಬೇಕು












Click it and Unblock the Notifications