Bengaluru Bandh; ನಿಲ್ದಾಣದಿಂದ ಹೊರ ಬಾರದ ಖಾಸಗಿ ಬಸ್
ಬೆಂಗಳೂರು, ಸೆಪ್ಟೆಂಬರ್ 11; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ನಗರ ಬಂದ್‌ಗೆ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡಿದ್ದಾರೆ. ನಗರದಲ್ಲಿ ಕೆಲವು ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳು ಮಾತ್ರ ಸಂಚಾರ ನಡೆಸುತ್ತಿವೆ.
ಬೆಂಗಳೂರು ಬಂದ್‌ಗೆ ಸದ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು 72 ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ. ಆದರೆ ನಗರದಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಕೆ. ಆರ್. ಮಾರುಕಟ್ಟೆ ಬಳಿಯ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 250ಕ್ಕೂ ಅಧಿಕ ಬಸ್‌ಗಳನ್ನು ನಿಲ್ಲಿಸಲಾಗಿದೆ. ಬೇರೆ ಬೇರೆ ಪ್ರದೇಶಕ್ಕೆ ಹೋಗಬೇಕಿದ್ದ ಬಸ್‌ಗಳು ಬಂದ್ ಕರೆ ಹಿನ್ನಲೆಯಲ್ಲಿ ಸೋಮವಾರ ನಿಲ್ದಾಣದಿಂದ ಹೊರ ಬಂದಿಲ್ಲ.
ಕೊಳ್ಳೆಗಾಲ ಸೇರಿದಂತೆ ಹಲವು ಪ್ರದೇಶಗಳಿಗೆ ಕಲಾಸಿಪಾಳ್ಯದಿಂದ ಖಾಸಗಿ ಬಸ್ ಸಂಚಾರ ನಡೆಸುತ್ತದೆ. ಬಸ್‌ನಲ್ಲಿ ಸಂಚಾರ ನಡೆಸಲು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಆದರೆ ಬಸ್‌ಗಳು ಸಂಚಾರ ಆರಂಭಿಸಿಲ್ಲ. ಬಸ್‌ಗಳ ಚಾಲಕ, ನಿರ್ವಾಹಕರು ಸಹ ನಿಲ್ದಾಣದತ್ತ ಬಂದಿಲ್ಲ.
ಕರ್ನಾಟಕ ಸರ್ಕಾರದ 'ಶಕ್ತಿ' ಯೋಜನೆಯಿಂದ ನಷ್ಟವಾಗತ್ತಿದೆ ಎಂದು ಮೊದಲು ಧ್ವನಿ ಎತ್ತಿದ್ದು ಖಾಸಗಿ ಬಸ್ ಮಾಲೀಕರು. ಆದ್ದರಿಂದ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬಂದ್‌ಗೆ ಬಸ್ ಮಾಲೀಕರು ಬೆಂಬಲ ನೀಡಿದ್ದಾರೆ.
ಆಟೋಗಳ ಸಂಚಾರ ಕಡಿಮೆ; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್‌ಗೆ ಬೆಂಬಲ ನೀಡಿರುವ ಸಂಘಟನೆಗಳು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ 10 ಗಂಟೆಗೆ ಪ್ರತಿಭಟನಾ ಜಾಥಾ ಆರಂಭಿಸಲಿವೆ. ಫ್ರೀಡಂಪಾರ್ಕ್ ತನಕ ಈ ಜಾಥಾ ಸಾಗಲಿದೆ. ಆದ್ದರಿಂದ ಸಂಚಾರಿ ಪೊಲೀಸರು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದಾರೆ.
ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ರಸ್ತೆ ತಡೆದು ಆಟೋ ಚಾಲಕರು ಪ್ರತಿಭಟನೆ ಮಾಡಲು ಮುಂದಾದರು. ಆಗ ಪೊಲೀಸರು ಅಡ್ಡಿಪಡಿಸಿದರು. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ಸೂಚನೆ ನೀಡಿದರು. ಜಾಲಹಳ್ಳಿ ಕ್ರಾಸ್ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದಂತೆ ಎಚ್ಚರಿಸಿದರು.
ಬೆಂಗಳೂರು ನಗರದಲ್ಲಿ ಟ್ಯಾಕ್ಸಿ, ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ವಿಮಾನ ನಿಲ್ದಾಣದ ಟ್ಯಾಕ್ಸಿ ಬಿಟ್ಟು ನಗರದೊಳಕ್ಕೆ ಟ್ಯಾಕ್ಸಿ ಸಿಗುತ್ತಿಲ್ಲ. ಮೆಜೆಸ್ಟಿಕ್ ಸೇರಿದಂತೆ ಹಲವು ಬಸ್ ನಿಲ್ದಾಣದಿಂದ ಆಟೋ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ.
ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ ತನಕ ಪ್ರತಿಭಟನಾ ಜಾಥಾ ನಡೆಯುವ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು
* ಖೋಡೆ ಸರ್ಕಲ್‌ಗೆ ಬರುವ ವಾಹನಗಳು ಆರ್. ಆರ್. ಜಂಕ್ಷನ್ ಮೂಲಕ ಮಲ್ಲೇಶ್ವರಂ ಕಡೆಗೆ ಹೋಗುವುದು.
* ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಜಿ. ಟಿ. ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್-ಓಕಳಿಪುರಂ ಸುಜಾತ ಮೂಲಕ ಮುಂದೆ ಹೋಗುವುದು.
* ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು ಹಳೇ ಜೆಡಿಎಸ್ ಕಛೇರಿ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
* ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು ಪ್ಯಾಲೇಸ್ ರಸ್ತೆ-ಮಹಾರಾಣಿ ಅಂಡರ್‌ಪಾಸ್- ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು.
ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ರೈಲುಗಳ ಸಂಚಾರ ಎಂದಿನಂತೆ ಇದೆ. ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಕೃ. ರಾ. ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ/ ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ/ ಒಳ ವರ್ತುಲ ರಸ್ತೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ಓಡಿಸಲಾಗುತ್ತದೆ.












Click it and Unblock the Notifications